French Open 2023: ಇಗಾ ಸ್ವಿಯಾಟೆಕ್‌ಗೆ 3ನೇ ಫ್ರೆಂಚ್‌ ಕಿರೀಟ! ವಿಶ್ವ ನಂ.1 ಪಟ್ಟವೂ ಭದ್ರ

By Kannadaprabha NewsFirst Published Jun 11, 2023, 8:15 AM IST
Highlights

ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂ
ಫೈನಲ್‌ನಲ್ಲಿ ಚೆಕ್‌ ಗಣರಾಜ್ಯದ ಮುಕೋವಾ ವಿರುದ್ಧ ಜಯ
ಇಗಾಗೆ 3ನೇ ಬಾರಿಗೆ ಫ್ರೆಂಚ್‌ ಓಪನ್‌, ಒಟ್ಟಾರೆ 4ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ

ಪ್ಯಾರಿಸ್‌(ಜೂ.11): ನಿರೀಕ್ಷೆಯಂತೆ ಇಗಾ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಪೋಲೆಂಡ್‌ನ 22ರ ಟೆನಿಸ್‌ ತಾರೆ ಶ್ರೇಯಾಂಕ ರಹಿತ, ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.

ಫೈನಲ್‌ ಎನಿಸಿಕೊಳ್ಳಲು ಬೇಕಿದ್ದ ಎಲ್ಲಾ ಅಂಶಗಳನ್ನೂ ಪಂದ್ಯ ಒಳಗೊಂಡಿತ್ತು. 6-2ರಲ್ಲಿ ಸುಲಭವಾಗಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡ ಇಗಾ ಸ್ವಿಯಾಟೆಕ್‌ (Iga Swiatek), 2ನೇ ಸೆಟ್‌ನಲ್ಲಿ 3-0ಯಿಂದ ಮುಂದಿದ್ದರು. ಆ ನಂತರ ಮುಕೋವಾ ಪುಟಿದೆದ್ದು 7-5ರಲ್ಲಿ ಸೆಟ್‌ ಜಯಿಸಿದರು. ಕೊನೆ ಸೆಟ್‌ನಲ್ಲಿ ಆರಂಭಿಕ ಹಿನ್ನಡೆ ಪಡೆದ ಸ್ವಿಯಾಟೆಕ್‌ 4-4ರಲ್ಲಿ ಸಮಬಲ ಸಾಧಿಸಿದರು. ಪಂದ್ಯದಲ್ಲಿ ಉಳಿಯಲು ಸರ್ವ್ ಮಾಡಿದ ಮುಕೋವಾ, ಡಬಲ್‌ ಫಾಲ್ಟ್‌ ಮಾಡಿ ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಅವಕಾಶ ಕೈಚೆಲ್ಲಿದರು.

NOW SHOWING

Iga in Paris - Season 3 🇫🇷| pic.twitter.com/Nup1DwWHF9

— Roland-Garros (@rolandgarros)

4ನೇ ಪ್ರಶಸ್ತಿ: ಸತತ 2ನೇ ಬಾರಿ, ಒಟ್ಟಾರೆ 3ನೇ ಬಾರಿಗೆ ಫ್ರೆಂಚ್‌ ಓಪನ್‌ ಪ್ರಶಸ್ತಿ (French Open 2023) ಜಯಿಸಿದ ಸ್ವಿಯಾಟೆಕ್‌ಗೆ ಇದು ವೃತ್ತಿಬದುಕಿನ 4ನೇ ಗ್ರ್ಯಾನ್‌ಸ್ಲಾಂ ಟ್ರೋಫಿ. 2022ರ ಯುಎಸ್‌ ಓಪನ್‌ನಲ್ಲೂ ಸ್ವಿಯಾಟೆಕ್‌ ಚಾಂಪಿಯನ್‌ ಆಗಿದ್ದರು.

French Open: 7ನೇ ಫ್ರೆಂಚ್‌ ಓಪನ್‌ ಫೈನಲ್‌ಗೆ ಜೋಕೋವಿಚ್‌ ಲಗ್ಗೆ..!

ಈ ಗೆಲುವಿನ ಮೂಲಕ 2000 ರೇಟಿಂಗ್‌ ಅಂಕ ಸಂಪಾದಿಸಿರುವ ಸ್ವಿಯಾಟೆಕ್‌, ವಿಶ್ವ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದಾರೆ. 26 ವರ್ಷದ ಮುಕೋವಾಗೆ 1300 ರೇಟಿಂಗ್‌ ಅಂಕ ದೊರೆತಿದ್ದು, ಸೋಮವಾರ ಪ್ರಕಟಗೊಳ್ಳಲಿರುವ ನೂತನ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅವರು ಅಗ್ರ 15ರೊಳಗೆ ಪ್ರವೇಶಿಸುವ ನಿರೀಕ್ಷೆ ಇದೆ.

ಮೊದಲ ಸೆಟ್‌ನಲ್ಲಿ ಇಗಾ ಪ್ರಾಬಲ್ಯ: ತಮ್ಮ ಪ್ರಬಲವಾದ ಕ್ರಾಸ್‌ ಕೋರ್ಚ್‌ ಶಾಟ್‌ಗಳು, ಅತ್ಯಾಕರ್ಷಕ ಡ್ರಾಪ್‌ ಶಾಟಗಳ ಮೂಲಕ ಮುಕೋವಾ ಮೇಲೆ ಪ್ರಾಬಲ್ಯ ಮೆರೆದ ಸ್ವಿಯಾಟೆಕ್‌, 6-2 ಗೇಮ್‌ಗಳಲ್ಲಿ ಸುಲಭವಾಗಿ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

ಪುಟಿದೆದ್ದ ಮುಕೋವಾ: ಒಂದೂ ಸೆಟ್‌ ಸೋಲದೆ ಫೈನಲ್‌ಗೇರಿದ್ದ ಸ್ವಿಯಾಟೆಕ್‌, ಫೈನಲ್‌ನಲ್ಲಿ ಆ ದಾಖಲೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 2ನೇ ಸೆಟ್‌ನಲ್ಲಿ ಸ್ವಿಯಾಟೆಕ್‌ ಆರಂಭಿಕ ಮುನ್ನಡೆ ಪಡೆದರೂ ಮುಕೋವಾ ಹೋರಾಟ ಬಿಡಲಿಲ್ಲ. ಸ್ವಿಯಾಟೆಕ್‌ರ ಸವ್‌ರ್‍ ಮುರಿದು 5-4ರ ಮುನ್ನಡೆ ಪಡೆದ ಮುಕೋವಾ, 7-5ರಲ್ಲಿ ಸೆಟ್‌ ಗೆದ್ದರು. 5-6ರಿಂದ ಹಿಂದಿದ್ದಾಗ ಸ್ವಿಯಾಟೆಕ್‌ 3 ಬಾರಿ ಸೆಟ್‌ ಉಳಿಸಿಕೊಂಡು ಟೈ ಬ್ರೇಕರ್‌ಗೆ ಕೊಂಡೊಯ್ಯುವ ಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ.

ರೋಚಕ ಕೊನೆ ಸೆಟ್‌: ಅಂತಿಮ ಸೆಟ್‌ ಕೂಡ ಭಾರೀ ಪೈಪೋಟಿಯಿಂದ ಕೂಡಿತ್ತು. ಆರಂಭಿಕ ಹಿನ್ನಡೆ ಪಡೆದ ಹೊರತಾಗಿಯೂ ಸ್ವಿಯಾಟೆಕ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ, ಅತ್ಯುತ್ತಮವಾಗಿ ಒತ್ತಡ ನಿರ್ವಹಿಸಿ ಪಂದ್ಯ ಜಯಿಸಿದರು.

ಬಹುಮಾನ:

20.5 ಕೋಟಿ ರುಪಾಯಿ: ಚಾಂಪಿಯನ್‌ ಸ್ವಿಯಾಟೆಕ್‌ಗೆ 20.5 ಕೋಟಿ ರು. ಬಹುಮಾನ ಮೊತ್ತ ದೊರೆಯಿತು.

10.2 ಕೋಟಿ ರುಪಾಯಿ: ರನ್ನರ್‌-ಅಪ್‌ ಮುಕೋವಾ 10.2 ಕೋಟಿ ರು. ಬಹುಮಾನ ಮೊತ್ತ ಪಡೆದರು.

ಜಸ್ಟಿನ್‌ ಹೆನಿನ್‌ ದಾಖಲೆ ಸರಿಗಟ್ಟಿದ ಸ್ವಿಯಾಟೆಕ್‌

ಫ್ರೆಂಚ್‌ ಓಪ​ನ್‌​ ಮಹಿಳಾ ಸಿಂಗ​ಲ್ಸ್‌ನಲ್ಲಿ 2007ರ ಬಳಿ​ಕ ಯಾರೂ ಸತತ 2 ಬಾರಿ ಪ್ರಶಸ್ತಿ ಗೆದ್ದಿರಲಿಲ್ಲ. ಸ್ವಿಯಾಟೆಕ್‌ 16 ವರ್ಷ​ಗ​ಳಲ್ಲಿ ಮೊದಲ ಬಾರಿ ಸತತ 2 ಬಾರಿ ಚಾಂಪಿ​ಯನ್‌ ಆದ ಆಟ​ಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. ಇದರೊಂದಿಗೆ ಬೆಲ್ಜಿ​ಯಂನ ಜಸ್ಟಿನ್‌ ಹೆನಿನ್‌ರ ದಾಖಲೆ ಸರಿಗಟ್ಟಿದರು. ಹೆನಿನ್‌ 2005, 2006, 2007ರಲ್ಲಿ ಸತ​ತ​ವಾಗಿ ಟ್ರೋಫಿ ಗೆದ್ದಿದ್ದರು.

click me!