Mann Ki Baat ಮಿಥಾಲಿ ರಾಜ್ ಅನೇಕರಿಗೆ ಸ್ಪೂರ್ತಿಯ ಚಿಲುಮೆ ಎಂದ ಪ್ರಧಾನಿ ಮೋದಿ

By Suvarna NewsFirst Published Jun 27, 2022, 9:20 AM IST
Highlights

*‘ಮನ್‌ ಕಿ ಬಾತ್‌’ಕಾರ್ಯಕ್ರಮದಲ್ಲಿ ಭಾರತೀಯ ಕ್ರೀಡಾತಾರೆಯರನ್ನು ಶ್ಲಾಘಿಸಿದ ಮೋದಿ
* ಮಿಥಾಲಿ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ
* ಟೋಕಿಯೋ ಒಲಿಂಪಿಕ್ಸ್‌ ಬಳಿಕ ನೀರಜ್ ಚೋಪ್ರಾ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ
 

ನವದೆಹಲಿ(ಜೂ.27): ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಹಾಗೂ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ತಂದುಕೊಟ್ಟಿದ್ದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್‌ ಕಿ ಬಾತ್‌’ನಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಿಥಾಲಿ ರಾಜ್ (Mithali Raj) ಬಗ್ಗೆ ಮಾತನಾಡಿರುವ ಅವರು, ‘ಮಿಥಾಲಿ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ. ಅವರು ಭಾರತದ ಅತ್ಯಂತ ಶ್ರೇಷ್ಠ ಕ್ರಿಕೆಟರ್‌ ಆಗಿದ್ದರು. ಅವರ ನಿವೃತ್ತಿ ಎಷ್ಟೋ ಕ್ರೀಡಾಭಿಮಾನಿಗಳಿಗೆ ಭಾವನಾತ್ಮಕವಾಗಿ ನೋವು ತರಿಸಿದೆ. ಮಿಥಾಲಿ ಅದ್ಭುತ ಕ್ರಿಕೆಟರ್‌ ಮಾತ್ರವಲ್ಲ, ಸಾವಿರಾರು ಮಂದಿಗೆ ಸ್ಫೂರ್ತಿಯೂ ಆಗಿದ್ದರು’ ಎಂದು ಶ್ಲಾಘಿಸಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. 

ಮಿಥಾಲಿ ರಾಜ್‌ 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 39 ವರ್ಷದ ಮಿಥಾಲಿ 2000, 2005, 2009, 2013, 2017 ಹಾಗೂ 2022ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ ಮಿಥಾಲಿ ಕ್ರಿಕೆಟ್‌ ಇತಿಹಾಸದಲ್ಲಿ 6 ವಿಶ್ವಕಪ್‌ ಆಡಿದ 3ನೇ ಕ್ರಿಕೆಟರ್‌ ಎನಿಸಿಕೊಂಡಿದ್ದಾರೆ. ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌ ಮತ್ತು ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌ ಮಾತ್ರ ಈ ಸಾಧನೆ ಮಾಡಿದ್ದಾರೆ.

1999ರಲ್ಲಿ ಏಕದಿನ ಪಾದಾರ್ಪಣೆ ಮಾಡಿದ್ದ ಮಿಥಾಲಿ ಟೆಸ್ಟ್‌ ಆಡಿದ್ದು 2002ರಲ್ಲಿ. ಅದೇ ವರ್ಷ ತಮ್ಮ 19ನೇ ವಯಸ್ಸಿನಲ್ಲೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 214 ರನ್‌ ಸಿಡಿಸಿ ಅಂದಿನ ಕಾಲಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲೇ ಗರಿಷ್ಠ ರನ್‌ ಬಾರಿಸಿದ ಮಹಿಳಾ ಕ್ರಿಕೆಟರ್‌ ಎನಿಸಿಕೊಂಡಿದ್ದರು.

ಇನ್ನು, ನೀರಜ್‌ ಚೋಪ್ರಾ (Neeraj Chopra) ಇತ್ತೀಚೆಗೆ ಫಿನ್ಲೆಂಡ್‌ನಲ್ಲಿ ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದಿದ್ದನ್ನು ಪ್ರಸ್ತಾಪಿಸಿದ ಮೋದಿ, ‘ನೀರಜ್‌ ಮತ್ತೊಂದು ಪದಕ ಗೆಲ್ಲುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ದೇಶಕ್ಕೆ ಮತ್ತಷ್ಟು ಪದಕಗಳನ್ನು ಗೆಲ್ಲಿಸಿಕೊಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ತಾರಾ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್‌ ಬಳಿಕ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇತ್ತೀಚೆಗಷ್ಟೇ ಫಿನ್ಲೆಂಡ್‌ನಲ್ಲಿ ನಡೆದ ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಬಂಗಾರ ಗೆದ್ದರು.

ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ

ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತದ ಪರ ಐತಿಹಾಸಿಕ ಚಿನ್ನ ಗೆದ್ದ ಬಳಿಕ ನೀರಜ್‌ಗೆ ಇದು 2ನೇ ಚಿನ್ನ. ಇದಕ್ಕೂ ಮೊದಲು ಇದೇ ವಾರದ ಆರಂಭದಲ್ಲಿ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್‌ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಇಂದು 3ನೇ ವನಿತಾ ಟಿ20: ಭಾರತಕ್ಕೆ ಕ್ಲೀನ್‌ಸ್ವೀಪ್‌ ಗುರಿ

ಡಂಬುಲಾ: ಶ್ರೀಲಂಕಾ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಸೋಮವಾರ ಆತಿಥೇಯರ ವಿರುದ್ಧ 3ನೇ ಹಾಗೂ ಕೊನೆ ಪಂದ್ಯವಾಡಲಿದ್ದು, ಸರಣಿ ಕ್ಲೀನ್‌ಸ್ವೀಪ್‌ ಮಾಡಿಕೊಳ್ಳುವ ಕಾತರದಲ್ಲಿದೆ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ಬೌಲರ್‌ಗಳ ಕೈಚಳಕದಿಂದಾಗಿ 34 ರನ್‌ಗಳಿಂದ ಗೆದ್ದಿತ್ತು. ಬಳಿಕ ಶನಿವಾರ ನಡೆದ 2ನೇ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ 5 ವಿಕೆಟ್‌ ಗೆಲುವು ಸಾಧಿಸಿತ್ತು.

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ಸೂಕ್ತ ತಂಡ ಕಟ್ಟುವ ನಿರೀಕ್ಷೆಯಲ್ಲಿರುವ ತಂಡ ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
 

click me!