9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಕ್ಷಣಗಣನೆ
ಅಕ್ಟೋಬರ್ 07ರಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭ
ಬೆಂಗಳೂರು ಬುಲ್ಸ್ ತಂಡ ಕೂಡಿಕೊಂಡ ಸ್ಥಳೀಯ ಪ್ರತಿಭೆ ರಾಕೇಶ್ ಗೌಡ
ಬೆಂಗಳೂರು(ಸೆ.23): ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಎರಡನೇ ಬಾರಿಗೆ ಪಿಕೆಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಬೆಂಗಳೂರು ಬುಲ್ಸ್ ತಂಡವು ಕನ್ನಡಿಗ ರಾಕೇಶ್ ಗೌಡ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ. ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ.
ಅಕ್ಟೋಬರ್ 7 ಬೆಂಗಳೂರಿನ ಹೃದಯ ಭಾಗದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬ್ಬಡಿ ಲೀಗ್ ಟೂರ್ನಿಯು ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಒಳಾಂಗಣ ಸ್ಟೇಡಿಯಂಗೆ ಪ್ರೇಕ್ಷಕರಿಗೂ ಆಹ್ವಾನ ಸಿಕ್ಕಿರುವುದು ಕಬಡ್ಡಿ ಆಟದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ.
PKL9 ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಅ.7 ರಂದು ಬೆಂಗಳೂರಲ್ಲಿ ಅದ್ಧೂರಿ ಉದ್ಘಾಟನೆ!
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿ ನಡೆಯಲಿವೆ. ಅಕ್ಟೋಬರ್ 07ರಿಂದ ಡಿಸೆಂಬರ್ ಮಧ್ಯಭಾಗದ ವರೆಗೂ 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ನಡೆಯಲಿದ್ದು, 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಅಕ್ಟೋಬರ್ 7ರಂದು ನಡೆಯುವ 9ನೇ ಋತುವಿನ(Pro Kabaddi League) ಮೊದಲ ಪಂದ್ಯದಲ್ಲಿ 8ನೇ ಋತುವಿನ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಲಿದೆ. ನಂತರ ನಡೆಯುವ ಲೀಗ್‌ನ ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಬುಲ್ಸ್(Bengaluru Bulls) ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಯು.ಪಿ. ಯೋಧಾಸ್ ವಿರುದ್ಧ ಹೋರಾಟ ನಡೆಸಲಿದೆ.
ಬೆಂಗಳೂರು ಬುಲ್ಸ್ ಪಡೆ ಕೂಡಿಕೊಂಡ ಆಲ್ರೌಂಡರ್ ರಣ್ ಸಿಂಗ್
ಕಳೆದ ತಿಂಗಳು ನಡೆದ ಪ್ರೊ ಕಬಡ್ಡಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಅನುಭವಿ ಆಲ್ರೌಂಡರ್ ರಣ್ ಸಿಂಗ್ ಅವರನ್ನು ಬೆಂಗಳೂರು ಬುಲ್ಸ್ ತಂಡವು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ರಣ್ ಸಿಂಗ್, ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದು, ಬೆಂಗಳೂರು ಗೂಳಿಗಳ ಜತೆ ಅಭ್ಯಾಸ ಆರಂಭಿಸಿದ್ದಾರೆ.
ಯಾರು ಈ ರಣ್ ಸಿಂಗ್..?
ಚೊಚ್ಚಲ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ರಣ್ ಸಿಂಗ್ ಡಿಫೆಂಡರ್ ಆಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಕಣಕ್ಕಿಳಿದಿದ್ದರು. ಚೊಚ್ಚಲ ಆವೃತ್ತಿಯ ಪಿಕೆಎಲ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಚಾಂಪಿಯನ್ ಆಗುವಲ್ಲಿ ರಣ್ ಸಿಂಗ್ ತನ್ನದೇ ಆದ ಪಾತ್ರ ನಿಭಾಯಿಸಿದ್ದರು. ರಣ್ ಸಿಂಗ್ 4 ವರ್ಷಗಳ ಕಾಲ ಜೈಪುರ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 5ನೇ ಆವೃತ್ತಿಯ ಪಿಕೆಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು 43 ಲಕ್ಷ ರುಪಾಯಿ ನೀಡಿ ರಣ್ ಸಿಂಗ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಬೆಂಗಾಲ್ ತಂಡದ ಪರ ಮೊದಲ ಆವೃತ್ತಿಯಲ್ಲೇ 23 ಪಂದ್ಯಗಳಿಂದ ರಣ್ ಸಿಂಗ್64 ಅಂಕ ಗಳಿಸಿದ್ದರು. ಇನ್ನು ಏಳನೇ ಆವೃತ್ತಿಯಲ್ಲಿ ರಣ್ ಸಿಂಗ್ ಅವರನ್ನು 55 ಲಕ್ಷ ರುಪಾಯಿ ನೀಡಿ ತಮಿಳ್ ತಲೈವಾಸ್ ತಂಡವು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ರಣ್ ಸಿಂಗ್ ಇದುವರೆಗೂ ನೂರಕ್ಕೂ ಹೆಚ್ಚು ಪಿಕೆಎಲ್ ಪಂದ್ಯಗಳನ್ನಾಡಿ 220 ಟ್ಯಾಕಲ್ ಪಾಯಿಂಟ್ ಗಳಿಸಿದ್ದಾರೆ. ಡಿಫೆಂಡಿಂಗ್‌ನಲ್ಲಷ್ಟೇ ಅಲ್ಲದೇ ರೈಡಿಂಗ್ ವಿಭಾಗದಲ್ಲೂ ರಣ್ ಸಿಂಗ್ ನೂರಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದು, ಅನುಭವಿ ಆಟಗಾರ ಬುಲ್ಸ್ ಪಡೆಯನ್ನು ಮತ್ತಷ್ಟು ಬಲಿಷ್ಠ ಮಾಡುವ ಸಾಧ್ಯತೆಯಿದೆ.