ICC T20 World Cup ಈ ಇಬ್ಬರು ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿರಬೇಕು: ಆ್ಯಡಂ ಗಿಲ್‌ಕ್ರಿಸ್ಟ್‌

By Naveen KodaseFirst Published Sep 23, 2022, 4:31 PM IST
Highlights

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ
* ಇಬ್ಬರೂ ವಿಕೆಟ್‌ ಕೀಪರ್‌ಗಳು ಭಾರತ ತಂಡದಲ್ಲಿರಬೇಕು ಎಂದ ಗಿಲ್ಲಿ
* ಮೊದಲ ಟಿ20 ಪಂದ್ಯದಲ್ಲಿ ಬೆಂಚ್ ಕಾಯಿಸಿದ ರಿಷಭ್ ಪಂತ್

ನಾಗ್ಪುರ(ಸೆ.23): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಅಭ್ಯಾಸದ ಸರಣಿ ಎನಿಸಿಕೊಂಡಿರುವ ಈ ಚುಟುಕು ಕ್ರಿಕೆಟ್ ಸರಣಿಯು ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಮತ್ತಷ್ಟು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ಇನ್ನು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ವಿಕೆಟ್‌ ಕೀಪರ್ ಬ್ಯಾಟರ್‌ಗಳಾದ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್, ಇಬ್ಬರೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ, ಇಬ್ಬರು ಆಟಗಾರರ ಪೈಕಿ ಓರ್ವ ವಿಕೆಟ್ ಕೀಪರ್ ಬ್ಯಾಟರ್ ಮಾತ್ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಹೊರಗಿಟ್ಟು ದಿನೇಶ್ ಕಾರ್ತಿಕ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸಿತ್ತು. ಆದರೆ 14ನೇ ಓವರ್‌ನಲ್ಲಿ ನಾಲ್ಕನೇ ವಿಕೆಟ್ ಪತನವಾದಾಗ ದಿನೇಶ್ ಕಾರ್ತಿಕ್ ಅವರನ್ನು ಕ್ರೀಸ್‌ಗಿಳಿಸದೇ ಹೋದದ್ದು ಕೂಡಾ ಕ್ರಿಕೆಟ್‌ ಪಂಡಿತರ ಟೀಕೆಗೆ ಗುರಿಯಾಗಿತ್ತು. ಇದೀಗ ಟೀಂ ಇಂಡಿಯಾ ಆಯ್ಕೆಯ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್, ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರೂ ಭಾರತ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎದುರಾಳಿ ತಂಡದ ಬೌಲಿಂಗ್ ಪಡೆಯನ್ನು ನಿರ್ಭಯವಾಗಿ ಎದುರಿಸುವ ರಿಷಭ್ ಪಂತ್ ಅವರ ಕ್ಷಮತೆ ಅನನ್ಯವಾದದ್ದು. ನನ್ನ ಪ್ರಕಾರ ಅವರು ಭಾರತ ಆಡುವ ಹನ್ನೊಂದರ ಬಳಗದಲ್ಲಿ ಇರಲೇಬೇಕು. ಕಾರ್ತಿಕ್ ಹಾಗೂ ಪಂತ್ ಇಬ್ಬರೂ ಜತೆಯಾಗಿ ಆಡಬೇಕು. ಅದರಲ್ಲೂ ರಿಷಭ್ ಪಂತ್ ಅವರಂತೂ ತಂಡದಲ್ಲೇ ಇರಲೇಬೇಕು ಎಂದು ಐಸಿಸಿ ವೆಬ್‌ಸೈಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗಿಲ್ಲಿಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರೂ ಆಟಗಾರರು ತಂಡದೊಳಗೆ ಆಡುತ್ತಾರೆಯೇ ಎನ್ನುವ ಕುತೂಹಲ ಜೋರಾಗಿದೆ. ನನ್ನ ಪ್ರಕಾರ ಅವರಿಬ್ಬರು ಆಡಲಿದ್ದಾರೆ. ದಿನೇಶ್ ಕಾರ್ತಿಕ್‌ ಯಾವುದೇ ಕ್ರಮಾಂಕದಲ್ಲಿ ಆಡಲು ಹೊಂದಿಕೊಳ್ಳಲಿದ್ದಾರೆ. ಅವರು ಅಗ್ರಕ್ರಮಾಂಕದಲ್ಲಿ, ಮಧ್ಯಮ ಕ್ರಮಾಂಕದಲ್ಲಿ ಹಾಗೂ ಫಿನಿಶರ್ ಪಾತ್ರವನ್ನೂ ಸಹ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರೀಗ ಒಳ್ಳೆಯ ಲಯದಲ್ಲಿದ್ದಾರೆ ಎಂದು ಗಿಲ್ಲಿ ಹೇಳಿದ್ದಾರೆ.

Ind vs Aus: ದಿನೇಶ್ ಕಾರ್ತಿಕ್‌ ಕುತ್ತಿಗೆ ಕೈ ಹಾಕಿದ ರೋಹಿತ್ ಶರ್ಮಾ..! ವಿಡಿಯೋ ವೈರಲ್

ಎಡಗೈ ಬ್ಯಾಟರ್ ರಿಷಭ್‌ ಪಂತ್‌, ಇದುವರೆಗೂ ಭಾರತ ಕ್ರಿಕೆಟ್ ತಂಡದ ಪರ 58 ಟಿ20 ಪಂದ್ಯಗಳನ್ನಾಡಿ 23.94ರ ಬ್ಯಾಟಿಂಗ್ ಸರಾಸರಿಯಲ್ಲಿ 934 ರನ್ ಬಾರಿಸಿದ್ದಾರೆ. ಪಂತ್ ಅವರಿಗೆ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಟಿ20 ಕ್ರಿಕೆಟ್‌ನಲ್ಲಿ ದಕ್ಕಿಲ್ಲ. 

ಇನ್ನೊಂದೆಡೆ ದಿನೇಶ್ ಕಾರ್ತಿಕ್‌, ಕೆಲ ತಿಂಗಳುಗಳ ಹಿಂದಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅದ್ಭುತ ಮ್ಯಾಚ್‌ ಫಿನಿಶರ್ ಪಾತ್ರವನ್ನು ನಿಭಾಯಿಸುವ ಮೂಲಕ ಟೀಂ ಇಂಡಿಯಾಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

click me!