
ಬ್ಯಾಂಕಾಕ್: ಈಕೆಯ ಕಥೆ ನಿಮಗೆ ಸ್ಫೂರ್ತಿ ತುಂಬದಿದ್ದರೆ, ಬಹುಶಃ ಬೇರ್ಯಾವುದೂ ಸ್ಫೂರ್ತಿ ನೀಡದೆ ಇರಬಹುದು. ಸಾಧಿಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಭಾರತದ ಪ್ಯಾರಾ ಆರ್ಚರಿ ಪಟು, ಎರಡು ಕೈಗಳಲ್ಲಿಲ್ಲದ ಶೀತಲ್ ದೇವಿ ತೋರಿಸಿಕೊಟ್ಟಿದ್ದರು. ಈಗ ಎರಡು ಕೈ, ಎರಡು ಕಾಲುಗಳಿಲ್ಲದ ಪಾಯಲ್ ನಾಗ್, ಶೀತಲ್‌ರನ್ನೇ ಸೋಲಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.
ಜಮ್ಮು-ಕಾಶ್ಮೀರದ 19 ವರ್ಷದ, ಎರಡೂ ಕೈಗಳಿಲ್ಲದ ಶೀತಲ್ ದೇವಿ ಪ್ಯಾರಾಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಪ್ಯಾರಾ ಗೇಮ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಪದಕ ಸಾಧನೆ ಮಾಡಿರುವ ವಿಶೇಷ ಪ್ರತಿಭೆ. ಈಗ ಭಾರತದಲ್ಲಿ ಮತ್ತೊಂದು ಅತಿ ವಿಶೇಷ ಪ್ರತಿಭೆ ಅನಾವರಣಗೊಂಡಿದೆ.
ಬ್ಯಾಂಕಾಕ್‌ನಲ್ಲಿ ನಡೆದ ಚೊಚ್ಚಲ ಅವೃತ್ತಿಯ ವಿಶ್ವ ಪ್ಯಾರಾ ಆರ್ಚರಿ ಸೀರಿಸ್‌ನ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಶೀತಲ್ ವಿರುದ್ಧ ಪಾಯಲ್ 139-136 ಅಂಕಗಳಿಂದ ಗೆದ್ದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಶೀತಲ್‌ಗಿಂತ 20 ಅಂಕ ಕಡಿಮೆ (678-698) ಅಂಕ ಗಳಿಸಿದ್ದ ಪಾಯಲ್, ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿದ್ದಾರೆ. ಇದೇ ಟೂರ್ನಿಯಲ್ಲಿ ಶೀತಲ್-ಪಾಯಲ್ ಜೊತೆಗೂಡಿ ಮಹಿಳಾ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಅಂದಹಾಗೆ, 18ರ ಪಾಯಲ್‌ಗೆ ಇದು ಶೀತಲ್ ವಿರುದ್ಧ 2ನೇ ಗೆಲುವು. 2025ರ ರಾಷ್ಟ್ರೀಯ ಟೂರ್ನಿಯಲ್ಲಿ ಶೀತಲ್‌ರನ್ನು ಪಾಯಲ್ ಸೋಲಿಸಿದ್ದರು.
ಒಡಿಶಾದ ಪಾಯಲ್ ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಹುಟ್ಟಿದ್ದರು. ಅವರ ತಂದೆ ದಿನಗೂಲಿ ಗಾರೆ ಕೆಲಸದವರು. ಪಾಯಲ್‌ಗೆ 8 ವರ್ಷವಿದ್ದಾಗ ಕಾಮಗಾರಿ ನಡೆಯುತ್ತಿದ್ದ ಮನೆಯೊಂದರ ಟೆರೇಸ್‌ನ ನಿಂತಿದ್ದ ನೀರಿನಲ್ಲಿ ಆಡುತ್ತಿದ್ದಾಗ ವಿದ್ಯುತ್ ಅವಘಡಕ್ಕೆ ತುತ್ತಾಗಿದ್ದರು. ಜೀವಕ್ಕೆ ಅಪಾಯವಿದ್ದ ಕಾರಣ ವೈದ್ಯರು ಪಾಯಲ್‌ರ 2 ಕೈ, 2 ಕಾಲುಗಳನ್ನು ಕತ್ತರಿಸಿ ತೆಗೆದಿದ್ದರು. ಇದಾದ ಬಳಿಕ ಪಾಯಲ್‌ರನ್ನು ಪೋಷಕರಾದ ಬಿಜಯ್ ಮತ್ತು ಜನತಾ ಅನಾಥಾಶ್ರಮಕ್ಕೆ ಸೇರಿಸಿದ್ದರು.
ತನ್ನೆರಡೂ ಕೈಕಾಲುಗಳನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ಪಾಯಲ್ ಬಗ್ಗೆ ನೆರೆಹೊರೆಯವರು, ಕುಟುಂಬಸ್ಥರು ಚುಚ್ಚು ಮಾತುಗಳನ್ನಾಡಿದ್ದೇ ಹೆಚ್ಚು. ‘ಅವಳಿಗೆ ನಡೆದಾಡಲು, ತಿನ್ನಲು ಸಾಧ್ಯವಿಲ್ಲ. ಇದಕ್ಕಿಂತ ಅವಳಿಗೆ ವಿಷ ಕೊಡುವುದೇ ಉತ್ತಮ’ ಎಂದು ಕುಟುಂಬಸ್ಥರು ಪಾಯಲ್ ಪೋಷಕರಿಗೆ ಹೇಳಿದ್ದರಂತೆ.
ಅನಾಥಾಶ್ರಮದಲ್ಲಿ ಪಾಯಲ್‌ಗೆ ಬಾಯಲ್ಲಿ ಪೇಟಿಂಗ್ ಮಾಡುವುದನ್ನು ಕಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಯಲ್ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರ ಭಾವಚಿತ್ರವನ್ನು ಬಿಡಿಸಿಕೊಟ್ಟಿದ್ದರು. ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ಖ್ಯಾತ ಆರ್ಚರಿ ಕೋಚ್ ಕುಲ್ದೀಪ್ ವೆದ್ವಾನ್‌ರ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಆಕೆಯ ಜೀವನ ಬದಲಾಯಿತು.
ಪಾಯಲ್‌ರನ್ನು ತಮ್ಮ ಅಕಾಡೆಮಿ ಕರೆತಂದ ಕೋಚ್ ಕುಲ್ದೀಪ್, ಅವರಿಗಾಗಿ ವಿಶೇಷ ವಿನ್ಯಾಸದ ಕೃತಕ ಕಾಲುಗಳನ್ನು ಮಾಡಿಸಿ ಅಭ್ಯಾಸ ಆರಂಭಿಸಿದ್ದರು. ಪಾಯಲ್‌ಗಾಗಿ ವಿಶೇಷ ವಿನ್ಯಾಸದ ಬಿಲ್ಲು (ಬೋ) ಸಹ ಮಾಡಿಸಲಾಯಿತು. ಕೃತಕ ಕಾಲಿನ ಸಹಾಯದಿಂದ ಬಾಣ ಬಿಡುವುದನ್ನು ಆರಂಭಿಸಲು ಪಾಯಲ್‌ಗೆ 3 ತಿಂಗಳು ಬೇಕಾಯಿತು. ಆಕೆಯ ಬಿಲ್ಲಿಗೆ ಬಾಣಗಳನ್ನು ಬೇರೆಯವರು ಹೂಡುತ್ತಾರೆ. ಕೃತಕ ಕಾಲು, ಭುಜದ ಸಹಾಯದಿಂದ ಪಾಯಲ್ ಬಾಣವನ್ನು ಗುರಿಯತ್ತ ಕಳಿಸುತ್ತಾರೆ.
ಪ್ಯಾರಾ ಅಥ್ಲೀಟ್‌ಗಳ ಸಾಮರ್ಥ್ಯ ಗುರುತಿಸಿ ಅವರನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುವ ಖ್ಯಾತಿ ಕುಲ್ದೀಪ್ ವೆದ್ವಾನ್‌ರದ್ದು. ಈ ಹಿಂದೆ ಶೀತಲ್ ದೇವಿಗೆ ತರಬೇತಿ ನಿಡಿ 2025ರಲ್ಲಿ ಆಕೆ ವಿಶ್ವ, ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಆಗಿಸಲು ಶ್ರಮಿಸಿದ್ದರು ಬಳಿಕ ಶೀತಲ್‌ರಂತೆ ಪಾಯಲ್‌ರನ್ನೂ ಚಾಂಪಿಯನ್ ಮಾಡುತ್ತೇನೆ ಎಂಬ ಪ್ರತಿಜ್ಞೆಗೈದು ಇದೀಗ ಆಕೆಯನ್ನೂ ವಿಶ್ವಚಾಂಪಿಯನ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.