
ಲಂಡನ್[ಜು.19]: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲು, 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಕಣ್ತೆರಿಸಿದೆ. ಮಂಗಳವಾರ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್‌ಗೂ ಮುನ್ನ ತಂಡ ಸಮತೋಲನ ಕಂಡುಕೊಳ್ಳಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ‘ಈ ರೀತಿಯ ಪಂದ್ಯಗಳು ವಿಶ್ವಕಪ್‌ಗೂ ಮುನ್ನ ನಾವು ಯಾವ ಕ್ಷೇತ್ರದಲ್ಲಿ ಸುಧಾರಿಸಬೇಕು ಎನ್ನುವುದನ್ನು ತೋರಿಸುತ್ತದೆ. ತಂಡದಲ್ಲಿ ಸಮತೋಲನದ ಕೊರತೆ ಇದೆ. ಆದಷ್ಟು ಬೇಗ ಸಮತೋಲನ ಕಂಡುಕೊಳ್ಳಬೇಕಿದೆ. ಜತೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕಿದೆ. ಸಾಂಘಿಕ ಹೋರಾಟ ಅಗತ್ಯವಿದೆ’ ಎಂದರು. ಮಣಿಕಟ್ಟು ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಪ್ರವಾಸದ ಆರಂಭದಲ್ಲಿ ಕಂಡ ಯಶಸ್ಸು, ತಂಡ ಸ್ಪಿನ್ನರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುವಂತೆ ಮಾಡಿತು. ಈ ಬಗ್ಗೆ ಮಾತನಾಡಿದ ಕೊಹ್ಲಿ, ‘ನಾವು ಒಂದೇ ವಿಭಾಗದ ಮೇಲೆ ಹೆಚ್ಚು ಅವಲಂಬಿತಗೊಳ್ಳುವಂತಿಲ್ಲ. ಎಲ್ಲಾ ವಿಭಾಗಗಳಲ್ಲೂ ನಾವು ಉತ್ತಮ ಪ್ರದರ್ಶನ ತೋರಬೇಕಿದೆ’ ಎಂದರು.
ತಂಡದಲ್ಲಿ ಮಾಡಿದ ಬದಲಾವಣೆಗಳನ್ನು ಸಮರ್ಥಿಸಿಕೊಂಡ ವಿರಾಟ್, ‘ಕಾರ್ತಿಕ್ ಉತ್ತಮವಾಗಿ ಆಡಿದರು. ಒಳ್ಳೆಯ ಆರಂಭ ಪಡೆದ ಬಳಿಕ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ ಬದಲಾವಣೆಯ ಬಗ್ಗೆ ಯಾವುದೇ ಬೇಸರವಿಲ್ಲ. ಶಾರ್ದೂಲ್‌ಗೆ ಅವಕಾಶ ನೀಡಬೇಕಿದೆ. ಇನ್ನು ಭುವನೇಶ್ವರ್ ತಂಡಕ್ಕೆ ವಾಪಸಾಗಬೇಕು ಎನ್ನುವುದು ನಮ್ಮ ಲೆಕ್ಕಾಚಾರಗಳಲ್ಲಿ ಒಂದಾಗಿತ್ತು. ತಂಡದಲ್ಲಿ ಆದ ಬದಲಾವಣೆಯಿಂದ ಯಶಸ್ಸು ಸಿಗದಿದ್ದಾಗ ಟೀಕೆ ಎದುರಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಹೋಗಿದೆ’ ಎಂದು ಕೊಹ್ಲಿ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.