
ಪ್ಯಾರಿಸ್(ಜೂ.08]: ವಿಶ್ವ ನಂ.1, ದಾಖಲೆಯ 10 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್‌ನಲ್ಲಿ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ಅರ್ಜೆಂಟೀನಾದ ಡಿಗೊ ಶ್ವಾರ್ಟ್ಜ್‌ಮನ್ ವಿರುದ್ಧ ಆರಂಭಗೊಂಡಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮೊದಲ ಸೆಟ್ ಸೋತಿದ್ದ ನಡಾಲ್, 2ನೇ ಸೆಟ್‌ನಲ್ಲಿ 5-3 ಮುನ್ನಡೆ ಸಾಧಿಸಿದ್ದರು. ಗುರುವಾರ ಪಂದ್ಯ ಮುಂದುವರಿಯಿತು. ನಡಾಲ್ ತಮ್ಮ ಎಂದಿನ ಲಯದಲ್ಲಿದ್ದರು. ಅರ್ಜೆಂಟೀನಾ ಆಟಗಾರನ ವಿರುದ್ಧ ಪ್ರಾಬಲ್ಯ ಮೆರೆದ ಸ್ಪೇನ್ ಸೇನಾನಿ, 4-6, 6-3, 6-2, 6-2 ಸೆಟ್‌ಗಳಲ್ಲಿ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು. 11ನೇ ಬಾರಿಗೆ ಸೆಮೀಸ್‌ಗೇರುವ ಮೂಲಕ, ಗ್ರ್ಯಾಂಡ್‌ಸ್ಲಾಂ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಸೆಮೀಸ್‌ಗೇರಿದ 3ನೇ ಆಟಗಾರ ಎನ್ನುವ ದಾಖಲೆಗೆ ಪಾತ್ರರಾದರು. ಯುಎಸ್ ಓಪನ್‌ನಲ್ಲಿ ಜಿಮ್ಮಿ ಕಾನ್ಸರ್ಸ್ ಹಾಗೂ ವಿಂಬಲ್ಡನ್, ಆಸ್ಟ್ರೇಲಿಯನ್ ಓಪನ್‌ನಲ್ಲಿ ರೋಜರ್ ಫೆಡರರ್ ಈ ಸಾಧನೆ ಮಾಡಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಯುಎಸ್ ಓಪನ್ ಚಾಂಪಿಯನ್ ಅರ್ಜೆಂಟೀನಾದ ಡೆಲ್ ಪೊಟ್ರೊ, ಮತ್ತೊಬ್ಬ ಮಾಜಿ ಯುಎಸ್ ಓಪನ್ ಚಾಂಪಿಯನ್ ಕ್ರೊವೇಷಿಯಾದ ಮರಿನ್ ಸಿಲಿಚ್ ವಿರುದ್ಧ 7-6, 5-7, 6-3, 7-5 ಸೆಟ್‌ಗಳಲ್ಲಿ ಜಯಿಸಿ, 9 ವರ್ಷಗಳ ಬಳಿಕ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಗಾಯದಿಂದ ಬಳಲಿದ್ದ ಡೆಲ್ ಪೊಟ್ರೊ 2012ರ ಬಳಿಕ ಟೂರ್ನಿಯಲ್ಲಿ ಆಡುತ್ತಿದ್ದು, ನಡಾಲ್‌ಗೆ ಸೆಮೀಸ್‌ನಲ್ಲಿ ಆಘಾತ ನೀಡಲು ಕಾತರಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.