* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ಮುರಳಿ ಶ್ರೀಶಂಕರ್
* ಲಾಂಗ್ ಜಂಪ್ ಫೈನಲ್‌ನಲ್ಲಿ 7.96 ಮೀಟರ್ ದೂರ ಜಿಗಿದು ಏಳನೇ ಸ್ಥಾನ ಪಡೆದ ಮುರುಳಿ ಶ್ರೀಶಂಕರ್
* ಚೀನಾದ ಜಿನಾನ್ ವ್ಯಾಂಗ್ 8.36 ಮೀಟರ್ ದೂರ ಜಿಗಿದು ಚಿನ್ನದ ಪದಕ ಜಯಿಸಿದರು
ಯ್ಯೂಜೀನ್(ಜು.17): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪುರುಷ ಲಾಂಗ್ ಜಂಪ್ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮುರಳಿ ಶ್ರೀಶಂಕರ್, ಪ್ರಶಸ್ತಿ ಸುತ್ತಿನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾನುವಾರವಾದ ಇಂದು ನಡೆದ ಲಾಂಗ್ ಜಂಪ್ ಫೈನಲ್‌ನಲ್ಲಿ ಮುರುಳಿ ಶ್ರೀಶಂಕರ್, 7.96 ಮೀಟರ್ ದೂರ ಜಿಗಿದು ಏಳನೇ ಸ್ಥಾನ ಪಡೆದರು. 12 ಅಥ್ಲೀಟ್‌ಗಳು ಪಾಲ್ಗೊಂಡಿದ್ದ ಲಾಂಗ್ ಜಂಪ್ ಫೈನಲ್‌ನಲ್ಲಿ 23 ವರ್ಷದ ಕೇರಳದ ಪಾಲಕ್ಕಾಡ್ ಮೂಲದ ಮುರುಳಿ 7ನೇ ಸ್ಥಾನ ಪಡೆದರು. ಚೀನಾದ ಜಿನಾನ್ ವ್ಯಾಂಗ್ 8.36 ಮೀಟರ್ ದೂರ ಜಿಗಿದು ಚಿನ್ನದ ಪದಕ ಜಯಿಸಿದರೇ, ಗ್ರೀಸ್‌ನ ಅಥ್ಲೀಟ್ 8.32 ಮೀಟರ್ ದೂರ ಜಿಗಿದು ಬೆಳ್ಳಿ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಸಿಮೊನ್ ಎಹಮ್ಮರ್ 8.16 ಮೀಟರ್ ದೂರ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಇದಕ್ಕೂ ಮೊದಲು ಶುಕ್ರವಾರ ಆರಂಭಗೊಂಡ ಟೂರ್ನಿಯಲ್ಲಿ ಮುರಳಿ ಶ್ರೀಶಂಕರ್ ಅರ್ಹತಾ ಸುತ್ತಿನಲ್ಲಿ 8 ಮೀಟರ್ ದೂರಕ್ಕೆ ಜಿಗಿದು ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಅಂಜು ಬಾಬಿ ಜಾರ್ಜ್ 2003ರ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದರು. ಅಂಜು ಬಾಬಿ ಜಾರ್ಜ್ ಅವರು ಗೆದ್ದಿರುವ ಕಂಚು ವಿಶ್ವ ಅಥ್ಲೆಟಿಕ್ಸ್ ಕೂಟದ ಇತಿಹಾಸದಲ್ಲಿ ಭಾರತದ ಏಕೈಕ ಪದಕ ಎನಿಸಿಕೊಂಡಿದೆ. ಇನ್ನು, ಮುರಳಿ ಜೊತೆ ಸ್ಪರ್ಧಿಸಿದ್ದ ಜೆಸ್ವಿನ್ ಆಲ್ಡ್‌ರಿನ್(7.79 ಮೀ.), ಮುಹಮ್ಮದ್ ಅನೀಸ್ ಯಹ್ಯಾ(7.73 ಮೀ.) ಕ್ರಮವಾಗಿ 20 ಮತ್ತು 23ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಲು ವಿಫಲವಾಗಿದ್ದರು.
ಇದೇ ವೇಳೆ ಪುರುಷರ 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಅವಿನಾಶ್ ಸಾಬ್ಳೆ ಕೂಡಾ ಫೈನಲ್ ತಲುಪಿದ್ದಾರೆ. 2019ರಲ್ಲೂ ಫೈನಲ್ ಪ್ರವೇಶಿಸಿದ್ದ ಅವರು ಈ ಬಾರಿ ಅರ್ಹತಾ ಸುತ್ತಲ್ಲಿ 8 ನಿಮಿಷ 18.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಆದರೆ 20 ಕಿ.ಮೀ. ವೇಗ ನಡಿಗೆ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಂದೀಪ್ ಕುಮಾರ್, ಪ್ರಿಯಾಂಕಾ ಗೋಸ್ವಾಮಿ ಪದಕ ಗೆಲ್ಲಲು ವಿಫಲರಾದರು. ಸಂದೀಪ್ 1 ಗಂಟೆ 31.58 ನಿಮಿಷಗಳಲ್ಲಿ ಕ್ರಮಿಸಿ 40ನೇ ಸ್ಥಾನ ಪಡೆದರೆ, ಪ್ರಿಯಾಂಕಾ (1 ಗಂಟೆ 39:42 ನಿ) 34ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಗಾಯಾಳು ತೂರ್ ಕೂಟದಿಂದ ಔಟ್
ಏಷ್ಯನ್ ದಾಖಲೆ ವೀರ ಭಾರತದ ಶಾಟ್ ಪುಟ್ ಪಟು ತೇಜಿಂದರ್‌ಪಾಲ್ ಸಿಂಗ್ ತೂರ್ ಗಾಯಗೊಂಡು ಕೂಟದಿಂದ ಹೊರಬಿದ್ದಿದ್ದಾರೆ. 4 ದಿನಗಳ ಹಿಂದೆ ಅಭ್ಯಾಸದ ವೇಳೆ ಅವರು ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಶುಕ್ರವಾರ ಸ್ಪರ್ಧೆಯ ಆರಂಭಕ್ಕೂ ಮುನ್ನ ಕೆಲ ಕಾಲ ಅಭ್ಯಾಸ ನಡೆಸಿದರಾದರೂ ನೋವಿನಿಂದಾಗಿ ಆಡಲು ಸಾಧ್ಯವಿಲ್ಲದೇ ಕೂಟ ತೊರೆಯಲು ನಿರ್ಧರಿಸಿದರು.
ಕಿರಿಯರ ರಾಷ್ಟ್ರೀಯ ಈಜು: ರಾಜ್ಯದ ರಿಧಿಮಾ ದಾಖಲೆ
ಭುವನೇಶ್ವರ: ಕರ್ನಾಟಕದ ಈಜುಪಟು ರಿಧಿಮಾ ವೀರೇಂದ್ರ ಕುಮಾರ್ ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ 100 ಮೀ. ಬ್ಯಾಕ್‌ಸ್ಟೊ್ರೕಕ್ ಸ್ಪರ್ಧೆಯಲ್ಲಿ ಹೊಸ ಕೂಟ ದಾಖಲೆ ಬರೆದಿದ್ದಾರೆ. ಬೆಂಗಳೂರಿನ ರಿಧಿಮಾ(1:04:96), ಒಲಿಂಪಿಯನ್ ಮಾನಾ ಪಟೇಲ್ 2015ರಲ್ಲಿ 1:05:00ರಲ್ಲಿ ಗುರಿ ತಲುಪಿ ಬರೆದಿದ್ದ ದಾಖಲೆಯನ್ನು ಮುರಿದರು. ರಿಧಿಮಾ ಚಿನ್ನ ಗೆದ್ದರೆ, ಕರ್ನಾಟಕದ ಮತ್ತೊಬ್ಬ ಈಜುಪಟು ನೀನಾ ವೆಂಕಟೇಶ್ ಕಂಚು ಜಯಿಸಿದರು.
ಶೂಟಿಂಗ್ ವಿಶ್ವಕಪ್: ಚಿನ್ನಕ್ಕೆ ಮುತ್ತಿಟ್ಟ ಐಶ್ವರಿ ಪ್ರತಾಪ್
ಚಾಂಗ್‌ವೊನ್(ದ.ಕೊರಿಯಾ): ಭಾರತದ ಯುವ ಶೂಟರ್ ಐಶ್ವರಿ ಪ್ರತಾಪ್ ತೋಮರ್ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಶನಿವಾರ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಫೈನಲ್‌ನಲ್ಲಿ 2018ರ ಯುವ ಒಲಿಂಪಿಕ್ಸ್ ಚಾಂಪಿಯನ್ ಹಂಗೇರಿಯ ಜಲಾನ್ ಪೆಕ್ಲಾರ್‌ರನ್ನು 16-12 ಅಂತರದಲ್ಲಿ ಹಿಂದಿಕ್ಕಿ ಬಂಗಾರಕ್ಕೆ ಮುತ್ತಿಕ್ಕಿದರು.
Singapore Open ಜಪಾನ್‌ನ ಸಯೆನಾ ಮಣಿಸಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು!
ಕಳೆದ ವರ್ಷ ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲೂ ಚಿನ್ನ ತಮ್ಮದಾಗಿಸಿಕೊಂಡಿದ್ದ ಐಶ್ವರಿಗೆ ಇದು 2ನೇ ಸ್ವರ್ಣ. ಆದರೆ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಮನು ಭಾಕರ್ 4ನೇ ಸ್ಥಾನ ಪಡೆದು ಪದಕ ವಂಚಿತರಾದರು. ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಅಂಜುಮ್ ಮೌದ್ಗಿಲ್ ಫೈನಲ್ ತಲುಪಿದ್ದಾರೆ.