
ಮುಂಬೈ(ಮೇ.01): ನಾಯಕ ರೋಹಿತ್ ಶರ್ಮಾ (56 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಟಿ20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್'ಗಳಿಂದ ಮಣಿಸಿತು. ತಾನಾಡಿದ 10 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಕಲೆಹಾಕಿದ ಮುಂಬೈ ಪ್ಲೇ ಆಫ್ ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡಿದೆ. ಇದೇ ವೇಳೆ ಆಡಿದ 11 ಪಂದ್ಯಗಳಲ್ಲಿ 8ನೇ ಸೋಲುಂಡ ಆರ್‌ಸಿಬಿ ಪ್ಲೇ ಆಫ್ ಸುತ್ತಿನಿಂದ ಹೊರಬಿದ್ದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ 20 ಓವರ್'ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್'ಗಳಿಸಿತ್ತು. ಈ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ ಒಂದು ಎಸೆತ ಇರುವಂತೆಯೇ ಕೇವಲ 5 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿ ಜಯದ ನಗೆ ಬೀರಿತು.
ಮುಂಬೈ ತಂಡ ಪಾರ್ಥೀವ್ ಪಟೇಲ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಆದರೆ ನಂತರ ಬಂದ ಜೋಸ್ ಬಟ್ಲರ್ (33) ಮತ್ತು ನಿತೀಶ್ ರಾಣಾ (28) ರನ್ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ನಾಯಕನ ಆಟವಾಡಿದ ರೋಹಿತ್ ಶರ್ಮಾ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್'ಸಿಬಿ ಎಂದಿನಂತೆ ಆರಂಭಿಕ ಆಘಾತ ಎದುರಿಸಿತು. ಆರಂಭಿಕನಾಗಿ ಕಣಕ್ಕಿಳಿದ ಮನ್ದೀಪ್ ಸಿಂಗ್ 17ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಆಟ 20ರನ್'ಗೆ ಸೀಮಿತವಾಯಿತು. ಮತ್ತೊಮ್ಮೆ ವೈಫಲ್ಯ ಅನುಭವಿಸಿದ ತ್ರಾವಿಸ್ ಹೆಡ್ ಗಳಿಸಿದ್ದು ಬರೀ 12ರನ್ ಮಾತ್ರ. ಮಧ್ಯಮ ಕ್ರಮಾಂಕದಲ್ಲಿ ಕೆಲಹೊತ್ತು ಆರ್ಭಟಿಸಿದ ಎಬಿ ಡಿವಿಲಿಯರ್ಸ್ ದೊಡ್ಡ ಮೊತ್ತ ಕಲೆಹಾಕುವ ಮನ್ಸೂಚನೆ ನೀಡಿದರಾದರೂ, ದೊಡ್ಡ ಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡರು. ಕೇವಲ 27 ಎಸೆತಗಳನ್ನು ಎದುರಿಸಿದ ಎಬಿಡಿ 43ರನ್ ಬಾರಿಸಿ ಮಿಂಚಿದರು. ಇನ್ನು ಕೆಳಕ್ರಮಾಂಕದಲ್ಲಿ ಸ್ಪೋಟಕ ಇನಿಂಗ್ಸ್ ಕಟ್ಟಿದ ಪವನ್ ನೇಗಿ 35 ಬಾರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು: 162/8
ಎಬಿ.ಡಿವಿಲಿಯರ್ಸ್ : 43
ಪವನ್ ನೇಗಿ : 35
ಮಿಚೆಲ್ ಮೆಕ್'ಗ್ಲಾರೆನ್ : 34/4
ಮುಂಬೈ ಇಂಡಿಯನ್ಸ್ : 165/5
ರೋಹಿತ್ ಶರ್ಮಾ : 56
ಜೋಸ್ ಬಟ್ಲರ್ : 33
ಪವನ್ ನೇಗಿ : 17/2
ಪಂದ್ಯಪುರುಷೋತ್ತಮ: ರೋಹಿತ್ ಶರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.