
ಮೆಲ್ಬರ್ನ್[ಡಿ.28]: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(6 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 151 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್’ನಲ್ಲಿ ಭಾರತ 292 ರನ್’ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್’ನಲ್ಲಿ ಟೀಂ ಇಂಡಿಯಾ 443 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೂರನೇ ದಿನ 8 ರನ್’ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಭಾರತದ ದಾಳಿಗೆ ತತ್ತರಿಸಿ ಹೋಯಿತು. ತಂಡದ ಮೊತ್ತ 102 ರನ್’ಗಳಾಗುವಷ್ಟರಲ್ಲಿ ಪ್ರಮುಖ 6 ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ 7ನೇ ವಿಕೆಟ್’ಗೆ ಜತೆಯಾದ ನಾಯಕ ಪೈನೆ ಹಾಗೂ ಪ್ಯಾಟ್ ಕಮ್ಮಿನ್ಸ್ 36 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿತು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಆ ಬಳಿಕ ಕೊನೆಯ 2 ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು.
ಮಿಂಚಿದ ಬುಮ್ರಾ: ಟೀಂ ಇಂಡಿಯಾ ಪರ ಶಿಸ್ತಿನ ದಾಳಿ ನಡೆಸಿದ ಬುಮ್ರಾ ಆಸಿಸ್’ನ 6 ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿದರು. ಆರಂಭಿಕ ಹ್ಯಾರಿಸ್ ವಿಕೆಟ್ ಕಬಳಿಸಿದ ಬುಮ್ರಾ ನಂತರ ಪದೇ-ಪದೇ ಆಸಿಸ್’ಗೆ ಶಾಕ್ ನೀಡುತ್ತಲೇ ಸಾಗಿದರು. ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಟಿಮ್ ಪೈನೆ ಸೇರಿದಂತೆ ಪ್ರಮುಖ 6 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲೇ ಆಸ್ಟ್ರೇಲಿಯಾ,
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ 5+ ವಿಕೆಟ್ ಕಬಳಿಸಿದ ಏಷ್ಯಾದ ಮೊದಲ ಬೌಲರ್ ಎನ್ನುವ ಗೌರವಕ್ಕೆ ಜಸ್ಪ್ರೀತ್ ಬುಮ್ರಾ ಭಾಜನರಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ: 443/7
ಪೂಜಾರ: 106
ಕಮ್ಮಿನ್ಸ್: 72/3
ಆಸ್ಟ್ರೇಲಿಯಾ: 151/10
ಹ್ಯಾರಿಸ್: 22
ಬುಮ್ರಾ: 33/6
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.