ಕೇವಲ 2 ವರ್ಷದ ಹಿಂದಷ್ಟೇ ಶೂಟಿಂಗ್ ಆರಂಭಿಸಿದ ಹರ್ಯಾಣದ ಮನು, ಇಷ್ಟು ಕಡಿಮೆ ಅವಧಿಯಲ್ಲಿ ವಿಶ್ವಕಪ್ ಕೂಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಶೂಟಿಂಗ್ ಜಗತ್ತನ್ನು ಬೆರಗಾಗಿಸಿದ್ದಾರೆ. ಕಳೆದ ಡಿಸೆಂಬರ್'ನಲ್ಲಿ ನಡೆದಿದ್ದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್'ನಲ್ಲಿ ಮನು 9 ಚಿನ್ನ ಸೇರಿ ಬರೋಬ್ಬರಿ 15 ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದರು.
ನವದೆಹಲಿ(ಮಾ.07): 16 ವರ್ಷದ ಭಾರತೀಯ ಶೂಟರ್ ಮನು ಭಾಕರ್, ಮೆಕ್ಸಿಕೊದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್'ನಲ್ಲಿ ಅಚ್ಚರಿ ಮೇಲೆ ಅಚ್ಚರಿ ಮೂಡಿಸುತ್ತಿದ್ದಾರೆ. ಮಹಿಳೆಯರ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದ ಮನು, ವಿಶ್ವಕಪ್'ನಲ್ಲಿ 2ನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಪಂದ್ಯಾವಳಿಯ 3ನೇ ದಿನವಾದ ಸೋಮವಾರ, 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಹಾಗೂ ಓಂ ಪ್ರಕಾಶ್ ಮಿಥರ್ವಲ್ ಜೋಡಿ ಮೊದಲ ಸ್ಥಾನ ಪಡೆದುಕೊಂಡಿತು. ಅರ್ಹತಾ ಸುತ್ತಿನಲ್ಲಿ 770 ಅಂಕ ಪಡೆದು 2ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ ಭಾರತೀಯ ಜೋಡಿಗೆ ಜರ್ಮನಿಯ ಕ್ರಿಶ್ಚಿಯನ್ ಹಾಗೂ ಸಾಂಡ್ರಾ ರೀಟ್ಜ್ ಜೋಡಿಯಿಂದ ಭಾರೀ ಪೈಪೋಟಿ ಎದುರಾಯಿತು. 476.1 ಅಂಕ ಪಡೆದ ಮನು-ಓಂ ಪ್ರಕಾಶ್, ಮೊದಲ ಸ್ಥಾನ ಪಡೆದರು.
ಕೇವಲ 2 ವರ್ಷದ ಹಿಂದಷ್ಟೇ ಶೂಟಿಂಗ್ ಆರಂಭಿಸಿದ ಹರ್ಯಾಣದ ಮನು, ಇಷ್ಟು ಕಡಿಮೆ ಅವಧಿಯಲ್ಲಿ ವಿಶ್ವಕಪ್ ಕೂಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಶೂಟಿಂಗ್ ಜಗತ್ತನ್ನು ಬೆರಗಾಗಿಸಿದ್ದಾರೆ. ಕಳೆದ ಡಿಸೆಂಬರ್'ನಲ್ಲಿ ನಡೆದಿದ್ದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್'ನಲ್ಲಿ ಮನು 9 ಚಿನ್ನ ಸೇರಿ ಬರೋಬ್ಬರಿ 15 ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದರು.
ಮೆಹಲಿ-ದೀಪಕ್‌ಗೆ ಕಂಚು: 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಹಾಗೂ ದೀಪಕ್ ಕುಮಾರ್ ಜೋಡಿ ಕಂಚಿನ ಪದಕ ಗೆದ್ದುಕೊಂಡಿತು. ಫೈನಲ್'ನಲ್ಲಿ 435.1 ಅಂಕ ಸಂಪಾದಿಸಿ 3ನೇ ಸ್ಥಾನ ಪಡೆದು ಕೊಂಡಿತು. ಪಂದ್ಯಾವಳಿಯಲ್ಲಿ ಭಾರತ ಸದ್ಯ 3 ಚಿನ್ನ, 4 ಕಂಚುಗಳೊಂದಿಗೆ ಒಟ್ಟು 7 ಪದಕ ಗೆದ್ದಿದೆ.