ಬಿಸಿಸಿಐನಿಂದ ಕ್ರಿಕೆಟಿಗರ ವೇತನ ಬಾಕಿ..!

By Suvarna Web DeskFirst Published Mar 7, 2018, 9:21 AM IST
Highlights

ಸುಮಾರು 25 ರಾಜ್ಯ ಸಂಸ್ಥೆಗಳು ಬಿಸಿಸಿಐನಿಂದ ವೇತನ ಪಾವತಿಯಾಗಿಲ್ಲವೆಂದು ದೃಢಪಡಿಸಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಶ್ರೀಮಂತ ಕ್ರಿಕೆಟ್ ಸಂಸ್ಥೆಯ ನಡೆ ಭಾರೀ ಟೀಕೆಗೆ ಗುರಿಯಾಗಿದೆ.

ನವದೆಹಲಿ(ಮಾ.07): 20017-18ರ ದೇಸಿ ಋತು ಮುಕ್ತಾಯಗೊಳ್ಳುವ ಸಮಯ ಹತ್ತಿರ ಬಂದರೂ, ಸತತ 2ನೇ ವರ್ಷ ಬಿಸಿಸಿಐ ತನ್ನ ದೇಸಿ ಕ್ರಿಕೆಟಿಗರಿಗೆ ನೀಡಬೇಕಿರುವ ವೇತನ ಪಾವತಿಸಿಲ್ಲ. ಬಹುತೇಕ ರಾಜ್ಯ ಕ್ರಿಕೆಟ್ ಸಂಸ್ಥೆಗಳು ತನ್ನ ಆಟಗಾರರಿಗೆ ಸಂಭಾವನೆ ನೀಡಿದೆಯಾದರೂ, ಬಿಸಿಸಿಐನಿಂದ ಬರಬೇಕಿರುವ ಹಣ ಇನ್ನೂ ಕೈಸೇರಿಲ್ಲ.

ಬಿಸಿಸಿಐನ ವೇತನ ನಿಯಮದ ಪ್ರಕಾರ, ಒಟ್ಟು ಆದಾಯದ ಶೇ.10.6ರಷ್ಟನ್ನು ದೇಸಿ ಕ್ರಿಕೆಟಿಗರಿಗೆ ಸಂಭಾವನೆ ರೂಪದಲ್ಲಿ ನೀಡಬೇಕು. ರಣಜಿ ಟ್ರೋಫಿ ಹಾಗೂ ಸೀಮಿತ ಓವರ್ ಪಂದ್ಯಾವಳಿಯಲ್ಲಿ ಕಾಯಂ ಆಗಿ ಆಡುವ ಆಟಗಾರರಿಗೆ ವಾರ್ಷಿಕ ₹12-15 ಲಕ್ಷ ನೀಡಬೇಕಿದೆ. ವೇತನ ವಿಳಂಬಕ್ಕೆ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ನಡುವಿನ ನ್ಯಾ.ಲೋಧಾ ಸಮಿತಿ ಶಿಫಾರಸು ಹಗ್ಗಜಗ್ಗಾಟವೇ ಕಾರಣ ಎನ್ನಲಾಗಿದೆ. ಜತೆಗೆ ಆಡಳಿತ ಸಮಿತಿ ನೂತನ ವೇತನ ಮಾದರಿಯನ್ನು ಅಳವಡಿಸಲು ಯೋಜನೆ ರೂಪಿಸುತ್ತಿದೆ. ಬಿಸಿಸಿಐನ ಒಟ್ಟು ಆದಾಯದಲ್ಲಿ ಶೇ.26ರಷ್ಟನ್ನು ಆಟಗಾರರಿಗೆ ಮೀಸಲಿಡಬೇಕಿದೆ. ಇದರಲ್ಲಿ ಶೇ.13ರಷ್ಟು ಅಂ.ರಾ.ತಾರೆಯರಿಗೆ, ಶೇ.10.6ರಷ್ಟು ದೇಸಿ ಕ್ರಿಕೆಟಿಗರಿಗೆ ಹಾಗೂ ಇನ್ನುಳಿದಿದ್ದು ಮಹಿಳಾ ಹಾಗೂ ಕಿರಿಯ ಕ್ರಿಕೆಟಿಗರಿಗೆ ನೀಡಬೇಕಿದೆ.

ಸುಮಾರು 25 ರಾಜ್ಯ ಸಂಸ್ಥೆಗಳು ಬಿಸಿಸಿಐನಿಂದ ವೇತನ ಪಾವತಿಯಾಗಿಲ್ಲವೆಂದು ದೃಢಪಡಿಸಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಶ್ರೀಮಂತ ಕ್ರಿಕೆಟ್ ಸಂಸ್ಥೆಯ ನಡೆ ಭಾರೀ ಟೀಕೆಗೆ ಗುರಿಯಾಗಿದೆ.

click me!