2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ವೇಳಾಪಟ್ಟಿ ಫಿಕ್ಸ್‌..!

By Kannadaprabha News  |  First Published Jul 20, 2022, 10:07 AM IST

2028ರ ಲಾಸ್‌ ಏಂಜಲೀಸ್ ಒಲಿಂಪಿಕ್ಸ್‌ ಜುಲೈ 14ರಿಂದ ಆರಂಭ
2028ರ ಜುಲೈ 14ರಿಂದ 30ರ ವರೆಗೆ ನಡೆಯಲಿದೆ ಲಾಸ್ ಏಂಜಲೀಸ್ ಒಲಿಂಪಿಕ್ಸ್
1932, 1984 ರ ಬಳಿಕ ಮತ್ತೊಮ್ಮೆ ಒಲಿಂಪಿಕ್ಸ್‌ಗೆ ಲಾಸ್ ಏಂಜಲೀಸ್ ಆತಿಥ್ಯ


ಲಾಸ್‌ ಏಂಜಲೀಸ್‌(ಜು.20): ಲಾಸ್‌ ಏಂಜಿಲೀಸ್‌ ಒಲಿಂಪಿಕ್ಸ್‌ 2028ರ ಜುಲೈ 14ರಿಂದ 30ರ ವರೆಗೆ ನಡೆಯಲಿದೆ ಎಂದು ಕ್ರೀಡಾಕೂಟದ ಆಯೋಜಕರು ಮಂಗಳವಾರ ಘೋಷಿಸಿದ್ದಾರೆ. ಈ ಮೊದಲು 1932, 1984 ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದ ಲಾಸ್‌ ಏಂಜಲೀಸ್‌ ಮತ್ತೊಂದು ಜಾಗತಿಕ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 15ರಿಂದ 27ರ ವರೆಗೆ ನಡೆಸಲಾಗುವುದು. ಎರಡೂ ಕ್ರೀಡಾಕೂಟಗಳಲ್ಲಿ 15,000ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೂ ಏಷ್ಯನ್‌ ಗೇಮ್ಸ್‌

Tap to resize

Latest Videos

ಕುವೈಟ್‌: ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದ ಏಷ್ಯನ್‌ ಗೇಮ್ಸ್‌ 2023ರ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್‌ 8ರ ವರೆಗೂ ಚೀನಾದ ಹಾಂಗ್ಝೂನಲ್ಲಿ ನಡೆಯಲಿದೆ ಎಂದು ಮಂಗಳವಾರ ಏಷ್ಯಾ ಒಲಿಂಪಿಕ್‌ ಸಮಿತಿ(ಒಸಿಎ) ಘೋಷಿಸಿದೆ. 19ನೇ ಆವೃತ್ತಿಯ ಕ್ರೀಡಾಕೂಟವು ಈ ವರ್ಷ ಸೆಪ್ಟೆಂಬರ್ 10ರಿಂದ 25ರ ವರೆಗೂ ನಡೆಯಬೇಕಿತ್ತು. ಆದರೆ ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದ ಕಾರಣ ಮೇ 6ರಂದು ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.

ಜಾವೆಲಿನ್ ಪಟು ನೀರಜ್‌ ಚೋಪ್ರಾ ಟಾರ್ಗೆಟ್‌ 90!

ಯ್ಯೂಜೀನ್‌(ಅಮೆರಿಕ): ಟೋಕಿಯೋ ಒಲಿಂಪಿಕ್ಸ್‌ ಬಳಿಕ ಎರಡು ಬಾರಿ ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 90 ಮೀ. ದೂರದ ಸಮೀಪದಲ್ಲೇ ಇರುವ ಅವರು ಅದನ್ನು ಶೀಘ್ರದಲ್ಲೇ ಸಾಧಿಸುವ ಗುರಿಯನ್ನೂ ಹೊಂದಿದ್ದಾರೆ. 

ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾನು ಸಾಮಾನ್ಯವಾಗಿ ದೂರದ ಮೇಲೆ ಕೇಂದ್ರೀಕರಿಸುವುದಿಲ್ಲ. ಪ್ರತಿ ಸ್ಪರ್ಧೆಯಲ್ಲಿ ಶೇ.100 ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನಾನು 90 ಮೀ.ಗೆ ಹತ್ತಿರವಾಗಿದ್ದೇನೆ. ಡೈಮಂಡ್‌ ಲೀಗ್‌ನಲ್ಲಿ ನಾನು 6 ಸೆಂ.ಮೀಟರ್‌ನಿಂದ ಅದನ್ನು ತಪ್ಪಿಸಿಕೊಂಡಿದ್ದೇನೆ. ಶೀಘ್ರದಲ್ಲೇ 90 ಮೀ. ಗಡಿ ದಾಟುವು ಗುರಿ ಇದೆ ಎಂದಿದ್ದಾರೆ. ಅವರು ಗುರುವಾರ ವಿಶ್ವ ಅಥ್ಲೆಟಿಕ್ಸ್‌ ಕೂಟದಲ್ಲಿ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್‌ ಬಳಿಕ ಮತ್ತೊಂದು ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಶೂಟಿಂಗ್‌ ವಿಶ್ವಕಪ್‌: ಕಂಚು ಜಯಿಸಿದ ಅನೀಶ್‌-ರಿಧಮ್‌

ಚಾಂಗ್‌ವೊನ್‌(ದ.ಕೊರಿಯಾ): ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಅನೀಶ್‌ ಭನ್ವಾಲಾ ಹಾಗೂ ರಿಧಮ್‌ ಸಂಗ್ವಾನ್‌ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮಂಗಳವಾರ 25 ಮೀ. ರಾರ‍ಯಪಿಡ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಜೋಡಿ ಚೆಕ್‌ ಗಣರಾಜ್ಯದ ಅನ್ನಾ ದೆಡೋವಾ-ಮಾರ್ಟಿನ್‌ ಜೋಡಿಯನ್ನು 16-12 ಅಂತರದಲ್ಲಿ ಸೋಲಿಸಿತು. ಕಳೆದ ವರ್ಷ ಕೈರೋದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅನೀಶ್‌-ರಿಧಮ್‌ ಜೋಡಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಭಾರತ ಕೂಟದಲ್ಲಿ 5 ಚಿನ್ನ, 5 ಬೆಳ್ಳಿ, 4 ಕಂಚು ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಏಷ್ಯನ್‌ ವೇಟ್‌ಲಿಫ್ಟಿಂಗ್‌: ಹರ್ಷದಾ ಗರುಡ್‌ಗೆ ಚಿನ್ನ

ನವದೆಹಲಿ: ಉಜ್ಬೇಕಿಸ್ತಾನದ ತಾಶ್‌ಕೆಂಟ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಯುವ ಹಾಗೂ ಕಿರಿಯರ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹರ್ಷದಾ ಗರುಡ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 18 ವರ್ಷದ ಹರ್ಷದಾ ಸೋಮವಾರ ಕಿರಿಯರ ವಿಭಾಗದ ಮಹಿಳೆಯರ 45 ಕೆ.ಜಿ. ಸ್ಪರ್ಧೆಯಲ್ಲಿ 157 ಕೆ.ಜಿ.(ಸ್ಯ್ಯಾಚ್‌ನಲ್ಲಿ 69 ಕೆ.ಜಿ+ ಕ್ಲೀನ್‌ ಆ್ಯಂಡ್‌ ಜರ್ಕ್ನಲ್ಲಿ 88 ಕೆ.ಜಿ.) ಭಾರ ಎತ್ತಿ ಬಂಗಾರ ಗೆದ್ದರು. ಯುವ ವಿಭಾಗದ 45 ಕೆ.ಜಿ. ಸ್ಪರ್ಧೆಯಲ್ಲಿ ಸೌಮ್ಯಾ ದಾಳ್ವಿ ಕಂಚು ಗೆದ್ದುಕೊಂಡರು. ಪುರುಷರ ವಿಭಾಗದ 49 ಕೆ.ಜಿ. ಸ್ಪರ್ಧೆಯ ಸ್ನಾ್ಯಚ್‌ನಲ್ಲಿ 85 ಕೆ.ಜಿ. ಭಾರ ಎತ್ತಿದ ಧನುಶ್‌ ಕೂಡಾ ಕಂಚು ಪಡೆದರು.

click me!