ಶಿವಮೊಗ್ಗದ ಹಳ್ಳಿ ಹುಡುಗ ಗಗನ್ ಗೌಡ ಯುಪಿ ಯೋಧಾಸ್‌ ಫ್ರಾಂಚೈಸಿ ಕಣ್ಣಿಗೆ ಬಿದ್ದಿದ್ದು ಹೇಗೆ?

By Naveen Kodase  |  First Published Mar 7, 2024, 3:54 PM IST

ಗಗನ್ ಗೌಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಎನ್ನುವ ಪುಟ್ಟ ಹಳ್ಳಿಯ ಗ್ರಾಮೀಣ ಪ್ರತಿಭೆ. ಸಾಮಾನ್ಯ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗಗನ್, ಪ್ರೊ ಕಬಡ್ಡಿ ಸ್ಟಾರ್ ಆಗಿದ್ದು ಹೇಗೆ ಎನ್ನುವುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಜತೆ ಮನಬಿಚ್ಚಿ ಮಾತನಾಡಿದ್ದಾರೆ. 


- ನವೀನ್ ಕೊಡಸೆ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು: ಕರ್ನಾಟಕದ ಭರವಸೆಯ ಕಬಡ್ಡಿ ಆಟಗಾರ ಗಗನ್ ಗೌಡ, ಇತ್ತೀಚೆಗಷ್ಟೇ ಮುಕ್ತಾಯವಾದ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯುಪಿ ಯೋಧಾಸ್‌ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. SDM ಉಜಿರೆ ಕಾಲೇಜ್ ವಿದ್ಯಾರ್ಥಿಯೂ ಆಗಿರುವ ಗಗನ್, ಯುಪಿ ಯೋಧಾಸ್‌ ತಂಡದ ಪರ 13 ಪಂದ್ಯಗಳನ್ನಾಡಿ 92 ಅಂಕಗಳನ್ನು ಗಳಿಸಿದ್ದಾರೆ. 

Latest Videos

undefined

ಗಗನ್ ಗೌಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಎನ್ನುವ ಪುಟ್ಟ ಹಳ್ಳಿಯ ಗ್ರಾಮೀಣ ಪ್ರತಿಭೆ. ಸಾಮಾನ್ಯ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗಗನ್, ಪ್ರೊ ಕಬಡ್ಡಿ ಸ್ಟಾರ್ ಆಗಿದ್ದು ಹೇಗೆ ಎನ್ನುವುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಜತೆ ಮನಬಿಚ್ಚಿ ಮಾತನಾಡಿದ್ದಾರೆ. 

* ಮೊದಲ ಪ್ರಯತ್ನದಲ್ಲೇ ಪ್ರೊ ಕಬಡ್ಡಿ ಆಡಿದ ಅನುಭವ ಹೇಗಿತ್ತು?

ನಾನು ಯುಪಿ ಯೋಧಾಸ್‌ಗೆ ಸೆಲೆಕ್ಟ್ ಆಗಿ ಮೊದಲ 10 ಪಂದ್ಯಗಳು ಬೆಂಚ್ ಕಾದಿದ್ದೆ. ಪ್ರಾಕ್ಟೀಸ್‌ನಲ್ಲಿ ಎಲ್ಲರಿಗೂ ಚಾನ್ಸ್ ಸಿಗುತ್ತಿತ್ತು, ಅದೇ ರೀತಿ ನನಗೂ ಅವಕಾಶ ಸಿಕ್ಕಿತು. ಅಲ್ಲಿ ನಾನು ಚೆನ್ನಾಗಿ ಆಡುತ್ತಿದ್ದೆ. ಕೋಚ್‌ಗೆ ನನ್ನ ಮೇಲೆ ವಿಶ್ವಾಸ ಬಂತು. ಹೀಗಾಗಿ ಒಂದು ಮ್ಯಾಚ್‌ನಲ್ಲಿ ಆಡುವ 7ರ ಬಳಗದಲ್ಲಿ ಚಾನ್ಸ್ ಕೊಟ್ರು. ಮೊದಲ ಪಂದ್ಯದಲ್ಲೇ ಚೆನ್ನಾಗಿ ಆಡಿದ್ದರಿಂದ ಮತ್ತೆ ಮತ್ತೆ ಅವಕಾಶಗಳು ಸಿಕ್ಕಿದವು. ಮೊದಲ ಪ್ರಯತ್ನವಾದರೂ ನನಗೆ ಒಳ್ಳೆಯ ಅನುಭವ ಸಿಕ್ಕಿತು.

* ಕಬಡ್ಡಿಯ ಬಗ್ಗೆ ಒಲವು ಮೂಡಿದ್ದು ಹೇಗೆ?

ನನ್ನ ಸಹೋದರರು ಕಬಡ್ಡಿ ಆಡ್ತಾ ಇದ್ರು, ಅವರನ್ನ ನೋಡುತ್ತಾ ನನಗೂ ಕಬಡ್ಡಿ ಆಡುವ ಇಂಟ್ರೆಸ್ಟ್ ಬಂತು. ರಿಪ್ಪನ್‌ಪೇಟೆ ಹೈಸ್ಕೂಲ್ ಹಂತದಲ್ಲೇ ನಮ್ಮ ಸೀನಿಯರ್ಸ್ ನಮ್ಮನ್ನು ಕಬಡ್ಡಿ ಟೂರ್ನಿಗೆ ಕರೆದುಕೊಂಡು ಹೋಗ್ತಿದ್ರು. ನಾನು SSLC ನಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟವನ್ನು ಪ್ರತಿನಿಧಿಸಿದೆ. ನಮ್ಮ ಪೋಷಕರ ಬೆಂಬಲ, ಹೈಸ್ಕೂಲ್‌ನಲ್ಲಿ ಕೋಚಿಂಗ್ ನೀಡಿದ ವಿನಯ್ ಸರ್, ಪಿಯು ಹಾಗೂ ಡಿಗ್ರಿಯಲ್ಲಿ ಕೃಷ್ಣಾನಂದ ರಾವ್ ಸರ್, ಬಿಸಿ ರಮೇಶ್ ಸರ್ ಅವರ ಪ್ರೋತ್ಸಾಹವೇ ನಾನು ಈ ಹಂತಕ್ಕೆ ಬರಲು ಕಾರಣ.

* ನೀವು ಪ್ರೊ ಕಬಡ್ಡಿ ಲೀಗ್‌ಗೆ ಸೆಲೆಕ್ಟ್ ಆಗಿದ್ದು ಹೇಗೆ?

ಕಳೆದ ಎರಡು ಮೂರು ವರ್ಷಗಳಿಂದ ಯುವ ಕಬಡ್ಡಿ ಸೀರಿಸ್ ಅಂತ ನಡೆಯುತ್ತೆ. ಆ ಸೀರಿಸ್‌ನಲ್ಲಿ 8 ರಾಜ್ಯಗಳ 8 ತಂಡಗಳು ಪಾಲ್ಗೊಳ್ಳುತ್ತವೆ. ಆಗ ಬೆಂಗಳೂರಿನಲ್ಲಿ ಸೆಲೆಕ್ಷನ್‌ಗೆ ಹೋಗಿದ್ದೆ. ಸೆಲೆಕ್ಷನ್‌ನಲ್ಲಿ ಚೆನ್ನಾಗಿ ಆಡಿದೆ. ಇದಾದ ಬಳಿಕ ಯುವ ಕಬಡ್ಡಿ ಸೀರಿಸ್‌ನಲ್ಲಿ ಪಾಲ್ಗೊಂಡೆ. ಯುವ ಸೀರಿಸ್‌ನಲ್ಲಿ 262 ಅಂಕಗಳನ್ನು ಗಳಿಸಿ ಎರಡನೇ ಬೆಸ್ಟ್ ರೈಡರ್ ಎನಿಸಿಕೊಂಡೆ. ಇದನ್ನು ಗಮನಿಸಿದ ಹಲವು ಫ್ರಾಂಚೈಸಿಗಳು ನನಗೆ ಆಫರ್ ಮಾಡಿದರು. 

* ನೀವು ಯುಪಿ ಯೋಧಾಸ್‌ ಫ್ರಾಂಚೈಸಿ ಕಣ್ಣಿಗೆ ಬಿದ್ದಿದ್ದು ಹೇಗೆ?

ಯುವ ಸೀರಿಸ್‌ನಲ್ಲಿ ಚೆನ್ನಾಗಿ ಆಡಿದ್ದರಿಂದ ಅವರು ನನ್ನನ್ನು ಗಮನಿಸಿದರು. ಈ ಸೀರಿಸ್‌ನಲ್ಲಿ ಯುಪಿ ತಂಡದ ದುರ್ಘೇಶ್ ಎನ್ನುವ ಟಾಪ್ ರೈಡರ್‌ ಇದ್ದರು. ಅವರು ನನ್ನ ಬಗ್ಗೆ ಯುಪಿ ಫ್ರಾಂಚೈಸಿಗೆ ತಿಳಿಸಿದರು. ಆ ಬಳಿಕ ಫ್ರಾಂಚೈಸಿಯವರು ನನ್ನ ಆಟವನ್ನು ನೋಡಿ, ನನ್ನನ್ನು ತಮ್ಮ ತಂಡಕ್ಕೆ ಸೆಲೆಕ್ಟ್ ಮಾಡಿಕೊಂಡರು.

* ಪ್ರೊ ಕಬಡ್ಡಿ ಆಡಬೇಕು ಎಂದು ಕನಸು ಹೊತ್ತ ಯುವ ಆಟಗಾರರಿಗೆ ನೀವೇನು ಹೇಳಲು ಬಯಸುತ್ತೀರಾ?

ಲೋಕಲ್ ಟೂರ್ನಮೆಂಟ್ ಆಡುವುದಕ್ಕಿಂತ, ಹೊರ ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನಡೆಯುವ ಟೂರ್ನಿಯನ್ನು ಆಡಿದರೆ ಗಮನ ಸೆಳೆಯಬಹುದು. ಇದರ ಜತೆಗೆ ಒಳ್ಳೆಯ ಕಬಡ್ಡಿ ಕ್ಲಬ್‌ ಅಥವಾ ಎಸ್‌ಡಿಎಂ, ಆಳ್ವಾಸ್‌ನಂತಹ ಕಾಲೇಜ್ ಸೇರಿಕೊಂಡರೆ ಅವರು ರಾಜ್ಯ/ರಾಷ್ಟ್ರಮಟ್ಟದ ಟೂರ್ನಿಯನ್ನಾಡಲು ಅವಕಾಶ ಮಾಡಿ ಕೊಡ್ತಾರೆ. ಅಲ್ಲಿ ಚೆನ್ನಾಗಿ ಆಡಿದರೆ ಕೋಚ್‌ಗಳ ಗಮನ ಸೆಳೆಯಬಹುದು. ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡಬೇಕು. ಫಿಟ್ನೆಸ್ ಹಾಗೂ ವರ್ಕೌಟ್ ಹಾಗೂ ಒಳ್ಳೆಯ ಪ್ರಾಕ್ಟೀಸ್ ಮಾಡಿದರೆ ಖಂಡಿತ ಅವಕಾಶ ಸಿಗುತ್ತೆ.

* ನಿಮ್ಮ ಫೇವರೇಟ್ ಕಬಡ್ಡಿ ಆಟಗಾರ ಯಾರು? ಯಾಕೆ?

ನನಗೆ ಅನೂಪ್ ಕುಮಾರ್ ಹಾಗೂ ಅಜಯ್ ಠಾಕೂರ್ ಇಬ್ಬರು ಕಬಡ್ಡಿ ಆಟಗಾರರು ತುಂಬಾ ಇಷ್ಟ. ಅಜಯ್‌ ಠಾಕೂರ್ ಬೆಂಗಳೂರು ಬುಲ್ಸ್ ತಂಡದ ಆಟಗಾರರಾಗಿದ್ದರು. ಅವರ ರನ್ನಿಂಗ್ ಹ್ಯಾಂಡ್‌ ಟಚ್ ತುಂಬಾ ಇಷ್ಟ ಆಗ್ತಿತ್ತು. ಇನ್ನು ಎಂತಹ ಕಠಿಣ ಪರಿಸ್ಥಿತಿಯಿದ್ದರೂ ಸುಲಭವಾಗಿ ಬೋನಸ್‌ ಕದಿಯುತ್ತಿದ್ದ ಅನೂಪ್‌ ಕುಮಾರ್ ಕೂಡಾ ತುಂಬಾ ಇಷ್ಟದ ಆಟಗಾರರಾಗಿದ್ದಾರೆ.

* ಬೆಂಗಳೂರಲ್ಲಿ ಬೆಂಗಳೂರು ಬುಲ್ಸ್ ಎದುರು ಆಡುವಾಗ ಏನು ಅನಿಸುತ್ತಿತ್ತು?

ಬೆಂಗಳೂರು ಬುಲ್ಸ್‌ ಪಂದ್ಯ ಅಂದ್ರೆ ಕರ್ನಾಟಕದ ಎಲ್ಲಾ ಕಬಡ್ಡಿ ಅಭಿಮಾನಿಗಳು ನೋಡುತ್ತಿರುತ್ತಾರೆ ಎನ್ನುವುದು ಗೊತ್ತಿತ್ತು. ಎಲ್ಲರೂ ಬುಲ್ಸ್‌ಗೆ ಸಪೋರ್ಟ್ ಮಾಡುತ್ತಿದ್ದರೂ, ನಮ್ಮನ್ನು ನೋಡುತ್ತಿದ್ದಾರೆ ಅನಿಸುತ್ತಿತ್ತು. ನಾನು ಕೂಡಾ ಬುಲ್ಸ್ ಫ್ಯಾನ್. ನಮ್ಮದೇ ಟೀಂ ಮೇಲೆ ನಾವು ಆಡಿದ ಹಾಗಿನ ಅನುಭವ ಅದು.

* ಈ ಸೀಸನ್ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಫೇವರೇಟ್ ಆಟಗಾರ ಯಾರು? ಯಾಕೆ?

ಈ ಸೀಸನ್ ಕಬಡ್ಡಿ ಟೂರ್ನಿಯಲ್ಲಿ ಬುಲ್ಸ್ ತಂಡದ ಸುರ್ಜಿತ್ ಅವರ ಆಟ ತುಂಬಾ ಇಷ್ಟವಾಯ್ತು. ಅವರ ಡಿಫೆನ್ಸ್ ಚೆನ್ನಾಗಿತ್ತು. ಭಾರತ ಪರವೂ ಆಡಿದ ಸಾಕಷ್ಟು ಅನುಭವ ಅವರಿಗಿದೆ. ಅವರು ನನಗೆ ಬೆಂಗಳೂರು ಬುಲ್ಸ್ ಪರ ಇಷ್ಟವಾದ ಆಟಗಾರ.

* ಭಾರತ ತಂಡದಲ್ಲಿ ಆಡೋ ಕನಸಿದೆಯಾ? ಅದಕ್ಕಾಗಿ ಯಾವ ರೀತಿ ತಯಾರಿ ನಡೆಸ್ತಿದ್ದೀರಾ?

ಯಾವುದೇ ಆಟಗಾರನಾದರೂ ಅವನಿಗೆ ದೇಶವನ್ನು ಪ್ರತಿನಿಧಿಸಬೇಕು ಅನ್ನುವ ಕನಸಿರುತ್ತದೆ. ಭಾರತದಂತಹ ದೇಶದಲ್ಲಿ ರಾಷ್ಟ್ರ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ. ನನಗೂ ಭಾರತ ತಂಡದಲ್ಲಿ ಆಡೋ ಕನಸಿದೆ. ಅದಕ್ಕಾಗಿ ಪ್ರಾಕ್ಟೀಸ್ ಮಾಡ್ತೇನೆ.

* ಕರ್ನಾಟಕದ ಭವಿಷ್ಯದ ತಾರೆ ಎಂದು ಬಿಂಬಿತವಾಗ್ತಿರೋ ಬಗ್ಗೆ ಏನು ಹೇಳ್ತೀರಾ?

ಈ ಬಾರಿ ತುಂಬಾ ಕಡಿಮೆ ಜನ ನಮ್ಮ ರಾಜ್ಯದಿಂದ ಪ್ರೊ ಕಬಡ್ಡಿಗೆ ಸೆಲೆಕ್ಟ್ ಆಗಿದ್ದು. ನಮ್ಮ ರಾಜ್ಯದ ಕೆಲವೇ ಕೆಲವು ಆಟಗಾರರಲ್ಲಿ ನಾನೂ ಒಬ್ಬ ಎನಿಸಿದ್ದು ತುಂಬಾ ಹೆಮ್ಮೆ ಎನಿಸಿತು.

* ಒಟ್ಟಾರೆ ಪ್ರೊ ಕಬಡ್ಡಿ ಅನುಭವ ಹೇಗಿತ್ತು?

ತುಂಬಾ ಚೆನ್ನಾಗಿತ್ತು ಆ ಅನುಭವ. ಅಭ್ಯಾಸಗಳೆಲ್ಲಾ ಹೆಚ್ಚಾಗಿ ಉತ್ತರ ಭಾರತದಲ್ಲಿ ನಡೆಯುತ್ತಿತ್ತು. ಅಲ್ಲಿನ ಫುಡ್‌ ನನಗೆ ಸೆಟ್ ಆಗುತ್ತಿರಲಿಲ್ಲ. ಕ್ರಮೇಣ ಅಭ್ಯಾಸ ಆಯ್ತು. 

* ಕನ್ನಡದ ಆಟಗಾರರ ಪ್ರೊ ಕಬಡ್ಡಿಯಲ್ಲಿ ಭಾಷೆ ಎಷ್ಟು ಮುಖ್ಯ ಎನಿಸುತ್ತೆ?

ಪ್ರೊ ಕಬಡ್ಡಿಯಲ್ಲಿ ಭಾಷೆ ಸಾಕಷ್ಟು ಮುಖ್ಯ ಎನಿಸುತ್ತೆ. ಇಂಗ್ಲೀಷ್ ಅಥವಾ ಹಿಂದಿಯ ಜ್ಞಾನ ಇರಬೇಕು. ಇಂಗ್ಲೀಷ್‌ಗಿಂತ ಹಿಂದಿ ಭಾಷೆಯಾದ್ರೂ ಗೊತ್ತಿರಬೇಕು. ಬಹುತೇಕ ಕೋಚ್‌ಗಳು ಹಿಂದಿಯಲ್ಲೇ ಸಲಹೆ ನೀಡ್ತಾರೆ. ಉತ್ತರ ಭಾರತದ ಕೋಚ್‌ಗಳು ಹಿಂದಿಯಲ್ಲೇ ಕೋಚಿಂಗ್ ಮಾಡುವುದರಿಂದ ಭಾಷೆ ಗೊತ್ತಿದ್ದರೆ ಅವರು ಹೇಳುವುದನ್ನು ಅರ್ಥ ಮಾಡಿಕೊಳ್ಳಬಹುದು. 
 

click me!