ಮನು ಭಾಕರ್ ಕೋಚ್, ಭಾರತದ ದಿಗ್ಗಜ ಶೂಟರ್ ಜಸ್ಪಲ್ ರಾಣಾ ನಿಧನ!

Published : Jun 12, 2026, 11:20 AM IST
Jaspal Rana

ಸಾರಾಂಶ

ಭಾರತದ ಖ್ಯಾತ ಶೂಟಿಂಗ್ ಕೋಚ್ ಮತ್ತು ಮನು ಭಾಕರ್ ಅವರ ಗುರು ಜಸ್ಪಾಲ್ ರಾಣಾ (49) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮ್ಯೂನಿಚ್‌ನಿಂದ ಹಿಂದಿರುಗುವಾಗ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರ ಮಾರ್ಗದರ್ಶನದಲ್ಲಿ ಭಾರತದ ಯುವ ಶೂಟರ್‌ಗಳು ಹಲವು ಪದಕಗಳನ್ನು ಗೆದ್ದಿದ್ದರು.

ನವದೆಹಲಿ: ಭಾರತದ ದಿಗ್ಗಜ ಶೂಟರ್ ಹಾಗೂ ಪ್ರಖ್ಯಾತ ಶೂಟರ್ ಮನು ಭಾಕರ್ ಕೋಚ್ ಆಗಿದ್ದ ಜಸ್ಪಾಲ್ ರಾಣಾ(49) ಇಂದು ಕೊನೆಯುಸಿರೆಳೆದಿದ್ದಾರೆ. ಇದೀಗ ಜಸ್ಪಾಲ್ ರಾಣಾ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಭಾರತದ ಪಿಸ್ತೂಲ್ ಶೂಟರ್‌ಗಳಿಗೆ ಉನ್ನತ ಕಾರ್ಯಕ್ಷಮತೆಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದ ರಾಣಾ, ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಿಂದ ಭಾರತಕ್ಕೆ ಮರಳುವಾಗ ಅಸ್ವಸ್ಥತೆಯನ್ನು ಅನುಭವಿಸಿದ್ದರು ಎಂದು ವರದಿಯಾಗಿದೆ. ನವದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಜಸ್ಪಾಲ್ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಜಸ್ಪಾಲ್‌ ಚಿಕಿತ್ಸೆಗೆ ಒಳಗಾಗಿದ್ದರು.

ಚಿಕಿತ್ಸೆಯ ವೇಳೆ ವೈದ್ಯರು ಜಸ್ಪಾಲ್‌ ರಾಣಾ ಅವರಿಗೆ ಲಘು ಹೃದಯಾಘಾತವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಲು ವೈದ್ಯರು ತೀರ್ಮಾನಿಸಿದ್ದರು. ಮೊದಲ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ದಿಢೀರ್ ಆಗಿ ಕೊನೆಯುಸಿರೆಳೆದಿದ್ದಾರೆ.

ಮನು ಭಾಕರ್ ಗುರು ಜಸ್ಪಾಲ್ ರಾಣಾ:

ಇತ್ತೀಚಿಗಿನ ವರ್ಷಗಳಲ್ಲಿ ಮನು ಭಾಕರ್‌ ಕೋಚ್ ಆಗಿ ಜಸ್ಪಾಲ್ ರಾಣಾ ಹೆಚ್ಚು ಗಮನ ಸೆಳೆದಿದ್ದರು. ಜಸ್ಪಾಲ್ ರಾಣಾ ಮಾರ್ಗದರ್ಶನದಲ್ಲಿ ಮನು ಭಾಕರ್ 10 ಮೀಟರ್ ಏರ್‌ ಪಿಸ್ತೂಲ್ ಹಾಗೂ 10 ಮೀಟರ್ ಮಿಶ್ರ ಪಿಸ್ತೂಲ ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಇದರೊಂದಿಗೆ ಸ್ವಾತಂತ್ರ್ಯ ಭಾರತದ ಬಳಿಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದರು.

 

ಭಾಕರ್ ಅವರಲ್ಲದೆ, ರಾಣಾ ಯುವ ಶೂಟರ್‌ಗಳಾದ ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಸೇರಿದಂತೆ ಹಲವಾರು ಪ್ರಮುಖ ಪಿಸ್ತೂಲ್ ಶೂಟರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜೂನಿಯರ್ ಕಾರ್ಯಕ್ರಮದಲ್ಲಿ ಅವರ ಅವಧಿಯು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಯುವ ಶೂಟರ್‌ಗಳು ಹಲವು ಪದಕಗಳನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ದಿಗ್ಗಜ ಶೂಟರ್ ಜಸ್ಪಾಲ್ ರಾಣಾ

ಭಾರತದ ದಿಗ್ಗಜ ಶೂಟಿಂಗ್ ಕೋಚ್ ಆಗುವ ಮುನ್ನ ಜಸ್ಪಾಲ್ ರಾಣಾ, ಭಾರತ ಕಂಡ ಅತ್ಯುತ್ತಮ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಜೂನ್ 28, 1976 ರಂದು ಉತ್ತರಾಖಂಡದಲ್ಲಿ ಜನಿಸಿದ ರಾಣಾ, 1994 ರಲ್ಲಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು. ಮಿಲನ್‌ನಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ, ಅವರು ವಿಶ್ವ ದಾಖಲೆಯ ಅಂಕದೊಂದಿಗೆ ಜೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದರು. ಅದೇ ವರ್ಷ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಒಂದು ದಶಕಗಳ ಕಾಲ ಭಾರತದ ದಿಗ್ಗಜ ಶೂಟರ್ ಆಗಿ ರಾಣಾ ಗುರುತಿಸಿಕೊಂಡರು.

ರಾಣಾ ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಅತ್ಯಂತ ಯಶಸ್ವಿ ಶೂಟರ್‌ಗಳಲ್ಲಿ ಒಬ್ಬರಾದರು. ಒಂಬತ್ತು ಚಿನ್ನದ ಪದಕಗಳು ಸೇರಿದಂತೆ 15 ಪದಕಗಳನ್ನು ಗಳಿಸಿರುವ ಅವರು ಭಾರತದ ಅತ್ಯಂತ ಯಶಸ್ವಿ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟರ್ ಆಗಿ ಉಳಿದಿದ್ದಾರೆ. 2006 ರ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಅತ್ಯಂತ ಸ್ಮರಣೀಯ ಪ್ರದರ್ಶನ ಮೂಡಿ ಬಂದಿತ್ತು. ಅಲ್ಲಿ ಅವರು ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು ರಾಣಾ ತಮ್ಮ 18ನೇ ವಯಸ್ಸಿಗೆ ಅರ್ಜುನ ಪ್ರಶಸ್ತಿಗೆ ಭಾಜನರಾದರು. ಇದಾದ ಮೂರು ವರ್ಷಗಳ ಬಳಿಕ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ 10ನೇ ಸೀಸನ್ ಮಹಿಳಾ ಟಿ20 ವಿಶ್ವಕಪ್; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ
FIFA World Cup: 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅದ್ಧೂರಿ ಸ್ವಾಗತ