ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ಸೌರಭ್’ಗೆ ವಿಶ್ವದಾಖಲೆಯ ಚಿನ್ನ

By Web Desk  |  First Published Feb 25, 2019, 10:14 AM IST

ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ 16 ವರ್ಷದ ಸೌರಭ್ 245 ಅಂಕ ಕಲೆಹಾಕಿ ಮೊದಲ ಸ್ಥಾನ ಪಡೆದರು. 239.3 ಅಂಕ ಪಡೆದ ಸರ್ಬಿಯಾದ ಡಾಮಿ ಮಿಕೆಕ್ ಬೆಳ್ಳಿ ಜಯಿಸಿದರೆ, 2008ರ ಒಲಿಂಪಿಕ್ ಚಾಂಪಿಯನ್ ಚೀನಾದ ವೀ ಪಾಂಗ್ 215.2 ಅಂಕ ಪಡೆದು ಕಂಚಿಗೆ ತೃಪ್ತಿಪಟ್ಟರು.


ನವದೆಹಲಿ[ಫೆ.25]: ಭಾರತದ ಯುವ ಶೂಟರ್ ಸೌರಭ್ ಚೌಧರಿ, ಇಲ್ಲಿ ನಡೆಯುತ್ತಿರುವ 2019ರ ಮೊದಲ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ ಗೆದ್ದ ಭಾರತ ಪದಕ ಪಟ್ಟಿಯಲ್ಲಿ ಹಂಗೇರಿಯೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದೆ.

ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ 16 ವರ್ಷದ ಸೌರಭ್ 245 ಅಂಕ ಕಲೆಹಾಕಿ ಮೊದಲ ಸ್ಥಾನ ಪಡೆದರು. 239.3 ಅಂಕ ಪಡೆದ ಸರ್ಬಿಯಾದ ಡಾಮಿ ಮಿಕೆಕ್ ಬೆಳ್ಳಿ ಜಯಿಸಿದರೆ, 2008ರ ಒಲಿಂಪಿಕ್ ಚಾಂಪಿಯನ್ ಚೀನಾದ ವೀ ಪಾಂಗ್ 215.2 ಅಂಕ ಪಡೆದು ಕಂಚಿಗೆ ತೃಪ್ತಿಪಟ್ಟರು. ಸ್ಪರ್ಧೆಯ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದ ಸೌರಭ್, ಮೊದಲ ಸರಣಿ ಅಂತ್ಯಕ್ಕೆ ಸರ್ಬಿಯಾದ ಮಿಕೆಕ್ ರೊಂದಿಗೆ ಜಂಟಿ ಅಗ್ರ ಸ್ಥಾನ ಪಡೆದರು. 2ನೇ ಸರಣಿಯಲ್ಲಿ ಕೂಡ ಸೌರಭ್ ಮೊದಲ ಸ್ಥಾನವನ್ನು ಕಾಯ್ದುಕೊಂಡರು.

Tap to resize

Latest Videos

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ವಿಶ್ವ ದಾಖಲೆಯೊಂದಿಗೆ ಅಪೂರ್ವಿಗೆ ಚಿನ್ನ!

ಫೈನಲ್‌ನಲ್ಲಿ 8 ಮಂದಿ ಶೂಟರ್‌ಗಳಿದ್ದಾಗ ಸೌರಭ್ ಪ್ರಾಬಲ್ಯ ಮೆರೆದು ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರು. 10 ಮೀ. ಏರ್ ಪಿಸ್ತೂಲ್‌ನ ಕಿರಿಯರ ಹಾಗೂ ಹಿರಿಯರ ಎರಡೂ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಶೂಟರ್ ಎಂಬ ಹೆಗ್ಗಳಿಕೆಗೆ ಸೌರಭ್ ಪಾತ್ರರಾದರು. ಕಳೆದ ವರ್ಷ ಸೌರಭ್, ಜರ್ಮನಿಯ ಸುಹ್ಲುನಲ್ಲಿ ನಡೆದಿದ್ದ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಯೂತ್ ಒಲಿಂಪಿಕ್ಸ್ ಚಾಂಪಿಯನ್‌ನಲ್ಲೂ ಸೌರಭ್ ಚಿನ್ನ ಗೆದ್ದಿದ್ದರು. ಕಿರಿಯರ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ ಹಾಗೂ ಬೆಳ್ಳಿ, ಯೂತ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಅರ್ಹತಾ ಸುತ್ತಿನಲ್ಲಿ ಸೌರಭ್ (587)
ಅಂಕ ಗಳಿಸಿ 3ನೇ ಸ್ಥಾನ ಪಡೆದಿದ್ದರು. ಭಾರತದ ಉಳಿದ ಶೂಟರ್‌ಗಳಾದ ಅಭಿಷೇಕ್ ವರ್ಮಾ ಮತ್ತು ರವೀಂದರ್ ಸಿಂಗ್ ಫೈನಲ್‌ಗೆರುವಲ್ಲಿ ವಿಫಲರಾದರು.

ಪದಕ ವಂಚಿತ ಭಾಕರ್: ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಫೈನಲ್‌ಗೇರಿದ್ದ ಭರವಸೆಯ ಶೂಟರ್ ಮನು ಭಾಕರ್ ಪದಕದಿಂದ ವಂಚಿತರಾದರು.
ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ್ದ ಭಾಕರ್ ಪದಕ ಜಯಿಸುವ ವಿಶ್ವಾಸ ಮೂಡಿಸಿದ್ದರು. ಅರ್ಹತಾ ಸುತ್ತಿನಲ್ಲಿ ಭಾಕರ್ ಅಗ್ರಸ್ಥಾನಕ್ಕೇರಿದ್ದರು. ಆದರೆ ಫೈನಲ್‌ನ ಅಂತಿಮ ಸುತ್ತುಗಳಲ್ಲಿ ಭಾಕರ್ ಹಿನ್ನಡೆ ಅನುಭವಿಸಿದರು. 5ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಮೂಡಿಸಿದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು ಫೈನಲ್‌ಗೇರುವಲ್ಲಿ ವಿಫಲರಾದರು. ಈ ಸ್ಪರ್ಧೆಯಲ್ಲಿ ಹಂಗೇರಿಯ ಇಸ್ಟವನ್ ಪೆನಿ ಚಿನ್ನದ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ ಭಾರತದ ಪರುಲ್ ಕುಮಾರ್ 22 ಹಾಗೂ ಸಂಜೀವ್ ರಜಪೂತ್ 25ನೇ ಸ್ಥಾನ ಪಡೆದರು. 

ಮೂವರಿಗೆ ಒಲಿಂಪಿಕ್ಸ್ ಸ್ಥಾನ: ಶೂಟಿಂಗ್ ವಿಶ್ವಕಪ್‌ನ 2ನೇ ದಿನವಾದ ಭಾನುವಾರಕ್ಕೆ ಭಾರತದ ಮೂವರು ಶೂಟರ್‌ಗಳು 2020ರ ಟೋಕಿಯೋ ಒಲಿಂಪಿಕ್ ಕೂಟಕ್ಕೆ ಸ್ಥಾನ ಗಿಟ್ಟಿಸಿದರು.

ಮೊದಲ ದಿನ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ಅಪೂರ್ವಿ ಚಾಂಡೆಲಾ, ಭಾನುವಾರ ಪುರುಷರ ವಿಭಾಗದಲ್ಲಿ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದ ಸೌರಭ್ ಚೌಧರಿ ಅರ್ಹತೆ ಪಡೆಯುವಲ್ಲಿ ಸಫಲರಾದರು. ಕಳೆದ ವರ್ಷ ಕೊರಿಯಾದಲ್ಲಿ ನಡೆದಿದ್ದ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನ ಜಯಿಸಿದ್ದ ಅಂಜುಮ್ ಮೌದ್ಗಿಲ್ ಒಲಿಂಪಿಕ್‌ನಲ್ಲಿ ಸ್ಥಾನ ಪಡೆದಿದ್ದಾರೆ

click me!