ಈ ಬಾರಿಯ ಐಪಿಎಲ್ ಬಹಳ ವಿಶೇಷ. ಟೂರ್ನಿ ಮುಗಿದ ಎರಡೂವರೆ ವಾರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಆರಂಭಗೊಳ್ಳಲಿದೆ. ಮೇ 12ಕ್ಕೆ ಐಪಿಎಲ್ ಫೈನಲ್ ನಿಗದಿಯಾಗಿದೆ. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಸಮಯ ಶುರುವಾಗಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಮಾ.23]: ಜಸ್’ಪ್ರೀತ್ ಬುಮ್ರಾ ಯಾರ್ಕರ್‌ಗಳಿಗೆ ಧೋನಿಯ ಉತ್ತರ ಹೇಗಿರಲಿದೆ, ಕುಲ್ದೀಪ್ ಯಾದವ್‌ರ ಗೂಗ್ಲಿಗಳಿಗೆ ವಿರಾಟ್ ಕೊಹ್ಲಿ ತಂತ್ರವೇನು, ಸ್ಟೀವ್ ಸ್ಮಿತ್‌ರ ಫುಟ್‌ವರ್ಕ್ ಮೊದಲಿನಷ್ಟೇ ಸೊಗಸಾಗಿದೆಯಾ? 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯಲ್ಲಿ ಈ ಎಲ್ಲಾ ಪ್ರಶ್ನೆಗಳು ಸೇರಿದಂತೆ ಮತ್ತಷ್ಟು ಕುತೂಹಲಕ್ಕೆ ಉತ್ತರ ಸಿಗಲಿದೆ.
ವಾರ್ಷಿಕ ಕ್ರಿಕೆಟ್ ಹಬ್ಬಕ್ಕೆ ಶನಿವಾರ ಚಾಲನೆ ಸಿಗಲಿದ್ದು, ಹಿಂದಿನ ಆವೃತ್ತಿಗಳಂತೆ ಕೆಲ ಅನಿರೀಕ್ಷಿತ ಹೀರೋಗಳನ್ನು ಹೊರತೆಗೆಯಲಿದೆ. ಅನೇಕ ಆಟಗಾರರು ಮುಂದಿನ 2 ತಿಂಗಳಲ್ಲಿ ಮನೆ ಮಾತಾಗಲಿದ್ದಾರೆ. ಈ ಬಾರಿಯ ಐಪಿಎಲ್ ಬಹಳ ವಿಶೇಷ. ಟೂರ್ನಿ ಮುಗಿದ ಎರಡೂವರೆ ವಾರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಆರಂಭಗೊಳ್ಳಲಿದೆ. ಮೇ 12ಕ್ಕೆ ಐಪಿಎಲ್ ಫೈನಲ್ ನಿಗದಿಯಾಗಿದೆ. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಸಮಯ ಶುರುವಾಗಲಿದೆ. 2011 ಹಾಗೂ 2015ರಲ್ಲಿ ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಐಪಿಎಲ್ ನಡೆದಿತ್ತು. ಆದರೆ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೂ ಮೊದಲೇ ಐಪಿಎಲ್ ನಡೆಯಲಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಟಗಾರರ ಕೆಲಸದ ಒತ್ತಡದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಾರಣ, ಈ ಐಪಿಎಲ್ ಕುತೂಹಲ ಹೆಚ್ಚಿಸಿದೆ. ಒಂದು ಕಡೆ ಕೋಟಿ ಕೋಟಿ ಸಂಭಾವನೆ ನೀಡುತ್ತಿರುವ ಫ್ರಾಂಚೈಸಿಗಳ ನಿರೀಕ್ಷೆ ಉಳಿಸಿಕೊಳ್ಳಬೇಕು, ಮತ್ತೊಂದೆಡೆ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಫಿಟ್ನೆಸ್ ಕಾಯ್ದುಕೊಳ್ಳಬೇಕು. ಭಾರತ ತಂಡದ ಆಟಗಾರರಿಗೆ ಈ ಐಪಿಎಲ್ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಹಲವು ಸವಾಲುಗಳನ್ನು ಎಸೆಯಲಿದೆ.
7 ದೇಶಿ, ಒಬ್ಬ ವಿದೇಶಿ ನಾಯಕ: ಐಪಿಎಲ್ ಒಂದು ಡಝನ್ ಆವೃತ್ತಿಗಳನ್ನು ಪೂರೈಸಲಿದೆ. ಪ್ರತಿ ತಂಡದ ನಾಯಕರಿಗೂ ಈ ಐಪಿಎಲ್ ಒಂದೊಂದು ರೀತಿಯಲ್ಲಿ ವಿಶೇಷ. ಎಂ.ಎಸ್.ಧೋನಿ ಪಾಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಕುಟುಂಬವಿದ್ದಂತೆ. ತಂಡವನ್ನು ಮಗುವಂತೆ ಪೋಷಿಸಿ ಬೆಳೆಸಿರುವ ಧೋನಿ, 2 ಆವೃತ್ತಿ ಹೊರಗಿದ್ದರೂ 3 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಇತಿಹಾಸ ಬರೆದಿದ್ದಾರೆ. ಟ್ರೋಫಿ ಉಳಿಸಿಕೊಳ್ಳುವುದು ಧೋನಿ ಮುಂದಿರುವ ದೊಡ್ಡ ಗುರಿ. ವಿರಾಟ್ ಕೊಹ್ಲಿಯ ಆರ್‌ಸಿಬಿ ಕಪ್ ಗೆಲ್ಲದಿದ್ದರೂ, ಅಭಿಮಾನಿಗಳು ಮಾತ್ರ ತಂಡದ ಕೈಬಿಟ್ಟಿಲ್ಲ. ನಿಷ್ಠೆಯಿಂದ ಪ್ರೀತಿಸುತ್ತಾ ಬಂದಿರುವ ಅಭಿಮಾನಿಗಳಿಗೋಸ್ಕರವಾದರೂ ವಿರಾಟ್ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. 2 ಬಾರಿ ಕೆಕೆಆರ್ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಗೌತಮ್ ಗಂಭೀರ್, ಇತ್ತೀಚೆಗೆ ‘ಕೊಹ್ಲಿ ಉತ್ತಮ ನಾಯಕನಲ್ಲ’ ಎಂದಿದ್ದರು. ಅವರ ಟೀಕೆಗೆ ವಿರಾಟ್ ತಕ್ಕ ಉತ್ತರ ನೀಡಲು ಹಪಹಪಿಸುತ್ತಿದ್ದಾರೆ.
ಐಪಿಎಲ್ 2019: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ!
ಅತಿಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿರುವ ತಂಡದ ಮಾಲೀಕರ ಮನಸಂತೋಷ ಪಡಿಸುವ ದೊಡ್ಡ ಜವಾಬ್ದಾರಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೇಲಿದೆ. ನಿರೀಕ್ಷೆಯ ಭಾರವನ್ನು ಹೊತ್ತುಕೊಂಡೇ ರೋಹಿತ್ ವಿಶ್ವಕಪ್‌ಗೂ ಸಿದ್ಧತೆ ನಡೆಸುವ ಜತೆಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಬೇಕಿದೆ. ರೋಹಿತ್ 3 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದು, 4ನೇ ಪ್ರಶಸ್ತಿ ಗೆಲ್ಲುವ ಒತ್ತಡ ಎದುರಿಸುತ್ತಿದ್ದಾರೆ. ಜತೆಗೆ ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾರ ಕೆಲಸದ ಒತ್ತಡದ ಕಡೆಗೂ ರೋಹಿತ್ ಹೆಚ್ಚಿನ ಗಮನ ನೀಡಬೇಕಿದೆ.
ಏಕದಿನ ತಂಡದಿಂದ ಹೊರಬಿದ್ದಿರುವ ಅಜಿಂಕ್ಯ ರಹಾನೆ, ಐಪಿಎಲ್‌ನಲ್ಲಿ ಸಾಮರ್ಥ್ಯ ಸಾಬೀತು ಪಡಿಸುವ ಮೂಲಕ ಬಿಸಿಸಿಐ ಆಯ್ಕೆಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿಯ ಗಮನ ಸೆಳೆಯುವುದಾಗಿ ಹೇಳಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸ್ಟೀವ್ ಸ್ಮಿತ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್‌ರಂತಹ ಘಟಾನುಘಟಿಗಳಿದ್ದು, ಪ್ಲೇ-ಆಫ್‌ಗೇರಬಲ್ಲ ತಂಡಗಳಲ್ಲಿ ಒಂದೆನಿಸಿದೆ.
ತಾವಿನ್ನೂ ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಸೀಮಿತಗೊಂಡಿಲ್ಲ. ಏಕದಿನ, ಟಿ20ಯಲ್ಲೂ ಆಡಬಲ್ಲೆ ಎಂದಿರುವ ಆರ್.ಅಶ್ವಿನ್‌ಗೆ ವಿಶ್ವಕಪ್ ಟಿಕೆಟ್ ಕೈತಪ್ಪುವುದು ಖಚಿತ. ಆದರೆ ತಮ್ಮ ಸ್ಪಿನ್ ಬಲೆಗೆ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಕೆಡವಿ ಗಮನ ಸೆಳೆದರೆ, ಸೀಮಿತ ಓವರ್ ತಂಡಕ್ಕೆ ಮರಳುವ ಅವಕಾಶ ಸಿಗಬಹುದು. ಜತೆಗೆ ಕಿಂಗ್ಸ್ ಇಲೆವೆನ್ ತಂಡಕ್ಕೂ ಲಾಭವಾಗಲಿದೆ.
ಶ್ರೇಯಸ್ ಅಯ್ಯರ್ ತಮಗೆ ಸಿಗಬೇಕಿರುವಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ಗೋಗರೆದರೂ ಬಿಸಿಸಿಐ ಮಾತ್ರ ಕಿವಿಗೊಡುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿರುವ ಶ್ರೇಯಸ್, ತಂಡದ ಅದೃಷ್ಟ ಬದಲಿಸುವ ಜತೆಗೆ ತಮ್ಮ ಅದೃಷ್ಟವನ್ನೂ ಬದಲಿಸಿಕೊಳ್ಳಲು ಎದುರು ನೋಡಲಿದ್ದಾರೆ.
ಕೋಲ್ಕತಾ ನೈಟ್ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್‌ಗೆ ತಂಡವನ್ನು ಪ್ಲೇ-ಆಫ್‌ಗೆ ಕೊಂಡೊಯ್ಯುವ ಜವಾಬ್ದಾರಿ ಜತೆ, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಬೇಕಿರುವ ಪ್ರದರ್ಶನ ತೋರುವ ಒತ್ತಡವೂ ಇದೆ. ಈ ವರ್ಷವೂ ಕೇನ್ ವಿಲಿಯಮ್ಸನ್ ಒಬ್ಬರೇ ವಿದೇಶಿ ನಾಯಕ. ಅವರ ನಾಯಕತ್ವದಲ್ಲಿ ಸನ್ರೈಸರ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದೆ. ಡೇವಿಡ್ ವಾರ್ನರ್ ವಾಪಸಾಗಿರುವುದರಿಂದ ವಿಲಿಯಮ್ಸನ್‌ಗೆ ಅನುಕೂಲವಾಗಲಿದೆ.
ದಿಗ್ಗಜರ ಮೇಲೆ ನಿರೀಕ್ಷೆ: ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ತಮ್ಮ ಕ್ಷಣಗಳನ್ನು ಸೃಷ್ಟಿಸಿಕೊಳ್ಳಲು ಕಾತರರಾಗಿದ್ದಾರೆ. ಶುಭ್‌ಮನ್ ಗಿಲ್, ಪೃಥ್ವಿ ಶಾ ಭಾರತ ತಂಡಕ್ಕೆ ಬಡ್ತಿ ಪಡೆಯಲು ಕಾಯುತ್ತಿದ್ದಾರೆ. ಶ್ರೇಷ್ಠಾತಿಶ್ರೇಷ್ಠರ ನಡುವೆ ವರುಣ್ ಚಕ್ರವರ್ತಿ, ಪ್ರಯಾಸ್ ರಾಯ್ ಬರ್ಮನ್ ಇಲ್ಲವೇ ಪ್ರಭ್‌ಸಿಮ್ರನ್ ಸಿಂಗ್‌ರಂತಹ ಹೊಸ ಪ್ರತಿಭೆಗಳು ಟೂರ್ನಿಯ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರೆ ಅಚ್ಚರಿಯಿಲ್ಲ. ಐಪಿಎಲ್ ಇಂತಹ ಅಚ್ಚರಿಗಳನ್ನು ನೀಡುತ್ತಲೇ ಬಂದಿದೆ. ಮುಂದಿನ 7 ವಾರಗಳ ಕಾಲ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಖಚಿತ.
20 ಕೋಟಿ ರುಪಾಯಿ ಚಾಂಪಿಯನ್ ತಂಡಕ್ಕೆ ಸಿಗಲಿರುವ ಪ್ರಶಸ್ತಿ ಮೊತ್ತ
12.5 ಕೋಟಿ ರನ್ನರ್-ಅಪ್ ತಂಡಕ್ಕೆ ಸಿಗಲಿರುವ ಪ್ರಶಸ್ತಿ ಮೊತ್ತ
08 ಈ ಬಾರಿ ಐಪಿಎಲ್‌ಗೆ ಒಟ್ಟು 8 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
56 ಲೀಗ್ ಹಂತದಲ್ಲಿ ಒಟ್ಟು 56 ಪಂದ್ಯಗಳು ನಡೆಯಲಿವೆ.
07 ಈ ಬಾರಿ 7 ತಂಡಗಳಿಗೆ ಭಾರತೀಯ ನಾಯಕರಿದ್ದಾರೆ.