RCB ಬೂಮ್ರಾಗೆ ಹೆಚ್ಚಿದ ಬೇಡಿಕೆ- ಇತರ IPL ತಂಡಗಳಿಂದ ಆಹ್ವಾನ

By Web DeskFirst Published Mar 30, 2019, 2:06 PM IST
Highlights

ಜಸ್ಪ್ರೀತ್ ಬುಮ್ರಾ ಶೈಲಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡೋ ಪ್ರತಿಭೆ RCBಯಲ್ಲೂ ಇದ್ದಾರೆ. ಇವರೇ ಜ್ಯೂನಿಯರ್ ಬುಮ್ರಾ. RCB ತಂಡ ನೆಟ್ ಬೌಲರ್ ಆಗಿರೋ ದೊಡ್ಡಬಳ್ಳಾಪುರದ ಜ್ಯೂ.ಬುಮ್ರಾ ಕುರಿತು ವಿಶೇಷ ವರದಿ ಇಲ್ಲಿದೆ.

ಬೆಂಗಳೂರು(ಮಾ.30): ಐಪಿಎಲ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ತಮ್ಮ ಯಾರ್ಕರ್‌ಗಳಿಂದ ಬ್ಯಾಟ್ಸ್‌ಮನ್‌ಗಳ ಜೀವನವನ್ನು ಕಷ್ಟವಾಗಿಸುತ್ತಿದ್ದರೆ, ಜೂನಿಯರ್‌ ಬೂಮ್ರಾ ಎಂದೇ ಕರೆಸಿಕೊಳ್ಳುತ್ತಿರುವ ದೊಡ್ಡಬಳ್ಳಾಪುರದ ಮಹೇಶ್‌ ಕುಮಾರ್‌ ನೆಟ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿದ್ದಾರೆ. ಕಳೆದ 3 ವರ್ಷದಿಂದ ಆರ್‌ಸಿಬಿ ತಂಡದ ನೆಟ್‌ ಬೌಲರ್‌ ಆಗಿ, ಮೀಸಲು ಪಡೆಯಲ್ಲಿರುವ ಮಹೇಶ್‌ಗೆ ಕಣಕ್ಕಿಳಿಯುವ ಅವಕಾಶವಂತೂ ಇನ್ನೂ  ಸಿಕ್ಕಿಲ್ಲ. ನೆಟ್ಸ್‌ ಅಭ್ಯಾಸಕ್ಕೆ ಮಾತ್ರ ಸೀಮಿತವಾಗಿರುವ ಮಹೇಶ್‌ ಸದ್ಯದಲ್ಲೇ ಮೈದಾನಕ್ಕಿಳಿದು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಮಹೇಶ್‌ಗೆ ಇತರ ಐಪಿಎಲ್‌ ತಂಡಗಳಿಂದ ಬುಲಾವ್‌ ಬಂದಿದೆ.

ಇದನ್ನೂ ಓದಿ: RCB ತಂಡಕ್ಕೆ ಬೌಲಿಂಗ್ - ಕರ್ನಾಟಕದ ಬುಮ್ರಾ ವೀಡಿಯೋ ವೈರಲ್!

ಜಹೀರ್‌ರಿಂದ ಮೆಚ್ಚುಗೆ: ಬೆಂಗಳೂರಲ್ಲಿ ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಮುಂಬೈ ತಂಡದ ಬೌಲಿಂಗ್‌ ತರಬೇತುದಾರ ಜಹೀರ್‌ ಖಾನ್‌, ಮಹೇಶ್‌ ಬೌಲಿಂಗ್‌ ಕಂಡು ಬೆರಗಾದರು. ಯುವ ವೇಗಿಗೆ ಜಹೀರ್‌ ಕೆಲ ಸಲಹೆಗಳನ್ನು ಸಹ ನೀಡಿದರು. ಜತೆಗೆ ಮುಂಬೈ ತಂಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಹೇಶ್‌ ಬೌಲಿಂಗ್‌ ಮಾಡುವ ವಿಡಿಯೋವನ್ನು ಹಾಕಿದ್ದು, ವೈರಲ್‌ ಸಹ ಆಗಿದೆ. ಇದೇ ವೇಳೆ ಚಾಂಪಿಯನ್‌ ತಂಡವೊಂದರ ವಿಡಿಯೋ ವಿಶ್ಲೇಷಕ ಮಹೇಶ್‌ಗೆ ತಮ್ಮ ಬೌಲಿಂಗ್‌ ವಿಡಿಯೋಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: 12ನೇ ಆವೃತ್ತಿ IPLನಲ್ಲಿ ಚೊಚ್ಚಲ ಶತಕ- ದಾಖಲೆ ಬರೆದ ಸಂಜು ಸಾಮ್ಸನ್

ಆರ್‌ಸಿಬಿಗೆ ನಷ್ಟ?: ಆರ್‌ಸಿಬಿ ತಂಡ ಕೈಯಲ್ಲಿ ತುಪ್ಪ ಇಟ್ಟುಕೊಂಡು ಬೆಣ್ಣಿಗೆ ಹುಡುಕಾಡುತ್ತಿದೆ. ಸ್ವತಃ ಬೂಮ್ರಾರಿಂದ ಬೆನ್ನು ತಟ್ಟಿಸಿಕೊಂಡಿರುವ ಮಹೇಶ್‌ಗೆ ಅವಕಾಶವನ್ನೇ ನೀಡಿಲ್ಲ. ಐಪಿಎಲ್‌ನಿಂದಾಗೇ ಮಯಾಂಕ್‌ ಮರ್ಕಂಡೆ, ವರುಣ್‌ ಚಕ್ರವರ್ತಿ, ಕೆ.ಸಿ.ಕಾರ್ಯಪ್ಪ, ಕೃನಾಲ್‌ ಪಾಂಡ್ಯ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಕ್ರಿಕೆಟ್‌ ಜಗತ್ತಿಗೆ ಪರಿಚಿತರಾಗಿದ್ದಾರೆ. ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ರಸಿಖ್‌ ಸಲಾಂ ಎನ್ನುವ 17 ವರ್ಷದ ಕಾಶ್ಮೀರಿ ವೇಗಿಯನ್ನು ಕಣಕ್ಕಿಳಿಸಿ, ಆತನ ಪ್ರತಿಭೆಯನ್ನು ಎಲ್ಲರು ಕೊಂಡಾಡಲು ವೇದಿಕೆ ಕಲ್ಪಿಸಿದೆ. ಆದರೆ ಆರ್‌ಸಿಬಿ ಕಳೆದ 3 ವರ್ಷಗಳಿಂದ ಮಹೇಶ್‌ರಂತಹ ಪ್ರತಿಭೆಯನ್ನು ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೆಟ್ಸ್‌ನಲ್ಲಿ ಬೌಲ್‌ ಮಾಡಲು ಇರಿಸಿಕೊಂಡಿದೆ ಹೊರತು, ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿಲ್ಲ.

click me!