ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!

By Web DeskFirst Published Apr 21, 2019, 7:33 AM IST
Highlights

ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!| ಡೆಲ್ಲಿಗೆ 5 ವಿಕೆಟ್‌ ಜಯ| ತವರಿನಲ್ಲಿ 2ನೇ ಜಯ ಸಾಧಿಸಿದ ಕ್ಯಾಪಿಟಲ್ಸ್‌| ಪಂಜಾಬ್‌ 163/7, ಗೇಲ್‌ 69 ರನ್‌| ಡೆಲ್ಲಿ 166/5, ಶ್ರೇಯಸ್‌ ಅಯ್ಯರ್‌ 58*, ಶಿಖರ್‌ ಧವನ್‌ 56 ರನ್‌| 3ನೇ ಸ್ಥಾನ ಕಾಯ್ದುಕೊಂಡ ಡೆಲ್ಲಿ ತಂಡ

ನವದೆಹಲಿ[ಏ.21]: ಫಿರೋಜ್‌ ಶಾ ಕೋಟ್ಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನ ಸಿಹಿ ಸವಿದಿದೆ. ಈ ಆವೃತ್ತಿಯಲ್ಲಿ ಇಲ್ಲಿ 3 ಸೋಲು ಕಂಡಿದ್ದ ಡೆಲ್ಲಿ, ಶನಿವಾರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿತು. 10 ಪಂದ್ಯಗಳಲ್ಲಿ 6 ಜಯ ಸಾಧಿಸಿರುವ ಡೆಲ್ಲಿ, 12 ಅಂಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನ ಉಳಿಸಿಕೊಂಡಿದೆ. ಇನ್ನುಳಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ. 4ರಲ್ಲಿ 1 ಪಂದ್ಯ ಗೆದ್ದರೂ, ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರಲಿದೆ.

ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕ್ರಿಸ್‌ ಗೇಲ್‌ ಸ್ಫೋಟಕ ಶತಕದ ಹೊರತಾಗಿಯೂ 7 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ, ಇನ್ನಿಂಗ್ಸ್‌ ಆರಂಭದಲ್ಲೇ ಪೃಥ್ವಿ ಶಾ (13) ವಿಕೆಟ್‌ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಜತೆಯಾದ ಶಿಖರ್‌ ಧವನ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ತಂಡಕ್ಕೆ ಚೇತರಿಕೆ ನೀಡಿದರು.

ಇವರಿಬ್ಬರ ನಡುವೆ 92 ರನ್‌ ಜೊತೆಯಾಟ ಮೂಡಿಬಂತು. ಭರ್ಜರಿಯಾಗಿ ಸಾಗುತ್ತಿದ್ದ ಧವನ್‌ ಇನ್ನಿಂಗ್ಸ್‌ 14ನೇ ಓವರ್‌ನಲ್ಲಿ ಮುಕ್ತಾಯಗೊಂಡಿತು. 41 ಎಸೆತಗಳಲ್ಲಿ 56 ರನ್‌ ಗಳಿಸಿ ಧವನ್‌ ಔಟಾದರು. ರಿಷಭ್‌ ಪಂತ್‌ (06) ಮತ್ತೊಮ್ಮೆ ಬೇಜವಾಬ್ದಾರಿತನ ತೋರಿ ವಿಕೆಟ್‌ ಕಳೆದುಕೊಂಡರು. ಕಾಲಿನ್‌ ಇನ್‌ಗ್ರಾಂ (19) 4 ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಕೊನೆ ಓವರಲ್ಲಿ ಗೆಲುವಿಗೆ 6 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಶ್ರೇಯಸ್‌ ಬೌಂಡರಿ ಬಾರಿಸಿ, ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಡೆಲ್ಲಿ ನಾಯಕ 49 ಎಸೆತಗಳಲ್ಲಿ 58 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಗೇಲ್‌ ಧಮಾಕ: ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಪಂಜಾಬ್‌ ಪರ ಕ್ರಿಸ್‌ ಗೇಲ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದ ಗೇಲ್‌ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 37 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 69 ರನ್‌ ಸಿಡಿಸಿದ ಗೇಲ್‌ ತಂಡದ ಬೃಹತ್‌ ಮೊತ್ತದ ಕನಸಿಗೆ ಪುಷ್ಠಿ ನೀಡಿದರು. ಆದರೆ ಮಧ್ಯಮ ಕ್ರಮಾಂಕ ದಿಢೀರ್‌ ಕುಸಿದ ಕಾರಣ, ಪಂಜಾಬ್‌ 20 ಓವರಲ್ಲಿ 7 ವಿಕೆಟ್‌ಗೆ 163 ರನ್‌ ಗಳಿಸಿತು. ಮನ್‌ದೀಪ್‌ ನೀಡಿದ 30 ರನ್‌ ಕೊಡುಗೆ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಕಾರಣವಾಯಿತು.

ಟರ್ನಿಂಗ್‌ ಪಾಯಿಂಟ್‌: ಗೇಲ್‌ ಔಟಾದ ಬಳಿಕ ಪಂಜಾಬ್‌ ಗಳಿಸಿದ್ದು 57 ರನ್‌ ಮಾತ್ರ. ಪೃಥ್ವಿ ಶಾ ಬೇಗನೆ ಔಟಾದ ಬಳಿಕ 2ನೇ ವಿಕೆಟ್‌ಗೆ ಧವನ್‌ ಹಾಗೂ ಶ್ರೇಯಸ್‌ ನಡುವೆ ಮೂಡಿಬಂದ 92 ರನ್‌ ಜೊತೆಯಾಟ ಡೆಲ್ಲಿ ಗೆಲುವಿಗೆ ಕಾರಣವಾಯಿತು.

click me!