
ಚೆನ್ನೈ[ಮೇ.01]: ಪ್ಲೇ-ಅಫ್ ಹತ್ತಿರವಾಗುತ್ತಿದ್ದಂತೆ ತಂಡಗಳ ಲೆಕ್ಕಾಚಾರವೂ ತೀವ್ರಗೊಳ್ಳುತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ನೆಟ್ ರನ್‌ರೇಟ್‌ನಲ್ಲಿ ಹಿನ್ನಡೆ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬುಧವಾರ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಈಗಾಗಲೇ ಪ್ಲೇ-ಆಫ್‌ಗೇರಿರುವ ಉಭಯ ತಂಡಗಳು, ಈ ಪಂದ್ಯ ಗೆದ್ದು ಕ್ವಾಲಿಫೈಯರ್ 1 ಪಂದ್ಯಕ್ಕೆ ಅರ್ಹತೆ ಪಡೆಯಲು ಕಾತರಿಸುತ್ತಿವೆ. 10ನೇ ಬಾರಿ ಪ್ಲೇ-ಆಫ್‌ಗೇರಿರುವ ಚೆನ್ನೈ, 2012ರ ಬಳಿಕ ಮೊದಲ ಬಾರಿಗೆ ಪ್ಲೇ-ಆಫ್ ಪ್ರವೇಶಿಸಿರುವ ಡೆಲ್ಲಿ ನಡುವಿನ ಪೈಪೋಟಿ ಭಾರಿ ಕುತೂಹಲ ಹುಟ್ಟಿಸಿದೆ.
12 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿರುವ ಚೆನ್ನೈ 2ನೇ ಸ್ಥಾನದಲ್ಲಿದೆ. ಡೆಲ್ಲಿ ಸಹ 16 ಅಂಕಗಳನ್ನು ಹೊಂದಿದೆಯಾದರೂ, ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಕಾರಣ, ಅಗ್ರಸ್ಥಾನ ಪಡೆದಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 18 ಅಂಕ ತಲುಪಲಿದೆ. ಇನ್ನುಳಿದಿರುವ ತಂಡಗಳ ಪೈಕಿ 18 ಅಂಕ ತಲುಪುವ ಅವಕಾಶವಿರುವುದು ಮುಂಬೈ ಇಂಡಿಯನ್ಸ್‌ಗೆ ಮಾತ್ರ. 12 ಪಂದ್ಯಗಳಿಂದ 14 ಅಂಕ ಗಳಿಸಿರುವ ಮುಂಬೈ 2 ಪಂದ್ಯಗಳಲ್ಲಿ ಗೆದ್ದರೆ 18 ಅಂಕ ಗಳಿಸಿ, ಅಗ್ರ 2ರಲ್ಲಿ ಸ್ಥಾನ ಪಡೆಯಲಿದೆ. 4ನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಬಳಿ 12 ಅಂಕಗಳಿದ್ದು, ಉಳಿದ 2 ಪಂದ್ಯಗಳಲ್ಲಿ ಗೆದ್ದರೆ ಗರಿಷ್ಠ 16 ಅಂಕ ತಲುಪಬಹುದು. ಹೀಗಾಗಿ ಬುಧವಾರದ ಪಂದ್ಯ ಗೆಲ್ಲುವ ತಂಡ ಕ್ವಾಲಿಫೈಯರ್ 1ಗೆ ಅರ್ಹತೆ ಗಿಟ್ಟಿಸಲಿದೆ.
ಮಳೆಗೆ ರದ್ದಾಯ್ತು RCB Vs RR ಮ್ಯಾಚ್- ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಬಾಯ್ಸ್!
ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾಲಿಫೈಯರ್ 1ಗೆ ಅರ್ಹತೆ ಪಡೆಯಲಿವೆ. ಈ ಪಂದ್ಯದಲ್ಲಿ ಸೋಲುವ ತಂಡಕ್ಕೆ ಫೈನಲ್‌ಗೇರಲು ಮತ್ತೊಂದು ಅವಕಾಶ ಇರಲಿದೆ. ಹೀಗಾಗಿ, ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಡಲು ತಂಡಗಳು ಪೈಪೋಟಿ ನಡೆಸಲಿವೆ.
ಕಳೆದ ಪಂದ್ಯದಲ್ಲಿ ಜ್ವರದ ಕಾರಣ, ಎಂ.ಎಸ್.ಧೋನಿ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಬಗ್ಗೆ ಇನ್ನೂ ಅನುಮಾನವಿದ್ದು, ಪಂದ್ಯಕ್ಕೂ ಮುನ್ನ ಅವರ ಅರೋಗ್ಯ ಸ್ಥಿತಿ ನೋಡಿಕೊಂಡು ನಿರ್ಧರಿಸಲಿದ್ದೇವೆ ಎಂದು ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಪಿಚ್ ರಿಪೋರ್ಟ್
ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಗಿದ್ದು, ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವೆನಿಸಲಿದೆ. ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಒಂದರಲ್ಲೂ 180ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿಲ್ಲ. ಮೊದಲು ಫೀಲ್ಡ್ ಮಾಡುವ ತಂಡಕ್ಕೆ ಲಾಭ ಹೆಚ್ಚು. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಒಟ್ಟು ಮುಖಾಮುಖಿ: 19
ಚೆನ್ನೈ: 13
ಡೆಲ್ಲಿ: 06
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ವಿಜಯ್, ವಾಟ್ಸನ್, ರೈನಾ, ರಾಯುಡು, ಜಾಧವ್, ಶೋರೆ, ಬ್ರಾವೋ, ಸ್ಯಾಂಟ್ನರ್, ದೀಪಕ್, ಹರ್ಭಜನ್, ತಾಹಿರ್.
ಡೆಲ್ಲಿ: ಪೃಥ್ವಿ, ಧವನ್, ಶ್ರೇಯಸ್, ಪಂತ್, ಇನ್‌ಗ್ರಾಂ, ರುದರ್‌ಫೋರ್ಡ್, ಅಕ್ಷರ್, ಸಂದೀಪ್, ಮಿಶ್ರಾ, ರಬಾಡ, ಇಶಾಂತ್.
ಸ್ಥಳ: ಚೆನ್ನೈ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.