ವಿಶ್ವ ಬ್ಯಾಡ್ಮಿಂಟನ್ ರ್‍ಯಾಂಕಿಂಗ್ ಪುರುಷರ ಡಬಲ್ಸ್ ನೂತನ ಪಟ್ಟಿಯಲ್ಲಿ 2ನೇ ಸ್ಥಾನ
ಇದು ಭಾರತೀಯ ಜೋಡಿಯ ವೃತ್ತಿಬದುಕಿನ ಶ್ರೇಷ್ಠ ಸಾಧನೆ
ಐತಿಹಾಸಿಕ ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತದ ಜೋಡಿ
ನವದೆಹಲಿ(ಜು.26): ಕಳೆದ ವಾರ ಕೊರಿಯಾ ಓಪನ್ ಸೂಪರ್ 500 ಟೂರ್ನಿ ಗೆದ್ದ ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಮಂಗಳವಾರ ಪ್ರಕಟಗೊಂಡ ವಿಶ್ವ ಬ್ಯಾಡ್ಮಿಂಟನ್ ರ್‍ಯಾಂಕಿಂಗ್ ಪುರುಷರ ಡಬಲ್ಸ್ ನೂತನ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಇದು ಭಾರತೀಯ ಜೋಡಿಯ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದ್ದು, ಐತಿಹಾಸಿಕ ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್, ಚೀನಾದ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ಜೋಡಿಯನ್ನು ಹಿಂದಿಕ್ಕಿತು. ಚೀನಾ ಜೋಡಿಯನ್ನು ಭಾರತೀಯರು ಕೊರಿಯಾ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು.
ಫೈನಲ್‌ನಲ್ಲಿ ವಿಶ್ವ ನಂ.1 ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಹಾಗೂ ಮುಹಮದ್ ರಿಯಾನ್‌ರನ್ನು ಮಣಿಸಿ, ಈ ವರ್ಷದ 4ನೇ ಪ್ರಶಸ್ತಿ ಜಯಿಸಿದ್ದ ಸಾತ್ವಿಕ್-ಚಿರಾಗ್, ಸದ್ಯ ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದು, ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ವಿಶ್ವ ಟೂರ್ ಟೂರ್ನಿಗಳಲ್ಲಿ ಸತತ 10 ಪಂದ್ಯ ಗೆದ್ದಿರುವ ಭಾರತೀಯ ಜೋಡಿಯು ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.
Korea Open 2023: ಸಾತ್ವಿಕ್-ಚಿರಾಗ್ ಜೋಡಿಯ ಮುಡಿಗೆ ಕೊರಿಯಾ ಓಪನ್ ಗರಿ..!
ಭಾರತೀಯ ಜೋಡಿಗೂ ಇಂಡೋನೇಷ್ಯಾ ಜೋಡಿಗೂ 4418 ರ್‍ಯಾಂಕಿಂಗ್ ಅಂಕ ವ್ಯತ್ಯಾಸವಿದೆ. ಜಪಾನ್ ಓಪನ್‌ನಲ್ಲಿ ಫಜರ್ ಹಾಗೂ ರಿಯಾನ್ ಆರಂಭಿಕ ಸುತ್ತುಗಳಲ್ಲೇ ಹೊರಬಿದ್ದು, ಸಾತ್ವಿಕ್-ಚಿರಾಗ್ ಸೆಮಿಫೈನಲ್ ಅಥವಾ ಫೈನಲ್ ಪ್ರವೇಶಿಸಿದರೆ ರ್‍ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವ ಅವಕಾಶವಿರಲಿದೆ.
17ನೇ ಸ್ಥಾನದಲ್ಲೇ ಸಿಂಧು: ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ವಾರ 17ನೇ ಸ್ಥಾನಕ್ಕೆ ಕುಸಿದಿದ್ದ ಪಿ.ವಿ.ಸಿಂಧು, ಈ ವಾರ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೈನಾ ನೆಹ್ವಾಲ್ ಒಂದು ಸ್ಥಾನ ಕೆಳಗಿಳಿದು 37ನೇ ಸ್ಥಾನದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ 10ನೇ ಸ್ಥಾನದಲ್ಲಿದ್ದಾರೆ.
ಶ್ರೀಕಾಂತ್, ಪ್ರಣಯ್ ಪ್ರಿ ಕ್ವಾರ್ಟರ್ ಪ್ರವೇಶ
ಟೋಕಿಯೋ: ಭಾರತದ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಇಲ್ಲಿ ಮಂಗಳವಾರದಿಂದ ಆರಂಭಗೊಂಡ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಶ್ರೀಕಾಂತ್ ತೈವಾನ್‌ನ ಚೌ ಟಿಯಾನ್ ಚೆನ್ ವಿರುದ್ಧ 21-13, 21-13ರಲ್ಲಿ ಗೆದ್ದರೆ, ಪ್ರಯಣ್ ಚೀನಾದ ಲೀ ಶಿಫೆಂಗ್ ವಿರುದ್ಧ 21-17, 21-13ರಲ್ಲಿ ಜಯಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲೇ ಜಪಾನ್‌ನ ಅಕನೆ ಯಮಗುಚಿ ವಿರುದ್ಧ ಸೋಲುಂಡರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರಿ ಕ್ವಾರ್ಟರ್‌ಗೇರಿದರು.
ಸೆಕ್ಸಿ ಫೋಟೋಗಳನ್ನು ಹಂಚಿಕೊಂಡ ಮಾಜಿ ವಿಂಬಲ್ಡನ್ ಚಾಂಪಿಯನ್ ಮರಿಯಾ ಶೆರಪೋವಾ..!
ಹಾಕಿ: ಭಾರತ ತಂಡದಿಂದ ಲಲಿತ್, ಅಭಿಷೇಕ್ ಔಟ್
ನವದೆಹಲಿ: ಅ.3ರಿಂದ 12ರ ವರೆಗೂ ಚೆನ್ನೈನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಬುಧವಾರ 18 ಸದಸ್ಯರ ಭಾರತ ತಂಡ ಪ್ರಕಟಗೊಂಡಿತು. ಅನುಭವಿ ಆಟಗಾರ ಲಲಿತ್ ಉಪಾಧ್ಯಾಯ ಜೊತೆ ಅಭಿಷೇಕ್, ಪವನ್, ದಿಲ್‌ಪ್ರೀತ್ ಹಾಗೂ ಸಿಮ್ರನ್‌ಜೀತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ತಂಡ ಮುನ್ನಡೆಸಲಿದ್ದು, ಪಿ.ಆರ್.ಶ್ರೀಜೇಶ್ ಗೋಲ್‌ಕೀಪರ್ ಆಗಿ ಆಯ್ಕೆಯಾಗಿದ್ದಾರೆ.