ಕುಲ್ದೀಪ್ 4 ವಿಕೆಟ್ ಪಡೆದರೆ, ಚಾಹಲ್ ಹಾಗೂ ಪಾಂಡ್ಯ 2 ಮತ್ತು ಬುಮ್ರಾ 1 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪೋರ್ಟ್ ಎಲಿಜಬೆತ್(ಫೆ.14): ಆಫ್ರಿಕಾ ನೆಲದಲ್ಲೇ ಹರಿಣಗಳನ್ನು ಬೇಟೆಯಾಡಿದ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಏಕದಿನ ಸರಣಿ ಜಯಿಸುವುದರೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ 25 ವರ್ಷಗಳಿಂದಲೂ ಕನ್ನಡಿಯೊಳಗಿನ ಗಂಟು ಆಗಿದ್ದ ಸರಣಿ ಜಯದ ಕನಸು ಟೀಂ ಇಂಡಿಯಾ ನನಸು ಮಾಡಿಕೊಂಡಿದೆ. ಆಫ್ರಿಕಾ ತಂಡವನ್ನು 73 ರನ್'ಗಳಿಂದ ಮಣಿಸುವುದರೊಂದಿಗೆ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ, ಜತೆಗೆ ಟೆಸ್ಟ್ ಸರಣಿ ಸೋಲಿಗೆ ಮುಯ್ಯಿ ತೀರಿಸಿಕೊಂಡಂತಾಗಿದೆ.
ಟೀಂ ಇಂಡಿಯಾ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನತ್ತಿದ ಆಫ್ರಿಕಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ಆಮ್ಲಾ-ಮಾರ್ಕ್'ರಮ್ ಜೋಡಿ 52 ರನ್ ಕಲೆಹಾಕಿತು. ಈ ವೇಳೆ ಬುಮ್ರಾ ಆಫ್ರಿಕಾಗೆ ಮೊದಲ ಶಾಕ್ ನೀಡಿದರು. 32 ರನ್ ಬಾರಿಸಿದ್ದ ನಾಯಕ ಮಾರ್ಕ್'ರಮ್, ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಕೆಲವೇ ಕ್ಷಣಗಳಲ್ಲಿ ಡುಮಿನಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಬಲಿ ಪಡೆದ ಪಾಂಡ್ಯ ಭಾರತದ ಪಾಲಿಗೆ ಮುನ್ನಡೆ ದೊರಕಿಸಿಕೊಟ್ಟರು. ಈ ವೇಳೆ 4ನೇ ವಿಕೆಟ್'ಗೆ ಜತೆಯಾದ ಮಿಲ್ಲರ್ ಹಾಗೂ ಆಮ್ಲಾ 62 ರನ್'ಗಳ ಜತೆಯಾಟವಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸರೆಯಾದರು. ಈ ವೇಳೆ ಚಾಹಲ್ ಬೌಲಿಂಗ್'ನಲ್ಲಿ ಮಿಲ್ಲರ್(36) ದೊಡ್ಡ ಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡರು. ಒಂದೆಡೆ ವಿಕೆಟ್ ಉರುಳುತ್ತಿದ್ದರು ಮತ್ತೊಂದೆಡೆ ನೆಲಕಚ್ಚಿ ಆಡಿದ ಹಾಶೀಂ ಆಮ್ಲಾ 46 ರನ್ ಗಳಿಸಿದ್ದಾಗ 7500 ರನ್'ಗಡಿ ದಾಟಿದರು. ಜತೆಗೆ 35ನೇ ಅರ್ಧಶತಕ ಸಿಡಿಸಿದರು. ವೈಯುಕ್ತಿಕ 71 ರನ್'ಗಳಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್'ಗೆ ಬಲಿಯಾದರು. ಹಾರ್ದಿಕ್ ಚುರುಕಿನ ಕ್ಷೇತ್ರ ರಕ್ಷಣೆಯಿಂದಾಗಿ ಆಮ್ಲಾ ಪೆವಿಲಿಯನ್ ಸೇರಬೇಕಾಯಿತು. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಹೆನ್ರಿಚ್ ಕ್ಲಸೇನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರಾದರೂ ಅವರಿಗೆ ಉಳಿದ ಬ್ಯಾಟ್ಸ್'ಮನ್'ಗಳು ತಕ್ಕ ಸಾಥ್ ನೀಡಲಿಲ್ಲ. ಹೆನ್ರಿಚ್ 42 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿ ಕುಲ್ದೀಪ್'ಗೆ ವಿಕೆಟ್ ಒಪ್ಪಿಸಿದರು. ಮರು ಓವರ್'ನಲ್ಲೇ ಪೆಲುಕ್ವೆನೋ ಅವರನ್ನೂ ಕುಲ್ದೀಪ್ ಕ್ಲೀನ್ ಬೌಲ್ಡ್ ಮಾಡಿದರು. ಉಳಿದ ಬಾಲಂಗೋಚಿಗಳು ಸ್ಪಿನ್ನರ್ ದಾಳಿಗೆ ತತ್ತರಿಸಿ 201 ರನ್'ಗಳಿಗೆ ಸರ್ವಪತನ ಕಂಡರು.
ಕುಲ್ದೀಪ್ 4 ವಿಕೆಟ್ ಪಡೆದರೆ, ಚಾಹಲ್ ಹಾಗೂ ಪಾಂಡ್ಯ 2 ಮತ್ತು ಬುಮ್ರಾ 1 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ 274 ರನ್ ಕಲೆಹಾಕಿತ್ತು. ರೋಹಿತ್ ಭರ್ಜರಿ ಶತಕ: ಆಫ್ರಿಕಾ ಗೆಲ್ಲಲು 275 ಟಾರ್ಗೆಟ್
ಸಂಕ್ಷಿಪ್ತ ಸ್ಕೋರ್:
ಭಾರತ: 274/7
ರೋಹಿತ್ ಶರ್ಮಾ: 115
ಎನ್ಜಿಡಿ: 51/4
ದಕ್ಷಿಣ ಆಫ್ರಿಕಾ: 201/10
ಆಮ್ಲಾ: 71
ಕುಲ್ದೀಪ್: 57/4