ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲುಂಡಿದ್ದ ಬಳಿಕ ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಎರಡು ತಂಡಗಳ ಬಲಾಬಲಗಳ ವಿಶ್ಲೇಷಣೆ ಇಲ್ಲಿದೆ ನೋಡಿ...
ಗಯಾನ[ಆ.08): ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ತಂಡ ಮೊದಲ ಬಾರಿಗೆ 50 ಓವರ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಗುರುವಾರದಿಂದ ವೆಸ್ಟ್‌ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಇಲ್ಲಿ ಮೊದಲ ಪಂದ್ಯ ನಡೆಯಲಿದೆ.
undefined
2 ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಕ್ರಿಕೆಟಿಗರಿವರು
3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಯಶಸ್ವಿ ಆರಂಭಿಕ ಜೋಡಿಯಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಮತ್ತೆ ಒಂದಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಒಂದೆರಡು ಶತಕ ಸಿಡಿಸುವ ಗುರಿ ಹೊಂದಿದ್ದಾರೆ. ಈ ಪ್ರವಾಸದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಪ್ರೇಲಿಯಾವನ್ನು ಎದುರಿಸಲಿರುವ ಭಾರತ ತಂಡ, ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಲಯ ಕಾಪಾಡಿಕೊಳ್ಳಬೇಕೆಂದು ಎದುರು ನೋಡುತ್ತಿದೆ.
ರಾಹುಲ್ ದ್ರಾವಿಡ್‌ಗೆ ನೋಟೀಸ್; BCCI ವಿರುದ್ಧ ಕ್ರಿಕೆಟಿಗರು ಗರಂ!
4ನೇ ಕ್ರಮಾಂಕಕ್ಕೆ ರಾಹುಲ್?: ಧವನ್ ವಾಪಸಾಗಿರುವ ಕಾರಣ, ಕೆ.ಎಲ್.ರಾಹುಲ್ 4ನೇ ಕ್ರಮಾಂಕಕ್ಕೆ ವಾಪಸಾಗಬೇಕಿದೆ. ಎಂ.ಎಸ್.ಧೋನಿ ಇಲ್ಲದ ಕಾರಣ ರಿಷಭ್ ಪಂತ್‌ರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದೊಮ್ಮೆ ಪಂತ್‌ಗೆ 4ನೇ ಕ್ರಮಾಂಕ ನೀಡಲು ತಂಡ ನಿರ್ಧರಿಸಿದರೆ ರಾಹುಲ್ ಬೆಂಚ್ ಕಾಯಬೇಕಾಗುತ್ತದೆ. 4ರಲ್ಲಿ ರಾಹುಲ್, 5ನೇ ಕ್ರಮಾಂಕದಲ್ಲಿ ರಿಷಭ್ ಹಾಗೂ 6ನೇ ಕ್ರಮಾಂಕದಲ್ಲಿ ಕೇದಾರ್ ಜಾಧವ್‌ರನ್ನು ಆಡಿಸುವ ಸಾಧ್ಯತೆಯೂ ಇದೆ.
ವಿಶ್ವಕಪ್‌ನಲ್ಲಿ ಜಾಧವ್‌ರನ್ನು ಬೌಲರ್ ಆಗಿ ಬಳಸಿಕೊಳ್ಳದ ಭಾರತ, ಈ ಸರಣಿಯಲ್ಲಿ ಅವರ ಬೌಲಿಂಗ್ ಸೇವೆ ಪಡೆಯುತ್ತದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ಕೇವಲ ನಾಲ್ವರು ತಜ್ಞ ಬೌಲರ್‌ಗಳೊಂದಿಗೆ ತಂಡ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಮಧ್ಯಮ ಕ್ರಮಾಂಕದ ಎರಡು ಸ್ಥಾನಗಳಿಗೆ ಜಾಧವ್, ರಾಹುಲ್, ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಸ್ಪರ್ಧೆ ಇದೆ.
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ!
ಭುವಿಗೆ ವಿಶ್ರಾಂತಿ?: 3 ಟಿ20 ಪಂದ್ಯಗಳಲ್ಲೂ ಆಡಿದ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಿ, ಮೊಹಮದ್ ಶಮಿಗೆ ಬೌಲಿಂಗ್ ಪಡೆಯ ಮುಂದಾಳತ್ವ ನೀಡುವ ಸಾಧ್ಯತೆ ಇದೆ. ನವ್‌ದೀಪ್ ಸೈನಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಖಲೀಲ್ ಅಹ್ಮದ್ ಮತ್ತೊಮ್ಮೆ ಸಾಮರ್ಥ್ಯ ಸಾಬೀತು ಪಡಿಸಲ ಉತ್ಸುಕರಾಗಿದ್ದಾರೆ. ಚಹಲ್, ಕುಲ್ದೀಪ್, ಜಡೇಜಾ ಮೂವರ ಪೈಕಿ ಇಬ್ಬರಿಗೆ ಸ್ಥಾನ ಸಿಗಬಹುದು.
ಗೇಲ್‌ಗೆ ಕೊನೆ ಏಕದಿನ ಸರಣಿ: ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ಪಾಲಿಗೆ ಇದು ಕೊನೆ ಏಕದಿನ ಸರಣಿ ಆಗಲಿದೆ. ಗೇಲ್ ಸೇರ್ಪಡೆಯಿಂದ ವಿಂಡೀಸ್ ಬಲ ಹೆಚ್ಚಿದೆ. ಬ್ಯಾಟ್ಸ್‌ಮನ್ ಶಾಯ್ ಹೋಪ್, ಆಲ್ರೌಂಡರ್ ರೋಸ್ಟನ್ ಚೇಸ್ ನಿರೀಕ್ಷೆ ಹೆಚ್ಚಿಸಿದ್ದಾರೆ. ಯುವ ವೇಗಿಗಳು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.
ಒಟ್ಟು ಮುಖಾಮುಖಿ: 127
ಭಾರತ: 60
ವಿಂಡೀಸ್: 62
ಟೈ: 02
ಫಲಿತಾಂಶವಿಲ್ಲ: 03
ತಂಡಗಳ ವಿವರ
ಭಾರತ: ಕೊಹ್ಲಿ(ನಾಯಕ), ರೋಹಿತ್, ಧವನ್, ರಾಹುಲ್, ಶ್ರೇಯಸ್, ಮನೀಶ್, ರಿಷಭ್, ಜಾಧವ್, ಜಡೇಜಾ, ಕುಲ್ದೀಪ್, ಚಹಲ್, ಶಮಿ, ಭುವನೇಶ್ವರ್, ಖಲೀಲ್, ಸೈನಿ.
ವಿಂಡೀಸ್: ಹೋಲ್ಡರ್ (ನಾಯಕ), ಗೇಲ್, ಕ್ಯಾಂಪ್‌ಬೆಲ್, ಲೆವಿಸ್, ಹೋಪ್, ಹೆಟ್ಮೇಯರ್, ಪೂರನ್, ಚೇಸ್, ಆ್ಯಲನ್, ಬ್ರಾಥ್‌ವೇಟ್, ಪೌಲ್, ಕಾಟ್ರೆಲ್, ಥಾಮಸ್, ರೋಚ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸೋನಿ ಟೆನ್ 1