ಮೆಲ್ಬರ್ನ್ ಟೆಸ್ಟ್ ಪಂದ್ಯದ ಬಳಿಕ, ಸಿಡ್ನಿ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ದಿನದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ, ಆತಿಥೇಯ ಆಸ್ಟ್ರೇಲಿಯಾ ಮತ್ತೆ ಮಂಕಾಯಿತು. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.
ಸಿಡ್ನಿ(ಜ.03): ಆಸ್ಟ್ರೇಲಿಯಾ ವಿರುದ್ದದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಚೇತೇಶ್ವರ್ ಪೂಜಾರ ಭರ್ಜರಿ ಶತಕ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿದೆ.
undefined
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಪೂಜಾರ ಶತಕಕ್ಕೆ ಜೈಹೋ ಎಂದ ಟ್ವಿಟರಿಗರು..!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರು. ರಾಹುಲ್ ಹಾಗೂ ಮಯಾಂಕ್ ಇಬ್ಬರು ಕನ್ನಡಿಗರು ಇನ್ನಿಂಗ್ಸ್ ಆರಂಭಿಸಿದ್ದೇ ವಿಶೇಷವಾಗಿತ್ತು. ಆದರೆ ರಾಹುಲ್ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಕೇವಲ 9 ರನ್ ಸಿಡಿಸಿ ಔಟಾದರು.
ಮೆಲ್ಬರ್ನ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮಯಾಂಕ್, ಇದೀಗ ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಹಾಫ್ ಸೆಂಚುರಿ ಭಾರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೂಜಾರ ಸೆಂಚುರಿ ಸಿಡಿಸಿದರು. ಮಯಾಂಕ್ ಹಾಗೂ ಪೂಜಾರ ಜೊತೆಯಾಟದಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಕಾಲಿಟ್ಟಿತು.
ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪ್ರೀತಿಯ ಗುರು ಇನ್ನಿಲ್ಲ
ಮಯಾಂಕ್ 77 ರನ್ ಸಿಡಿಸಿ ಔಟಾದರು. ಇನ್ನು ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ ನಿರಾಸೆ ಮೂಡಿಸಿದರು. ಕೊಹ್ಲಿ 23 ರನ್ ಸಿಡಿಸಿ ಔಟಾದರೆ, ರಹಾನೆ 18 ರನ್‌ಗೆ ಸುಸ್ತಾದರು. 228 ರನ್‌ಗೆ ಟೀಂ ಇಂಡಿಯಾ 4ನೇ ವಿಕೆಟ್ ಕಳೆದುಕೊಂಡಿತು. ಚೇತೇಶ್ವರ್ ಪೂಜಾರ ಹಾಗೂ ಹನುಮಾ ವಿಹಾರಿ ಹೋರಾಟದಿಂದ ಟೀಂ ಇಂಡಿಯಾ 300 ರನ್ ಗಡಿ ದಾಟಿತು. ದಿನದಾಟದ ಅಂತ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿತು. ಚೇತೇಶ್ವರ್ ಪೂಜಾರ ಅಜೇಯ 130, ಹನುಮಾ ವಿಹಾರಿ 39 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸಿಸ್ ಪರ ಜೋಶ್ ಹೇಜಲ್‌ವಡ್ 2, ಮಿಚೆಲ್ ಸ್ಟಾರ್ಕ್ ಹಾಗೂ ನಥನ್ ಲಿಯೊನ್ ತಲಾ 1 ವಿಕೆಟ್ ಪಡೆದರು. ಟೀಂ ಇಂಡಿಯಾ ದ್ವಿತೀಯ ದಿನವೂ ಬ್ಯಾಟಿಂಗ್ ಮುಂದುವರಿಸಿ ಬೃಹತ್ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿದೆ. ಈ ಮೂಲಕ ಸಿಡ್ನಿ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದೆ.