ಸಿಡ್ನಿ[ಜ.03]: ಭಾರತ ಟೆಸ್ಟ್ ತಂಡದ ಅತ್ಯಂತ ಭರವಸೆಯ ಬ್ಯಾಟ್ಸ್’ಮನ್ ಚೇತೇಶ್ವರ್ ಪೂಜಾರ ಸಿಡ್ನಿ ಟೆಸ್ಟ್’ನಲ್ಲಿ ಮತ್ತೊಂದು ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಮೂರನೇ ಟೆಸ್ಟ್ ಶತಕ ಬಾರಿಸಿದಂತಾಗಿದೆ.

199 ಎಸೆತಗಳನ್ನೆದುರಿಸಿದ ಪೂಜಾರ ಟೆಸ್ಟ್ ಕ್ರಿಕೆಟ್’ನಲ್ಲಿ 18ನೇ ಶತಕ ಸಿಡಿಸಿ ಸಂಭ್ರಮಿಸಿದರು. ಭಾರತ ಆರಂಭದಲ್ಲೇ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮಯಾಂಕ್ ಜತೆ[116 ರನ್] ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆಬಳಿಕ ನಾಯಕ ವಿರಾಟ್ ಕೊಹ್ಲಿ ಬಳಿಕ 54 ರನ್’ಗಳ ಜತೆಯಾಟವಾಡಿ ತಂಡದ ಮೊತ್ತವನ್ನು ಇನ್ನೂರರ ಸಮೀಪ ಕೊಂಡ್ಯೊಯ್ದರು.

ಅತ್ಯಂತ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಪೂಜಾರ ಹಲವಾರು ದಾಖಲೆಗಳ ಸಹಿತ ಭರ್ಜರಿ ಶತಕ ಸಿಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಪೂಜಾರ ಶತಕವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.