
ಗ್ಲಾಸ್ಗೋ: ವೈಭವದ ಸಮಾರೋಪ ಸಮಾರಂಭದ ಮೂಲಕ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಭಾನುವಾರ ರಾತ್ರಿ ಸ್ಕಾಟ್ಲೆಂಡ್‌ನ ಪ್ರಮುಖ ನಗರ ಗ್ಲಾಸ್ಗೋದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. 2030ರ ಗೇಮ್ಸ್‌ಗೆ ಆತಿಥ್ಯ ಹಕ್ಕು ಭಾರತ ಪಡೆದಿರುವುದರಿಂದಾಗಿ, ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಬಿಂಬಿಸುವ ನೃತ್ಯ, ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಗಿತ್ತು. ಇದು ಎಲ್ಲರ ಗಮನಸೆಳೆಯಿತು.
3ನೇ ಕಿಂಗ್ ಚಾರ್ಲ್ಸ್ ಪ್ರತಿನಿಧಿಯಾಗಿ ಎಡಿನ್‌ಬರ್ಗ್ ರಾಜಮನೆತನದ ಪ್ರಿನ್ಸ್ ಎಡ್ವರ್ಡ್ ಅವರು ಅಧಿಕೃತವಾಗಿ ಕ್ರೀಡಾಕೂಟ ಮುಕ್ತಾಯಗೊಂಡಿದ್ದಾಗಿ ಘೋಷಿಸಿದರು. ‘ನೀವು ಮತ್ತೊಮ್ಮೆ ಕಾಮನ್‌ವೆಲ್ತ್ ಗೇಮ್ಸ್‌ನ ಮೌಲ್ಯ, ಉತ್ಸಾಹವನ್ನು ಎತ್ತಿ ಹಿಡಿದಿದ್ದೀರಿ. ಗ್ಲಾಸ್ಗೋಗೆ ಧನ್ಯವಾದಗಳು. ಎಲ್ಲಾ ದೇಶಗಳ ಕ್ರೀಡಾಪಟುಗಳಿಗೆ ಭಾರತದ ಅಹಮದಾಬಾದ್‌ಗೆ ಸ್ವಾಗತ’ ಎಂದು ಹೇಳಿದರು. ಪಥಸಂಚಲನದಲ್ಲಿ ಬಾಕ್ಸರ್ ಜಾಸ್ಮೀನ್ ಲಂಬೋರಿಯಾ ಅವರು ಭಾರತದ ಧ್ವಜ ಹಿಡಿದು ಸಾಗಿದರು.
ಸಮಾರಂಭದಲ್ಲಿ ಭಾರತವು ‘ವಸುಧೈವ ಕುಟುಂಬಕಂ’(ವಿಶ್ವವೇ ಒಂದು ಕುಟಂಬ) ಎಂಬ ಸಂದೇಶವನ್ನು ರವಾನಿಸಿತು. 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಂದೇ ಮಾತರಂ ಗೀತೆಗೂ ವಿಶೇಷ ಗೌರವ ಸಲ್ಲಿಸಲಾಯಿತು. ನಟಿ ಮಾನುಷಿ ಚಿಲ್ಲರ್ ಅವರು ಈ ವೇಳೆ ನೃತ್ಯ ಪ್ರದರ್ಶಿಸಿದರು.
ಖ್ಯಾತ ಗಾಯಕ ಶಂಕರ್ ಮಹದೇವನ್, ಅವರ ಪುತ್ರರಾದ ಸಿದ್ಧಾರ್ಥ್, ಶಿವಮ್ ಮಹದೇವನ್‌ರ ಸಂಗೀತದ ವೇಳೆ, ಭಾರತದ ವಿವಿಧತೆಯಲ್ಲಿ ಏಕತೆ, ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಭಾರತದ ಸಿತಾರ್ ವಾದಕ ರಿಷಭ್ ಶರ್ಮಾ ಅವರು ಸ್ಕಾಟ್ಲೆಂಡ್‌ನ ಗಾಯಕ ರೋಸ್ ಐನ್‌ಸ್ಲಿ ಜೊತೆಗೂಡಿ ‘ಸಾಂಸ್ಕೃತಿಕ ಜುಗಲ್ಬಂದಿ’ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಗುಜರಾತ್‌ನ ಹಿನ್ನೆಲೆ ಗಾಯಕಿ ಭೂಮಿ ತ್ರಿವೇದಿ ಅವರು ಗುಜರಾತ್‌ನ ಕಲೆ, ಸಂಸ್ಕೃತಿ ಬಿಂಬಿಸುವ ಪ್ರದರ್ಶನ ನೀಡಿದರು.
ಗ್ಲಾಸ್ಗೋ: ಈ ಬಾರಿ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ 2030ರ ಗೇಮ್ಸ್‌ನ ಆತಿಥ್ಯ ದೇಶ ಭಾರತಕ್ಕೆ ಧ್ವಜ ಹಾಗೂ ಬ್ಯಾಟನ್ ಹಸ್ತಾಂತರಿಸಲಾಯಿತು. ಸ್ಕಾಟ್ಲೆಂಡ್ ಅಧಿಕಾರಿಗಳು ಭಾರತೀಯ ಪ್ರತಿನಿಧಿಗಳಿಗೆ ಇದನ್ನು ಹಸ್ತಾಂತರಿಸಿದರು.
ಭಾರತ ಹಾಗೂ ಸ್ಕಾಟ್ಲೆಂಡ್‌ನ ಧ್ವಜದೊಂದಿಗೆ ಗೇಮ್ಸ್‌ನ ಧ್ವಜವನ್ನು ವೇದಿಕೆಗೆ ತರಲಾಯಿತು. ಅದನ್ನು ಗ್ಲಾಸ್ಗೋ ಕೌನ್ಸಿಲರ್ ಜಾಕ್ವೆಲಿನ್ ಮೆಕ್‌ಲಾರೆನ್ ಅವರು ಗೇಮ್ಸ್‌ನ ಉಪ ಮುಖ್ಯಸ್ಥ ಸುಸಾನ್ ಜಾಕ್ಸನ್‌ಗೆ ನೀಡಿದರು. ಬಳಿಕ ಕಾಮನ್‌ವೆಲ್ತ್ ಸ್ಪೋರ್ಟ್‌ನ ಅಧ್ಯಕ್ಷ ಡಾ.ಡೊನಾಲ್ಡ್ ರುಕಾರೆ ಅವರು ಧ್ವಜವನ್ನು ನೀರಜ್ ಚೋಪ್ರಾಗೆ ನೀಡಿದರು. ಅವರು ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾಗೆ ನೀಡಿದರು. ಅದನ್ನು ಅವರು ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಪಡೆದುಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.