ಭಾರತ-ಇಂಗ್ಲೆಂಡ್ ಏಕದಿನ: 3ನೇ ಪಂದ್ಯಕ್ಕಾಗಿ ಇಂಡಿಯಾದಲ್ಲಿ 2 ಬದಲಾವಣೆ?

By Suvarna NewsFirst Published Jul 15, 2018, 2:02 PM IST
Highlights

ಆಂಗ್ಲರ ವಿರುದ್ಧ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಮುಗ್ಗರಿಸಿದೆ. ಹೀಗಾಗಿ ಸರಣಿ ಗೆಲ್ಲೋ ಅವಕಾಶ ಇದೀಗ ಅಂತಿಮ ಪಂದ್ಯಕ್ಕೆ ವರ್ಗಾವಣೆಯಾಗಿದೆ. ಟಿ20 ಸರಣಿ ಗೆಲುವಿನ ಬಳಿಕ ಏಕದಿನ ಸರಣಿ ಗೆಲುವಿಗೆ ಪಣತೊಟ್ಟಿರುವ ಟೀಂ ಇಂಡಿಯಾ ಅಂತಿಮ ಪಂದ್ಯಕ್ಕಾಗಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿದೆ. ಆ ಬದಲಾವಣೆ ಇಲ್ಲಿದೆ.


ಲಂಡನ್(ಜು.15): ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಸೋತು ನಿರಾಸೆ ಅನುಭವಿಸಿರುವ  ಟೀಂ ಇಂಡಿಯಾ ಇದೀಗ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಲಾರ್ಡ್ಸ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಪಂದ್ಯ ಸೋತಿತ್ತು.

ಜುಲೈ 17 ರಂದು ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಸರಣಿ ನಿರ್ಧರಿಸಲಿದೆ. ಹೀಗಾಗಿ ಈ ಪಂದ್ಯ ಗೆಲ್ಲಲು ಉಭಯ ತಂಡಗಳು ಕಠಿಣ ಹೋರಾಟ ನಡೆಸಲಿದೆ. ಟೀ ಇಂಡಿಯಾ ಅಂತಿಮ ಪಂದ್ಯಕ್ಕಾಗಿ 2 ಬದಲಾವಣೆ ಮಾಡಲು ಚಿಂತನೆ ನಡೆಸಿದೆ.

2ನೇ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಕೆಎಲ್ ರಾಹುಲ್ ಬದಲು, ದಿನೇಶ್ ಕಾರ್ತಿಕ್‌ಗೆ ಅಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಏಕದಿನದಲ್ಲಿ ರಾಹುಲ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಇಷ್ಟೇ ಅಲ್ಲ ಮಧ್ಯಮ ಕ್ರಮಾಂಕದಲ್ಲಿ ರಾಹುಲ್‌ಗಿಂತ ಕಾರ್ತಿಕ್ ಉತ್ತಮ ಅನ್ನೋ ವಾದಗಳು ಇವೆ. 

ಬ್ಯಾಟಿಂಗ್ ವಿಭಾಗದಲ್ಲಿ ಒಂದು ಬದಲಾವಣೆಯ ಜೊತೆಗೆ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡೋ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸಿದ್ಧಾರ್ಥ್ ಕೌಲ್ ಬದಲು, ಇಂಜುರಿಯಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡೋ ಚಿಂತನೆ ನಡೆಸಿದೆ.

ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಲು ಸಾಧ್ಯವಾಗಿಲ್ಲ. ಭುವನೇಶ್ವರ್ ಕುಮಾರ್ ಇಂಜುರಿಯಿಂದ ಸಿದ್ಧಾರ್ಥ್ ಕೌಲ್ ಅವಕಾಶ ಪಡೆದಿದ್ದರು. ಆದರೆ ಕೌಲ್ ವಿಕೆಟ್ ಕಬಳಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ ಭುವಿಗೆ ಚಾನ್ಸ್ ನೀಡೋ ಸಾಧ್ಯತೆ ಇದೆ.

ಎರಡು ಬದಲಾವಣೆಯೊಂದಿಗೆ ಲೀಡ್ಸ್‌ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ನಡೆಸೋ ಸಾಧ್ಯತೆ ಹೆಚ್ಚಿದೆ. ಆದರೆ ಅತ್ತ ಇಂಗ್ಲೆಂಡ್ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಹೀಗಾಗಿ ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
 

click me!