ಭಾರತೀಯ ಹುಡುಗರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಎದುರಾಳಿ ಕೋಚ್

Published : Oct 07, 2017, 05:06 PM ISTUpdated : Apr 11, 2018, 01:10 PM IST
ಭಾರತೀಯ ಹುಡುಗರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಎದುರಾಳಿ ಕೋಚ್

ಸಾರಾಂಶ

ಎದುರಾಳಿ ಅಮೆರಿಕ ತಂಡದ ಕೋಚ್ ಜಾನ್ ಹ್ಯಾಕ್'ವರ್ಥ್ ಕೂಡ ಭಾರತೀಯ ಹುಡುಗರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಭಾರತ ತಂಡ ತುಂಬಾ ಚೆನ್ನಾಗಿ ಹಾಗೂ ವ್ಯವಸ್ಥಿತವಾಗಿ ಆಡಿತು. ನಮ್ಮ ಆಟಗಾರರು ದಾಳಿ ಸಂಯೋಜಿಸಲು ಅವಕಾಶ ಕೊಡದಂತೆ ಭದ್ರಕೋಟೆ ನಿರ್ಮಿಸಿದರು ಎಂಬುದು ಅಮೆರಿಕದ ಕೋಚ್ ವಿಶ್ಲೇಷಣೆ.

ನವದೆಹಲಿ(ಅ. 07): ಫುಟ್ಬಾಲ್ ಶಿಶು ಭಾರತ ಅಂಡರ್-17 ತಂಡ ನಿನ್ನೆಯ ವಿಶ್ವಕಪ್ ಪಂದ್ಯದಲ್ಲಿ ಅಮೆರಿಕನ್ನರ ಎದುರು 0-3 ಗೋಲುಗಳಿಂದ ಶರಣಾಗಿದ್ದರು. ಮೂರು ಗೋಲುಗಳ ಅಂತರದ ಸೋಲು ಸಾಮಾನ್ಯವಾಗಿ ದೊಡ್ಡ ಸೋಲೇ. ಆದರೆ, ನಿನ್ನೆ ಪಂದ್ಯದಲ್ಲಿ ಭಾರತೀಯ ಹುಡುಗರ ಆಟ ನೋಡಿದವರಿಗೆ ಅಚ್ಚರಿಯಂತೂ ಖಂಡಿತವಾಗಿರುತ್ತದೆ. ಅದರಲ್ಲೂ, ಭಾರತದ ಹಾಲಿ ಫುಟ್ಬಾಲ್ ಸ್ಥಿತಿ ಹಾಗೂ ಗುಣಮಟ್ಟದ ಕುರಿತು ಅರಿವಿದ್ದವರಿಗಂತೂ ನಿನ್ನೆಯ ಭಾರತೀಯರ ಆಟ ನಿಜಕ್ಕೂ ಆಶಾದಾಯಕವಾಗಿ ಕಾಣಿಸಿದ್ದರೆ ಅಚ್ಚರಿಯೇ ಇಲ್ಲ.

ಭಾರತದ ಕೋಚ್ ಲೂಯಿಸ್ ನಾರ್ಟಾನ್ ಡೀ ಮ್ಯಾಟೋಸ್ ತಮ್ಮ ಆಟಗಾರರ ಪ್ರದರ್ಶನದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಅನ್ವರ್ ಅಲಿ ಹೊಡೆದ ಚೆಂಡು ರಾಡ್'ಗೆ ಬಡಿದು ಹೊರಚಿಮ್ಮಿದ್ದು ಬೇಸರ ತರಿಸಿತ್ತು. ಅದು ಗೋಲಾಗಿದ್ದರೆ ಅಪೂರ್ವ ಕ್ಷಣವಾಗಿರುತ್ತಿತ್ತು ಎಂದು ಕೋಚ್ ಹೇಳುತ್ತಾರೆ. ತಮ್ಮ ತಂಡದ ಆಟಗಾರರ ಪ್ರದರ್ಶನ ಹಾಗೂ ಪ್ರಾಬಲ್ಯ ಗಮನಿಸಿದರೆ ಮೂರು ಗೋಲುಗಳ ಅಂತರದ ಸೋಲು ಬರಬಾರದಾಗಿತ್ತು. ಹುಡುಗರು ಚೆನ್ನಾಗಿ ಆಡಿದರು. ಮೊದಲ ಗೋಲು ಸುಮ್ಮನೆ ನಾವೇ ಉಡುಗೊರೆ ಕೊಟ್ಟಂತಾಗಿತ್ತು. ಎರಡನೇ ಗೋಲು ದುರದೃಷ್ಟಕರ ರೀತಿಯಲ್ಲಿ ಡಿಫ್ಲೆಕ್ಟ್ ಆಗಿ ಗೋಲಾಯಿತು. ಮೂರನೇ ಗೋಲು ಮಾತ್ರ ಅಮೆರಿಕರನ್ನು ದಕ್ಕಿಸಿಕೊಂಡಿದ್ದು ಎಂದು ಭಾರತ ತಂಡದ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಕೋಚ್ ಕೂಡ ಗುಣಗಾನ:
ಎದುರಾಳಿ ಅಮೆರಿಕ ತಂಡದ ಕೋಚ್ ಜಾನ್ ಹ್ಯಾಕ್'ವರ್ಥ್ ಕೂಡ ಭಾರತೀಯ ಹುಡುಗರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಭಾರತ ತಂಡ ತುಂಬಾ ಚೆನ್ನಾಗಿ ಹಾಗೂ ವ್ಯವಸ್ಥಿತವಾಗಿ ಆಡಿತು. ನಮ್ಮ ಆಟಗಾರರು ದಾಳಿ ಸಂಯೋಜಿಸಲು ಅವಕಾಶ ಕೊಡದಂತೆ ಭದ್ರಕೋಟೆ ನಿರ್ಮಿಸಿದರು ಎಂಬುದು ಅಮೆರಿಕದ ಕೋಚ್ ವಿಶ್ಲೇಷಣೆ.

ಭಾರತದ ಸೆಂಟರ್ ಬ್ಯಾಕ್ ಆಟಗಾರರು ಹಾಗೂ ಗೋಲ್'ಕೀಪರ್ ಅವರ ಪ್ರದರ್ಶನವನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡರು. ಅಷ್ಟೇ ಅಲ್ಲ, ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಬಗ್ಗೆಯೂ ಅಮೆರಿಕ ಕೋಚ್ ಶ್ಲಾಘನೆ ವ್ಯಕ್ತಪಡಿಸಿದರು. ಅಂಡರ್-17 ಫೀಫಾ ವಿಶ್ವಕಪ್'ನಲ್ಲಿ ಇಂಥ ಅದ್ಭುತ ಪ್ರೇಕ್ಷಕ ವರ್ಗವನ್ನ ತಾನು ನೋಡಿಯೇ ಇಲ್ಲ ಎಂದು ಜಾನ್ ಹ್ಯಾಕ್'ವರ್ಥ್ ಅಚ್ಚರಿಪಟ್ಟರು.

ಸುಮಾರು 45 ಸಾವಿರ ಜನರು ಈ ಪಂದ್ಯಕ್ಕಾಗಿ ಜಮಾಯಿಸಿದ್ದರು. ಜೂನಿಯರ್ ತಂಡಗಳ ಪಂದ್ಯಕ್ಕೆ ಇಷ್ಟು ಪ್ರೇಕ್ಷಕರು ಸೇರುವುದು ಅಪರೂಪ. ಫುಟ್ಬಾಲ್ ಜನಪ್ರಿಯವಿರುವ ರಾಷ್ಟ್ರಗಳಲ್ಲೂ ಇಂಥ ಪಂದ್ಯಗಳಿಗೆ ಇಷ್ಟು ಜನರು ಸೇರುವುದಿಲ್ಲ. ಭಾರತದಲ್ಲಿ ಇದೇ ಮೊದಲ ಬಾರಿಗೆ ಫೀಫಾ ವಿಶ್ವಕಪ್'ವೊಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ಸಾಹ ಗರಿಗೆದರಿದೆ.

ಅಮೆರಿಕ ಅಂತಿಂಥ ಟೀಮ್ ಅಲ್ಲ:
ಭಾರತದ ವಿರುದ್ಧ ಜಯಭೇರಿ ಭಾರಿಸಿದ ಅಮೆರಿಕ ಅಂಡರ್-17 ತಂಡವು ಸಾಮಾನ್ಯವಾದುದಲ್ಲ. ಈ ಮುಂಚೆ ನಡೆದ ಅನೇಕ ಪಂದ್ಯಗಳಲ್ಲಿ ಹಲವು ಬಲಿಷ್ಠ ತಂಡಗಳಿಗೆ ಆ ತಂಡ ಮಣ್ಣುಮುಕ್ಕಿಸಿದೆ. ಬ್ರೆಜಿಲ್ ತಂಡವನ್ನು 4-0 ಗೋಲಿನಿಂದ ಸದೆಬಡಿದಿತ್ತು. ಪೋರ್ಚುಗಲ್ ತಂಡವನ್ನು 7-1 ಗೋಲುಗಳ ಅಂತದಿಂದ ಮಣಿಸಿತ್ತು. ಕೋಸ್ಟಾರಿಕಾ, ಟರ್ಕಿ, ರಷ್ಯಾದಂಥ ಪ್ರಬಲ ತಂಡಗಳಿಗೆ ದೊಡ್ಡ ಸೋಲುಣಿಸಿತ್ತು. ಅಲ್ಲದೇ, ಭಾರತದ ವಿರುದ್ಧದ ಪಂದ್ಯದಲ್ಲಿ ಮೊದಲ ಗೋಲು ಗಳಿಸಿದ ಜೋಷ್ ಸಾರ್ಜೆಂಟ್ ಈಗಾಗಲೇ ಸ್ಟಾರ್ ಪ್ಲೇಯರ್ ಎನಿಸಿದ್ದಾರೆ. ಅಂಡರ್-20 ವಿಶ್ವಕಪ್'ನಲ್ಲಿ ಆಡಿರುವ ಅವರು ಅಲ್ಲಿ ಅತೀ ಹೆಚ್ಚು ಗೋಲ್ ಗಳಿಸಿದ ವೀರನೆನಿಸಿದ್ದಾರೆ. ಆ ತಂಡದಲ್ಲಿ ಜೋಷ್ ಸಾರ್ಜೆಂಟ್ ಅಲ್ಲದೇ ಇನ್ನೂ ಐದಾರು ಅದ್ಭುತ ಫುಟ್ಬಾಲ್ ಪ್ರತಿಭೆಗಳಿದ್ದಾರೆ. ಇಂಥ ತಂಡದ ವಿರುದ್ಧ ಭಾರತೀಯರು ನೀಡಿದ ಪ್ರದರ್ಶನ ನಿಜಕ್ಕೂ ಶ್ಲಾಘನೀಯವೇ ಸರಿ.

ಮುಂದಿನ ಎದುರಾಳಿ ಕೊಲಂಬಿಯಾ:
ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅ. 9, ಸೋಮವಾರದಂದು ಕೊಲಂಬಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಇದೇ ಸ್ಟೇಡಿಯಂನಲ್ಲಿ ರಾತ್ರಿ 8ರಂದು ನಡೆಯಲಿದೆ. ಘಾನಾ ವಿರುದ್ಧ ಸೋಲನುಭವಿಸಿರುವ ಕೊಲಂಬಿಯಾ ಕೂಡ ಈಗ ಗಾಯಗೊಂಡ ಹುಲಿಯಂತಾಗಿದೆ. ಎರಡೂ ತಂಡಗಳು ಮೊದಲ ಜಯಕ್ಕಾಗಿ ಅಂದು ಹಣಾಹಣಿ ನಡೆಸಲಿವೆ. ಭಾರತೀಯರು ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಇಲ್ಲವಾದರೂ, ಅಮೆರಿಕ ಮೇಲೆ ಆಡಿದ ರೀತಿ ಗಮನಿಸಿದಾಗ ಫಲಿತಾಂಶ ಏನು ಬೇಕಾದರೂ ಆಗುವ ಸಾಧ್ಯತೆ ಕಾಣುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?