ಬ್ರಿಜ್‌ಭೂಷಣ್ ಬಂಧಿಸಲು ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಆಗಲಿದೆ ಎಂದ ಕೇಂದ್ರ ಸಂಸ್ಕೃತಿ ಸಚಿವೆ
ಬೆಂಗಳೂರು(ಮೇ.29): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಅವರನ್ನು ಬಂಧಿಸಲು ಆಗ್ರಹಿಸಿ ಭಾರತೀಯ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ನಿರಾಕರಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ತಾರಾ ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಹಾಗೂ ಭಜರಂಗ್ ಪೂನಿಯಾ ಸೇರಿದಂತೆ ಹಲವಾರು ಕುಸ್ತಿಪಟುಗಳು ಕಳೆದ 35 ದಿನಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಬಳಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ. ಇದಕ್ಕೆ ಅಂತನೇ ಕೋರ್ಟ್ ಇದೆ, ಕಾನೂನು ಇದೆ. ಒಬ್ಬ ರಾಜನಿಗೂ ಕೂಡಾ ಈ ದೇಶದ ಕಾನೂನು ಅನ್ವಯ ಆಗಲಿದೆ. ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ 2 ಎಫ್ಐಆರ್ ದಾಖಲಾದರೂ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರನ್ನು ಇನ್ನೂ ಬಂಧಿಸದಿರುವುದನ್ನು ಪ್ರಶ್ನಿಸಿ ಭಾನುವಾರ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಕುಸ್ತಿಪಟುಗಳ ಪ್ರಯತ್ನ ಭಾರೀ ಹೈಡ್ರಾಮಾಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ಉದ್ಘಾಟಿಸಿದ ದಿನವೇ ಒಲಿಂಪಿಕ್ ಸಾಧಕರನ್ನು ನಡು ರಸ್ತೆಯಲ್ಲೇ ಬಂಧಿಸಿದ ಘಟನೆಗೆ ತೀವ್ರ ಆಕ್ರೋಶ ಕೂಡಾ ವ್ಯಕ್ತವಾಗಿದೆ.
ನಾವು ಮಾಡಿದ ತಪ್ಪೇನು?:
ಪೊಲೀಸರು ತಮ್ಮನ್ನು ಬಂಧಿಸಿದ್ದಕ್ಕೆ ಕಿಡಿಕಾರಿದ ವಿನೇಶ್, ‘ನವ ಭಾರತಕ್ಕೆ ಸ್ವಾಗತ. ಇಲ್ಲಿ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ದೇಶಕ್ಕಾಗಿ ಪದಕ ಗೆದ್ದವರನ್ನು ನ್ಯಾಯ ಕೇಳಿದ್ದಕ್ಕೆ ಬಂಧಿಸಿ ಜೈಲಲ್ಲಿ ಇಡುತ್ತಿದ್ದಾರೆ. ಯಾವುದಾದರೂ ಸರ್ಕಾರ ಚಾಂಪಿಯನ್ ಅಥ್ಲೀಟ್ಗಳ ಜೊತೆ ಈ ರೀತಿ ವರ್ತಿಸಿದೆಯೇ? ನಾವು ಮಾಡಿದ ಅಪರಾಧವಾದರೂ ಏನು? ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್ ಪಾರ್ಲಿಮೆಂಟ್ನಲ್ಲಿದ್ದರೆ, ನಮ್ಮನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿದ್ದಾರೆ. ವಿಶ್ವವೇ ನಮ್ಮನ್ನು ನೋಡುತ್ತಿದೆ. ಇದು ಭಾರತೀಯ ಕ್ರೀಡೆಯ ಕರಾಳ ದಿನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.