ಪುರುಷರ ಹಾಕಿ ಟೀಂ ಇಂಡಿಯಾ ತಂಡಕ್ಕೆ ಮಹಿಳಾ ಟೀಂ ಕೋಚ್..!

By Suvarna Web DeskFirst Published Sep 9, 2017, 3:55 PM IST
Highlights

ನಾಲ್ಕೂವರೆ ವರ್ಷಗಳ ಕಾಲ ಪ್ರಧಾನ ಕೋಚ್ ಆಗಿದ್ದ ರೋಲೆಂಟ್ ಓಲ್ಟ್'ಮನ್ಸ್‌'ರನ್ನು ದಿಢೀರ್ ವಜಾಗೊಳಿಸಿದ್ದ ಹಾಕಿ ಸಂಸ್ಥೆ, ನಂತರ ಪ್ರಧಾನ ಕೋಚ್ ಹುದ್ದೆಗೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವೆಬ್‌'ಸೈಟ್'ನಲ್ಲಿ ಅರ್ಜಿ ಆಹ್ವಾನಿಸಿತ್ತು.

ನವದೆಹಲಿ(ಸೆ.09): ಹಾಕಿ ಇಂಡಿಯಾ ಕಳೆದೊಂದು ವಾರದಲ್ಲೇ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಿದೆ. ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಹಾಗೂ ತವರಿನಲ್ಲಿ ವಿಶ್ವಕಪ್ ಇಂತಹ ಮಹತ್ವದ ಪಂದ್ಯಾವಳಿಗಳನ್ನು ಮುಂದಿಟ್ಟುಕೊಂಡು ಭಾರೀ ಪ್ರಯೋಗಗಳಿಗೆ ಕೈ ಹಾಕುತ್ತಿದೆ.

ನಾಲ್ಕೂವರೆ ವರ್ಷಗಳ ಕಾಲ ಪ್ರಧಾನ ಕೋಚ್ ಆಗಿದ್ದ ರೋಲೆಂಟ್ ಓಲ್ಟ್'ಮನ್ಸ್‌'ರನ್ನು ದಿಢೀರ್ ವಜಾಗೊಳಿಸಿದ್ದ ಹಾಕಿ ಸಂಸ್ಥೆ, ನಂತರ ಪ್ರಧಾನ ಕೋಚ್ ಹುದ್ದೆಗೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವೆಬ್‌'ಸೈಟ್'ನಲ್ಲಿ ಅರ್ಜಿ ಆಹ್ವಾನಿಸಿತ್ತು. ಇದೀಗ ರಾಷ್ಟ್ರೀಯ ಹಿರಿಯ ಪುರುಷರ ತಂಡದ ಕೋಚ್ ಆಗಿ ಅನುಭವವೇ ಇಲ್ಲದವರನ್ನು ಪ್ರಧಾನ ಕೋಚ್ ಹುದ್ದೆಗೇರಿಸಿದೆ.

ಮಹಿಳಾ ತಂಡದ ಕೋಚ್ ಮರಿನಿ ಹೊಸ ಕೋಚ್:

ಭಾರತ ಪುರುಷರ ತಂಡದ ನೂತನ ಕೋಚ್ ಆಗಿ ಭಾರತ ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ನೆದರ್‌'ಲೆಂಡ್‌'ನ ಸೋರ್ಡ್ ಮರಿನಿ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಈ ವಿಷಯವನ್ನು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಟ್ವಿಟರ್‌'ನಲ್ಲಿ ಘೋಷಿಸಿದರು.

ಕೋಚ್ ಹುದ್ದೆಗೆ ವೆಬ್‌'ಸೈಟ್‌'ನಲ್ಲಿ ನೀಡಿದ್ದ ಜಾಹೀರಾತನ್ನು ಹಾಕಿ ಇಂಡಿಯಾ ವಾಪಸ್ ಪಡೆದಿದೆ. ಮರಿನಿ ಸದ್ಯ ಮಹಿಳಾ ತಂಡದೊಂದಿಗೆ ಯುರೋಪ್ ಪ್ರವಾಸದಲ್ಲಿದ್ದು, ಸೆ.20ರಂದು ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ 2020ರ ಒಲಿಂಪಿಕ್ಸ್ ವರೆಗೂ ಗುತ್ತಿಗೆ ಅವಧಿ ಇರಲಿದೆ ಎನ್ನಲಾಗಿದೆ.

ಮಹಿಳಾ ತಂಡಕ್ಕೆ ಹರೇಂದರ್ ಕೋಚ್: ಮರಿನಿ ಪುರುಷ ತಂಡಕ್ಕೆ ಕೋಚ್ ಆಗಿ ನೇಮಕವಾಗುತ್ತಿದ್ದಂತೆ ತೆರವಾದ ಮಹಿಳಾ ತಂಡದ ಕೋಚ್ ಸ್ಥಾನಕ್ಕೆ ಹರೇಂದರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.

click me!