
World Chess Championship Live Streaming ಜಿನೇವಾ(ಸ್ವಿಜರ್‌ಲೆಂಡ್): ಚೆಸ್‌ನಲ್ಲಿ ಹೊಸ ವಿಶ್ವ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನು ಕೆಲ ದಿನಗಳಲ್ಲೇ ಉತ್ತರ ಸಿಗಲಿದೆ. 2026ರ ವಿಶ್ವ ಚೆಸ್ ಚಾಂಪಿಯನ್‌ಶಿಪ್(2026 World Chess Championship) ಕಾದಾಟ ಮಂಗಳವಾರ ಆರಂಭಗೊಳ್ಳಲಿದೆ. ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್(D.Gukesh) ಹಾಗೂ ಕ್ಯಾಂಡಿಡೇಟ್ಸ್ ಟೂರ್ನಿ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರುವ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೊವ್(Javokhir Sindarov) ನಡುವೆ ವಿಶ್ವ ಕಿರೀಟಕ್ಕಾಗಿ ಪೈಪೋಟಿ ನಡೆಯಲಿದೆ.
ಸದ್ಯ ಇಬ್ಬರಿಗೂ 20 ವರ್ಷ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸೆಣಸಾಡಲಿರುವ ಅತಿ ಕಿರಿಯ ಆಟಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಕೇಶ್ ತಮ್ಮ 18ನೇ ವರ್ಷದಲ್ಲಿ, 2024ರಲ್ಲಿ ಚೀನಾದ ಆಗಿನ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಗುಕೇಶ್ 2ನೇ ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದ್ದರೆ, ಸಿಂದರೊವ್ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಸದ್ಯದ ಲಯ, ಇತ್ತೀಚಿನ ಪ್ರದರ್ಶನ ಗಮನಿಸಿದರೆ ಸಿಂದರೊವ್ ಈ ಬಾರಿ ವಿಶ್ವ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿದೆ. ಗುಕೇಶ್ 2026ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ರ್‍ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಸಿಂದರೊವ್ ಅಭೂತಪೂರ್ವ ಲಯದಲ್ಲಿದ್ದು, ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಈ ಫೈನಲ್ಸ್‌ನಲ್ಲಿ ದಿನಕ್ಕೆ ಒಂದರಂತೆ ಒಟ್ಟು 14 ಸುತ್ತುಗಳ ಕ್ಲಾಸಿಕಲ್ ಪಂದ್ಯಗಳು ನಡೆಯಲಿವೆ. ಮಂಗಳವಾರ ಮೊದಲ ಗೇಮ್ ನಿಗದಿಯಾಗಿದೆ. ಪ್ರತಿ ಗೆಲುವಿಗೆ 1 ಅಂಕ, ಡ್ರಾಗೆ 0.5 ಅಂಕ ಸಿಗಲಿದೆ. ಮೊದಲಿಗೆ 7.5 ಅಂಕ ಗಳಿಸುವ ಆಟಗಾರ ವಿಶ್ವ ಚಾಂಪಿಯನ್ ಆಗಲಿದ್ದಾರೆ. 14 ಸುತ್ತುಗಳ ಬಳಿಕ ಟೈ ಆದರೆ ಡಿ.12ಕ್ಕೆ ಟೈ ಬ್ರೇಕರ್ ನಡೆಯಲಿದೆ. ಟೂರ್ನಿಯಲ್ಲಿ ₹23.7 ಕೋಟಿ ನಗದು ಬಹುಮಾನವಿದೆ. ಪ್ರತಿ ಗೆಲುವಿಗೆ ₹1.87 ಕೋಟಿ ಸಿಗಲಿದೆ.
ಕ್ಲಾಸಿಕಲ್ ಚೆಸ್‌ನಲ್ಲಿ ಸಿಂದರೊವ್ ಹಾಗೂ ಗುಕೇಶ್ 3 ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ 2ರಲ್ಲಿ ಸಿಂದರೊವ್ ಗೆದ್ದಿದ್ದು, ಮತ್ತೊಂದು ಪಂದ್ಯ ಡ್ರಾಗೊಂಡಿದೆ. ಇದೇ ಆತ್ಮವಿಶ್ವಾಸದಲ್ಲಿ ಸಿಂದರೊವ್ ಈ ಬಾರಿ ಗುಕೇಶ್‌ರನ್ನು ಎದುರಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.