
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳಿಗೆ ತವರಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ಲಭಿಸಿದೆ. ಹೂ ಹಾರ, ನೋಟಿನಿಂದ ತಯಾರಿಸಲಾದ ಮಾಲೆ ಹಾಕಿ, ಜೈಕಾರ ಕೂಗಿ ಅವರನ್ನು ಬರಮಾಡಿಕೊಳ್ಳಲಾಯಿತು.
ಸ್ಕಾಟ್ಲೆಂಡ್‌ನ ಗ್ಲಾಸ್ಗೋ ನಗರಕ್ಕೆ ತೆರಳಿದ್ದ ಬಹುತೇಕ ಆಟಗಾರರು ತಮ್ಮ ಸ್ಪರ್ಧೆಗಳು ಮುಕ್ತಾಯಗೊಂಡ ಬೆನ್ನಲ್ಲೇ, ಕೆಲ ದಿನಗಳ ಹಿಂದೆಯೇ ತವರಿಗೆ ಆಗಮಿಸಿದ್ದರು. ಆದರೆ ಸಮಾರೋಪ ಸಮಾರಂಭದವರೆಗೂ ಗ್ಲಾಸ್ಗೋದಲ್ಲಿದ್ದ ಬಾಕ್ಸರ್‌ಗಳು, ಜುಡೋ ಪಟುಗಳು, ಪ್ಯಾರಾ ಕ್ರೀಡಾಪಟುಗಳು ಸೇರಿದಂತೆ ಹಲವರು ಮಂಗಳವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದರು. ಅವರ ಜೊತೆ ಕೋಚ್‌ಗಳು, ಸಹಾಯಕ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಅಧಿಕಾರಿಗಳು ಕೂಡಾ ಇದ್ದರು. ಈ ವೇಳೆ ಬಾಕ್ಸಿಂಗ್ ತಾರೆಗಳಾದ ಪ್ರಿಯಾ ಘಂಘಾಸ್, ಸಾಕ್ಷಿ ಚೌಧರಿ, ಜಾಸ್ಮೀನ್ ಲಂಬೋರಿಯಾ, ಸಚಿನ್ ಸಿವಾಚ್, ನರೇಂದರ್ ಬರ್ವಾಲ್, ಜಾಡುಮನಿ ಸಿಂಗ್, ಲವ್ಲೀನಾ ಬೊರ್ಗೊಹೈನ್, ಅರುಂಧತಿ ಚೌಧರಿ, ದಿಲೀಪ್ ಗಾವಿತ್, ಶರ್ಮಿಲಾ ಧನ್ಕರ್, ಸೋಮನ್ ರಾಣಾ, ಕರ್ನಾಟಕದ ಶಿಲ್ಪಾ ಶೈಲಾ ಸೇರಿದಂತೆ ಹಲವು ಕ್ರೀಡಾಪಟುಗಳು ಮಾಧ್ಯಮಗಳ ಜೊತೆ ಮಾತನಾಡಿ ಸಂತಪ ವ್ಯಕ್ತಪಡಿಸಿದ್ದಲ್ಲದೇ, ತಮ್ಮ ಗ್ಲಾಸ್ಗೋ ಗೇಮ್ಸ್‌ನ ದಿನಗಳನ್ನು ಮೆಲುಕು ಹಾಕಿದರು.
ಇದೇ ವೇಳೆ ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್ ಅವರನ್ನು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬಸ್ಥರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದ ಪ್ಯಾರಾ ಅಥ್ಲೀಟ್, ಕರ್ನಾಟಕದ ಶಿಲ್ಪಾ ಶೈಲಾ ಹಾಗೂ ಪ್ಯಾರಾ ಕೋಚ್ ಡಾ.ಸತ್ಯನಾರಾಯಣ ಅವರನ್ನು ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು, ಸತ್ಯನಾರಾಯಣ ಅವರಿಗೆ ಹೂ ಹಾರ ಹಾಕಿ, ಜೈಕಾರ ಕೂಗಿ, ಹೆಗಲಿಗೇರಿಸಿ ಸಂಭ್ರಮಿಸಿದರು.
ಕಾಮನ್‌ವೆಲ್ತ್ ಮುಗಿಸಿ ಈಗಷ್ಟೇ ಭಾರತಕ್ಕೆ ಆಗಮಿಸಿರುವ ಕ್ರೀಡಾಪಟುಗಳಿಗೆ ವಿಶ್ರಾಂತಿಗೆ ಸಮಯವಿಲ್ಲ. ಅವರು ಮುಂದಿನ ತಿಂಗಳು ಜಪಾನ್‌ನಲ್ಲಿ ಆರಂಭಗೊಳ್ಳಲಿರುವ ಏಷ್ಯನ್ ಗೇಮ್ಸ್‌ಗೆ ಸಿದ್ಧಗೊಳ್ಳಬೇಕಿದೆ. ಈ ಬಗ್ಗೆ ಮಂಗಳವಾರ ನವದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಾಕ್ಸರ್ ಪ್ರಿಯಾ ಘಂಘಾಸ್, ‘ನನ್ನ ಗುರಿ ಈಗಾಗಲೇ ಏಷ್ಯನ್ಸ್ ಗೇಮ್ಸ್‌ನತ್ತ ಶಿಫ್ಟ್ ಆಗಿದೆ. ನನಗೆ ಮತ್ತೊಂದು ಚಿನ್ನ ಗೆಲ್ಲಬೇಕು’ ಎಂದರು. ಈ ಬಾರಿ ಏಷ್ಯನ್ ಗೇಮ್ಸ್ ಸೆ.19ರಿಂದ .4ರ ವರೆಗೆ ನಗೋಯಾ ನಗರದಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.