
ಬೆಂಗಳೂರು: 1993ರ ಒಂದು ಮಧ್ಯಾಹ್ನ ಪೋಷಕರ ಜೊತೆ ಮದುವೆಗೆ ಹೋಗಿ ಬರುವಾಗ ಐಸ್‌ಕ್ರೀಮ್ ತಿನ್ನುವ ಖುಷಿಯಲ್ಲಿದ್ದ 4 ವರ್ಷದ ಬಾಲಕಿಯು ರಸ್ತೆ ಮಧ್ಯೆ ಲಾರಿ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಳು. ಅಂದು ಪವಾಡಸದೃಶ ಬದುಕುಳಿದಿದ್ದರೂ ತನ್ನ ಎಡಗಾಲನ್ನು ಕಳೆದುಕೊಂಡಿದ್ದ ಅದೇ ಬಾಲಕಿ, ಇಂದು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದು ಭಾರತದ ತ್ರಿವರ್ಣ ಧ್ವಜ ಎತ್ತಿಹಿಡಿದು ಸಂಭ್ರಮಿಸಿದ್ದಾರೆ.
ಶಿಲ್ಪಾ ಕೆ. ಶೈಲಾ ಅವರ ಊರು ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಂಚುಗಾರಕೊಪ್ಪಲು. ತಮ್ಮ 4ನೇ ವಯಸ್ಸಿನಲ್ಲೇ ಭೀಕರ ಅಪಘಾತಕ್ಕೆ ತುತ್ತಾಗಿದ್ದ ಅವರು ತಮ್ಮ ಕಾಲನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ, ಬಡತನದಲ್ಲಿದ್ದ ಕುಟುಂಬಕ್ಕೂ ಹೊರೆಯಾಗಿದ್ದರು. ಆದರೆ ಸಾಧಿಸುವ ಛಲ ಬಿಡದ ಶಿಲ್ಪಾ ಕಲಿಕೆಯಲ್ಲಿ ಹಿಂದೆ ಬೀಳಲಿಲ್ಲ. ಕಲಿತು ಶಿಕ್ಷಕಿಯಾದ ಅವರು, ಕ್ರೀಡೆಯಲ್ಲೂ ಛಾಪು ಮೂಡಿಸಿದರು. ತಮ್ಮ ಮೊದಲ ಕಾಮನ್‌ವೆಲ್ತ್ ಕೂಟದಲ್ಲೇ ಪದಕ ಗೆದ್ದಿರುವ ಅವರು, ಕೂಟದ ಇತಿಹಾಸದಲ್ಲೇ ಪದಕ ಗೆದ್ದ ಕರ್ನಾಟಕದ ಮೊದಲ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಾಟ್‌ಪುಟ್, ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ಶಿಲ್ಪಾ ಅವರು ಈಗ ಕಾಮನ್‌ವೆಲ್ತ್‌ನಲ್ಲಿ ಮಹಿಳೆಯರ ಶಾಟ್‌ಪುಟ್ ಎಫ್57 ವಿಭಾಗದಲ್ಲಿ ವೈಯಕ್ತಿಕ ದಾಖಲೆ 7.26 ಮೀಟರ್ ದಾಖಲಿಸಿ ಕಂಚು ಗೆದ್ದಿದ್ದಾರೆ.
ಎಂಎ ಬಿಎಡ್ ವ್ಯಾಸಂಗ ಮಾಡಿರುವ ಶಿಲ್ಪಾ ಅವರು 2019ರಿಂದಲೂ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿ ವೇಳೆ ಅವರಿಗೆ ರಾಘವೇಂದ್ರ ಎಸ್‌ಜಿ ಎಂಬವರ ಪರಿಚಯವಾಗಿದೆ. ಶಿಲ್ಪಾ ಅವರನ್ನು ಸಿಟ್ಟಿಂಗ್ ವಾಲಿಬಾಲ್ ಆಡಲು ಪ್ರೇರೇಪಿಸಿದ ರಾಘವೇಂದ್ರ ಅವರು 2023ರಲ್ಲಿ ಅಥ್ಲೆಟಿಕ್ಸ್‌ಗೆ ಕರೆತಂದಿದ್ದಾರೆ.
‘2019ರಿಂದ 4 ವರ್ಷಗಳ ಕಾಲ ಸಿಟ್ಟಿಂಗ್ ವಾಲಿಬಾಲ್ ಆಡಿದ್ದೆ. ಆದರೆ ವಾಲಿಬಾಲ್ ಎಂಬುದು ತಂಡವಾಗಿ ಆಡುವ ಆಟ. ನಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅಥ್ಲೆಟಿಕ್ಸ್‌ನ ವೈಯಕ್ತಿಕ ಗೇಮ್ಸ್ ಸೂಕ್ತ ಎಂದು ಶಾಟ್‌ಪುಟ್, ಡಿಸ್ಕಸ್ ಎಸೆತದಲ್ಲಿ ತೊಡಿಗಿಸಿಕೊಳ್ಳುವಂತೆ ರಾಘವೇಂದ್ರ ಸರ್ ಸಲಹೆ ನೀಡಿದರು. ಅವರಿಂದಾಗಿಯೇ ಕ್ರೀಡೆಗೆ ಬಂದಿದ್ದ ನನ್ನನ್ನು ಅಥ್ಲೆಟಿಕ್ಸ್ ಮೂಲಕ ಮತ್ತೊಂದು ತಿರುವು ನೀಡಿದರು’ ಎಂದು ಶಿಲ್ಪಾ ಅವರು ಗ್ಲಾಸ್ಗೋದಲ್ಲಿ ಇದ್ದುಕೊಂಡೇ ‘ಕನ್ನಡಪ್ರಭ’ ಜೊತೆ ತಮ್ಮ ಜೀವನ ಪಯಣದ ಬಗ್ಗೆ ವಿವರಿಸಿದರು.
ಕ್ರೀಡೆ ಹಾಗೂ ಶಿಕ್ಷಕಿ ಹುದ್ದೆ, ಈ ಎರಡು ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಎಂದು ಅರಿತ ಶಿಲ್ಪಾ ಅವರು 2024ರಲ್ಲಿ ತಮ್ಮ ವೃತ್ತಿ ತೊರೆದರು. ಜೊತೆಗೆ ಮೈಸೂರು ಬಿಟ್ಟು ಬೆಂಗಳೂರಿಗೆ ಬಂದ ಅವರು ಪೂರ್ಣ ಪ್ರಮಾಣದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2 ವರ್ಷಗಳಿಂದ ಕಂಠೀರವ ಕ್ರೀಡಾಂಗಣದಲ್ಲಿ ಈಶಾನ್ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಶಿಲ್ಪಾ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಕುಟುಂಬದ ಸಂಪೂರ್ಣ ಬೆಂಬಲದ ನಡುವೆಯೂ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಾಗ ಅವರ ನೆರವಿಗೆ ಬಂದಿದ್ದು ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ. ‘ತರಬೇತಿ, ಪ್ರಯಾಣ, ವಸತಿ ಸೇರಿದಂತೆ ಹಲವು ವಿಧದಲ್ಲಿ ಹಣಕಾಸಿನ ಸಮಸ್ಯೆ ಎದುರಾದಾಗಲೂ ಸತ್ಯನಾರಾಯಣ ಅವರು ಬೆಂಬಲಕ್ಕೆ ನಿಂತಿದ್ದಾರೆ. ಇದೇ ವರ್ಷ ದುಬೈನಲ್ಲಿ ನಡೆದ ಫಝ್ಝಾ ಇಂಟರ್‌ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಕೂಡಾ ಅವರೇ. ಆ ಕೂಟದ ಮೂಲಕವೇ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡೆ’ ಎಂದು ಶಿಲ್ಪಾ ಅವರು ಸತ್ಯನಾರಾಯಣರನ್ನು ಕೊಂಡಾಡಿದರು.
ಪದಕ ಗೆಲ್ಲುವ ಮೂಲಕ ಶಿಲ್ಪಾ ರಾಜ್ಯ, ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಸಾಮರ್ಥ್ಯ ಮೇಲೆ ನನಗೆ ನಂಬಿಕೆ ಇತ್ತು. ಹೀಗಾಗಿ ಅವರ ಬೆಂಬಲಕ್ಕೆ ನಿಂತೆ. ಶಿಲ್ಪಾ ಪದಕ ಸಾಧನೆ ಮಾಡಿದ್ದಕ್ಕಿಂತ ಹೆಚ್ಚಾಗಿ, ಅವರ ಬದುಕು ಬದಲಾಯಿಸಿದ ಬಗ್ಗೆ ಹೆಮ್ಮೆಯಿದೆ.
-ಸತ್ಯನಾರಾಯಣ, ಪ್ಯಾರಾ ಕೋಚ್
2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಎಫ್57 ಶಾಟ್‌ಪುಟ್‌ನಲ್ಲಿ ಕಂಚು ಗೆದ್ದ ಕರ್ನಾಟಕದ ಶಿಲ್ಪಾ ಕೆ. ಶೈಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಗಮನಾರ್ಹ ಸಾಧನೆ ಕರ್ನಾಟಕ ಮತ್ತು ರಾಷ್ಟ್ರಕ್ಕೆ ಹೆಮ್ಮಯ ಕ್ಷಣ. ನಿಮ್ಮ ದೃಢನಿಶ್ಚಯ ಮನೋಭಾವ ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ದೊಡ್ಡ ಕನಸು ಕಾಣಲು ಮತ್ತು ಸಾಧನೆಗೆ ಶ್ರಮಿಸಲು ಸ್ಫೂರ್ತಿ ನೀಡುತ್ತದೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ ಸಿಗುವಂತಾಗಲಿ.
-ಡಿ .ಕೆ. ಶಿವಕುಮಾರ್, ಮುಖ್ಯಮಂತ್ರಿ
ಕೆ.ಆರ್.ನಗರ: ಮಗಳ ಸಾಧನೆಯಿಂದ ನಮಗೆ ತುಂಬಾ ಖುಷಿಯಾಗಿದೆ, ಇಷ್ಟರ ಮಟ್ಟಕ್ಕೆ ನಮ್ಮ ಮಗಳು ಬಂದಳಲ್ಲ, ನಮ್ಮ ಮಗಳ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಕೆ.ಎಸ್.ಶಿಲ್ಪಾ ಅವರ ಶಾಂತಾ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಆಕೆಗೆ ಮುಂದೆ ಒಳ್ಳೆಯದಾಗಲಿ, ಆಕೆ ತುಂಬ ಛಲಗಾತಿ, ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿದ್ದಳು, ಈಗ ಇಷ್ಟು ಮುಂದೆ ಬಂದಿದ್ದಾಳೆ. ಆಕೆಯ ಬುದ್ಧಿಶಕ್ತಿ, ಛಲ ನೋಡಿ ಅಕ್ಕಪಕ್ಕದವರು ಪ್ರೋತ್ಸಾಹಿಸಿದ್ದರು. ಈಕೆಯ ಸಾಧನೆಯಿಂದ ಗ್ರಾಮದ ಬೇರೆ ಮಕ್ಕಳು ಸಹ ಸಾಧಿಸುವ ಛಲ ಬರಲಿ’ ಎಂದು ಶಾಂತಾ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.