French Open 2022: ಮೂರನೇ ಸುತ್ತಿಗೆ ರಾಫಾ, ಇಗಾ ಲಗ್ಗೆ

By Kannadaprabha NewsFirst Published May 27, 2022, 8:30 AM IST
Highlights

* ಫ್ರೆಂಚ್‌ ಓಪನ್‌ನಲ್ಲಿ ಮುಂದುವರೆದ ರಾಫೆಲ್ ನಡಾಲ್ ಗೆಲುವಿನ ನಾಗಾಲೋಟ

* ಗ್ರ್ಯಾನ್‌ ಸ್ಲಾಂಗಳಲ್ಲಿ 300ನೇ ಗೆಲುವು ದಾಖಲಿಸಿದ 3ನೇ ಆಟಗಾರ ಎನ್ನುವ ಶ್ರೇಯ ನಡಾಲ್ ಪಾಲು

* ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ ವಿರುದ್ಧ ನಡಾಲ್‌ಗೆ ಭರ್ಜರಿ ಜಯ

ಪ್ಯಾರಿಸ್(ಮೇ.27)‌: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ (French Open Grand slam) 2ನೇ ಸುತ್ತಿನಲ್ಲಿ ಗೆಲುವು ಸಾಧಿಸುವುದರೊಂದಿಗೆ ಸ್ಪೇನ್‌ನ ರಾಫೆಲ್‌ ನಡಾಲ್‌ (Rafael Nadal) ಗ್ರ್ಯಾನ್‌ ಸ್ಲಾಂಗಳಲ್ಲಿ 300ನೇ ಗೆಲುವು ದಾಖಲಿಸಿದ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಬುಧವಾರ ಪುರುಷರ ಸಿಂಗಲ್ಸ್‌ನಲ್ಲಿ ಅವರು ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ ವಿರುದ್ಧ 6-3, 6-1, 6-4 ನೇರ ಸೆಟ್‌ಗಳಿಂದ ಜಯಗಳಿಸಿ 3ನೇ ಸುತ್ತಿಗೆ ಲಗ್ಗೆ ಇಟ್ಟರು. ನಡಾಲ್‌ಗೂ ಮುನ್ನ ರೋಜರ್‌ ಫೆಡರರ್‌ (Roger Federer) (369), ನೋವಾಕ್‌ ಜೋಕೋವಿಚ್‌ (Novak Djokovic) (324) ಈ ಮೈಲಿಗಲ್ಲು ತಲುಪಿದ್ದರು.

ಸರ್ಬಿಯಾದ ಲಾಸ್ಲೊ ಡೇರೆ ವಿರುದ್ಧ 6-3, 6-4, 6-3 ಸೆಟ್‌ಗಳಿಂದ ಗೆದ್ದ ನಂ.2 ಶ್ರೇಯಾಂಕಿತ, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ 3ನೇ ಸುತ್ತು ಪ್ರವೇಶಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌, ಅಮೆರಿಕದ ಅಲಿಸನ್‌ ರಿಸ್ಕೆ ವಿರುದ್ಧ ಗೆದ್ದರೆ, ವಿಶ್ವ ನಂ.3 ಸ್ಪೇನ್‌ನ ಪೌಲಾ ಬಡೋಸಾ, ಸ್ಲೊವೇನಿಯಾದ ಜುವಾನ್‌ ವಿರುದ್ಧ ಗೆದ್ದು 3ನೇ ಸುತ್ತು ತಲುಪಿದರು.

ಬೋಪಣ್ಣ ಜೋಡಿ ಪ್ರಿ ಕ್ವಾರ್ಟರ್‌ಗೆ

ಟೂರ್ನಿಯಲ್ಲಿ ಭಾರತದ ರೋಹಣ್‌ ಬೋಪಣ್ಣ (Rohan Bopanna) -ನೆದರ್‌ಲೆಂಡ್ಸ್‌ನ ಮಿಡ್ಡೆಲ್ಕೊಪ್‌ ಜೋಡಿ ಪುರುಷರ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದೆ. ಗುರುವಾರ 2ನೇ ಸುತ್ತಿನಲ್ಲಿ ಈ ಜೋಡಿ ರಷ್ಯಾದ ಗೋಲುಬೆವ್‌-ಫ್ರಾನ್ಸ್‌ನ ಮಾರ್ಟಿನ್‌ ವಿರುದ್ಧ 6-3, 6-4 ಸೆಟ್‌ಗಳಿಂದ ಗೆಲುವು ಸಾಧಿಸಿತು. ಆದರೆ ರಾಮನಾಥನ್‌ ರಾಮ್‌ಕುಮಾರ್‌-ಅಮೆರಿಕದ ಹಂಟರ್‌ ರೀಸ್‌ ಜೋಡಿ 2ನೇ ಸುತ್ತಲ್ಲಿ ಸೋತು ಹೊರಬಿತ್ತು. ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಕ್ರೊವೇಷಿಯಾದ ಇವಾಗ್‌ ಡಾಡಿಗ್‌ ಜೋಡಿ ಮೊದಲ ಸುತ್ತಲ್ಲಿ ಜಯಗಳಿಸಿದೆ. ಮಹಿಳಾ ಡಬಲ್ಸ್‌ನಲ್ಲಿ ಮಿರ್ಜಾ, ಚೆಕ್‌ ಗಣರಾಜ್ಯದ ಲೂಸಿ ಹ್ರಡೆಕ್ಕಾ ಜೋಡಿ ಶುಭಾರಂಭ ಮಾಡಿತು.

ಕ್ರೆಜಿಕೋವಾಗೆ ಸೋಂಕು: ಟೂರ್ನಿಯಿಂದ ಹೊರಕ್ಕೆ

ಪ್ಯಾರಿಸ್‌: ಫ್ರೆಂಚ್‌ ಓಪನ್‌ಗೆ ಮತ್ತೆ ಕೋವಿಡ್‌ ಕಾಟ ಎದುರಾಗಿದ್ದು, ಇಬ್ಬರು ಆಟಗಾರ್ತಿಯರು ಸೋಂಕಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷ ಸಿಂಗಲ್ಸ್‌ ಹಾಗೂ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಗುರುವಾರ ನಡೆಯಬೇಕಿದ್ದ ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯಕ್ಕೂ ಮುನ್ನ ಟೂರ್ನಿಯಿಂದ ಹೊರನಡೆದಿದ್ದಾರೆ. ಇದಕ್ಕೂ ಮೊದಲು ಬುಧವಾರ ಚೆಕ್‌ ಗಣರಾಜ್ಯದ ಮರಿಯಾ ಬೌಜ್ಕೋವಾ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯಕ್ಕೂ ಮುನ್ನ ನಿರ್ಗಮಿಸಿದ್ದರು.

French Open ಟೆನಿಸ್ : ಯುಎಸ್ ಓಪನ್ ಚಾಂಪಿಯನ್ ಎಮ್ಮಾಗೆ ಆಘಾತ

ಚೆಸ್‌: ಪ್ರಜ್ಞಾನಂದಗೆ ಫೈನಲ್‌ನಲ್ಲಿ ಹಿನ್ನಡೆ

ಚೆನ್ನೈ: ಚೆಸ್ಸೇಬಲ್‌ ಆನ್‌ಲೈನ್‌ ರಾರ‍ಯಪಿಡ್‌ ಚೆಸ್‌ ಟೂರ್ನಿಯ ಫೈನಲ್‌ನಲ್ಲಿ ಆಡುತ್ತಿರುವ ಭಾರತದ ಯುವ ಗ್ರ್ಯಾಂಡ್‌ ಮಾಸ್ಟರ್‌, 16ರ ಆರ್‌.ಪ್ರಜ್ಞಾನಂದಗೆ ಆರಂಭಿಕ ಹಿನ್ನಡೆ ಉಂಟಾಗಿದೆ. 2 ದಿನಗಳ ಕಾಲ ನಡೆಯಲಿರುವ ಫೈನಲ್‌ನಲ್ಲಿ ಒಟ್ಟು 8 ಸುತ್ತುಗಳು ಇರಲಿದ್ದು, ವಿಶ್ವ ನಂ.2 ಚೀನಾದ ಡಿಂಗ್‌ ಲೈರೆನ್‌ ವಿರುದ್ಧ ಮೊದಲ ದಿನ ನಡೆದ 4 ಸುತ್ತುಗಳ ಮುಕ್ತಾಯಕ್ಕೆ ಪ್ರಜ್ಞಾನಂದ 1.5-2.5ರ ಹಿನ್ನಡೆ ಅನುಭವಿಸಿದರು. 2ನೇ ದಿನ ಮತ್ತೆ 4 ಸುತ್ತು ನಡೆಯಲಿದೆ.

click me!