IPL 2022 ಸೋತರೇನಂತೆ ಮತ್ತೆ ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡ್ತೇವೆಂದ ಗಂಭೀರ್..!

Published : May 26, 2022, 07:34 PM IST
IPL 2022 ಸೋತರೇನಂತೆ ಮತ್ತೆ ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡ್ತೇವೆಂದ ಗಂಭೀರ್..!

ಸಾರಾಂಶ

* ಐಪಿಎಲ್‌ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿಗೆ ಶರಣಾದ ಲಖನೌ ಸೂಪರ್ ಜೈಂಟ್ಸ್ * ಮೊದಲ ಪ್ರಯತ್ನದಲ್ಲೇ ಪ್ಲೇ ಆಫ್‌ಗೇರಿ ಗಮನ ಸೆಳೆದಿದ್ದ ಲಖನೌ ಸೂಪರ್ ಜೈಂಟ್ಸ್ * ಮುಂದಿನ ಆವೃತ್ತಿಯಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತೇವೆ ಎಂದ ಗಂಭೀರ್  

ಕೋಲ್ಕತಾ(ಮೇ.26): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ದ ಲಖನೌ ಸೂಪರ್ ಜೈಂಟ್ಸ್‌ (Lucknow Super Giants) ತಂಡವು 14 ರನ್‌ಗಳ ರೋಚಕ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಐಪಿಎಲ್‌ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಲಖನೌ ಸೂಪರ್ ಜೈಂಟ್ಸ್ ತಂಡವು ನಾಕೌಟ್ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ತೋರುವ ಮೂಲಕ ಆಘಾತಕಾರಿ ಸೋಲು ಕಂಡು ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir), ಮುಂದಿನ ವರ್ಷ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ನೀಡಿದ್ದ 208 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಕೆ ಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಆಕರ್ಷಕ ಜತೆಯಾಟದ ನೆರವಿನಿಂದ ಗೆಲುವಿನತ್ತ ಮುಖಮಾಡಿತ್ತು. ಆದರೆ ನಿರ್ಣಾಯಕ ಘಟ್ಟದಲ್ಲಿ ಮಹತ್ವದ ವಿಕೆಟ್‌ ಕಳೆದುಕೊಳ್ಳುವ ಮೂಲಕ ಲಖನೌ ತಂಡವು ಆಘಾತಕಾರಿ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಅರ್ಹತೆಗಿಟ್ಟಿಸಿಕೊಂಡಿದೆ. ಮೇ 27ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್‌ನ ನೂತನ ತಂಡಗಳಾದ ಗುಜರಾತ್ ಟೈಟಾನ್ಸ್‌ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಚೊಚ್ಚಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ ಪ್ರವೇಶಿಸಿ ತಮ್ಮ ಅಭಿಮಾನಿಗಳಲ್ಲಿ ಟ್ರೋಫಿ ಗೆಲ್ಲುವ ಭರವಸೆಯನ್ನು ಮೂಡಿಸಿದ್ದವು. ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಭರ್ಜರಿ ಗೆಲುವು ಸಾಧಿಸುವ ಫೈನಲ್‌ಗೆ ಲಗ್ಗೆಯಿಟ್ಟಿದೆ. ಐಪಿಎಲ್‌ನ ಮತ್ತೊಂದು ನೂತನ ತಂಡವಾದ ಲಖನೌ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್‌ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದೆ.

IPL 2022 ಲಖನೌ ಮಣಿಸಿ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ಆರ್‌ಸಿಬಿ!

ಇದೀಗ ಪಂದ್ಯ ಸೋಲಿನ ಬಳಿಕ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಮುಂಬರುವ ಆವೃತ್ತಿಯ ಐಪಿಎಲ್‌ನಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತೇವೆ ಎಂದು ಲಖನೌ ಸೂಪರ್‌ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹೇಳಿದ್ದಾರೆ. ಇಂದು ಅದೃಷ್ಟ ಕೈಹಿಡಿಯಲಿಲ್ಲ. ನಮ್ಮ ಹೊಸ ತಂಡದ ಪಾಲಿಗೆ ಇದೊಂದು ಅದ್ಭುತ ಟೂರ್ನಮೆಂಟ್. ಮತ್ತೊಮ್ಮೆ ಮುಖಾಮುಖಿಯಾಗುವ ವೇಳೆಗೆ ನಾವು ಮತ್ತಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದೇವೆ ಎಂದು ಗಂಭೀರ್ ಬರೆದುಕೊಂಡಿದ್ದಾರೆ.

ಕೆ ಎಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 14 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 5 ಸೋಲು ಸಹಿತ 18 ಅಂಕಗಳೊಂದಿಗೆ ಲೀಗ್ ಹಂತದಲ್ಲಿ 3ನೇ ಸ್ಥಾನ ಪಡೆದಿತ್ತು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಕೂಡಾ 18 ಅಂಕ ಪಡೆದಿತ್ತಾದರೂ, ನೆಟ್ ರನ್‌ರೇಟ್‌ ಉತ್ತಮವಾಗಿದ್ದರಿಂದ ಲಖನೌ ತಂಡವನ್ನು ಹಿಂದಿಕ್ಕಿ ಮೊದಲ ಕ್ವಾಲಿಫಯರ್ ಆಡಲು ಅರ್ಹತೆಗಿಟ್ಟಿಸಿಕೊಂಡಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana