ಫ್ರೆಂಚ್ ಕಿರೀಟಕ್ಕೆ ಬಾರ್ಟಿ ಕಿಸ್!| ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ| ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಮಹಿಳಾ ಸಿಂಗಲ್ಸ್ ಚಾಂಪಿಯನ್| ಫೈನಲ್‌ನಲ್ಲಿ ಚೆಕ್‌ನ ವೊಂಡ್ರೌಸೊವಾ ವಿರುದ್ಧ ಜಯ| ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಗೆದ್ದ ಮಾಜಿ ಕ್ರಿಕೆಟರ್!
ಪ್ಯಾರಿಸ್[ಜೂ.09]: ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ 2019ರ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಟಿ, ಚೆಕ್ ಗಣರಾಜ್ಯದ 19 ವರ್ಷದ ಮಾರ್ಕೆಟಾ ವೊಂಡ್ರೌಸೊವಾ ವಿರುದ್ಧ 6-1, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಕೇವಲ 70 ನಿಮಿಷಗಳಲ್ಲಿ ಗೆಲುವು ಸಾಧಿಸಿದ ಬಾರ್ಟಿ, ತಮ್ಮ ವೃತ್ತಿಬದುಕಿನ ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಗೆ ಮುತ್ತಿಟ್ಟರು.
ಈ ಗೆಲುವಿನೊಂದಿಗೆ 46 ವರ್ಷಗಳ ಬಳಿಕ ಫ್ರೆಂಚ್ ಓಪನ್ ಗೆದ್ದ ಆಸ್ಪ್ರೇಲಿಯಾ ಆಟಗಾರ್ತಿ ಎನ್ನುವ ದಾಖಲೆಯನ್ನು ಬಾರ್ಟಿ ಬರೆದಿದ್ದಾರೆ. 1973ರಲ್ಲಿ ಮಾರ್ಗರೆಟ್ ಕೋರ್ಟ್ ಫ್ರೆಂಚ್ ಓಪನ್ ಗೆದ್ದ ಬಳಿಕ ಆಸೀಸ್ ಆಟಗಾರ್ತಿಯರಾರಯರು ಪ್ರಶಸ್ತಿ ಜಯಿಸಿರಲಿಲ್ಲ. 2010ರಲ್ಲಿ ಸಮಂತಾ ಸ್ಟೋಸರ್ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಆಡಿದ್ದರಾದರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು.
ವಿಶ್ವ ರಾರಯಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ!: ವಿಶ್ವ ರಾರಯಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಬಾರ್ಟಿ, ಫ್ರೆಂಚ್ ಓಪನ್ ಗೆಲುವಿನಿಂದಾಗಿ 2ನೇ ಸ್ಥಾನಕ್ಕೇರಲಿದ್ದಾರೆ. ಇದು ಅವರ ವೃತ್ತಿ ಬದುಕಿನ ಶ್ರೇಷ್ಠ ರಾರಯಂಕಿಂಗ್ ಸಾಧನೆ ಆಗಲಿದೆ. 2018ರಲ್ಲಿ ಬಾರ್ಟಿ ಯುಎಸ್ ಓಪನ್ ಮಹಿಳಾ ಡಬಲ್ಸ್ ಚಾಂಪಿಯನ್ ಆಗಿದ್ದರು.
ಬಾರ್ಟಿ ಪ್ರಶಸ್ತಿ ಗೆಲುವಿನೊಂದಿಗೆ ಸತತ 4ನೇ ವರ್ಷ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್‌ನ ಉದಯವಾದಂತಾಗಿದೆ. 2016ರಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ, 2017ರಲ್ಲಿ ಲಾತ್ವಿಯಾದ ಎಲೆನಾ ಒಸ್ಟಪೆನ್ಕೋ, 2018ರಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು.
3 ವರ್ಷ ಹಿಂದೆ ಕ್ರಿಕೆಟ್ ಬಿಟ್ಟು ಟೆನಿಸ್‌ಗೆ ವಾಪಸ್!
2010ರಲ್ಲಿ ವೃತ್ತಿಪರ ಟೆನಿಸ್ ಆಟಗಾರ್ತಿಯಾದ ಆಶ್ಲೆ ಬಾರ್ಟಿ, 2013ರಲ್ಲಿ ತಮ್ಮ 16ನೇ ವಯಸ್ಸಿನಲ್ಲೇ ಆಸ್ಪ್ರೇಲಿಯನ್ ಓಪನ್‌ನಲ್ಲಿ ಆಡಿದ್ದರು. 2014ರಲ್ಲಿ ಟೆನಿಸ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ಪಡೆದ ಬಾರ್ಟಿ, ಕ್ರಿಕೆಟ್‌ನಲ್ಲಿ ತರಬೇತಿ ಪಡೆಯದಿದ್ದರೂ 2015ರಲ್ಲಿ ಮಹಿಳಾ ಬಿಗ್‌ಬ್ಯಾಶ್ ಲೀಗ್‌ಗೆ ಸೇರ್ಪಡೆಗೊಂಡರು. ಬ್ರಿಸ್ಬೇನ್ ಹೀಟ್ ತಂಡದ ಪರ 2 ಆವೃತ್ತಿಗಳಲ್ಲಿ ಆಡಿದ ಅವರು 2016ರಲ್ಲಿ ಟೆನಿಸ್‌ಗೆ ಮರಳಿದರು.