ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಾಫೆಲ್ ನಡಾಲ್ ದಾಖಲೆ ಬರೆದಿದ್ದಾರೆ. 12ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ವಿರದ್ಧ ನೇರ್ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ.
ಪ್ಯಾರಿಸ್(ಜೂ.08): ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ನಡಾಲ್, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಗೆದ್ದು, ದಾಖಲೆಯ 12ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದರು. ಇದೇ ವೇಳೆ ಫೆಡರರ್‌ಗಿದು 11 ವರ್ಷಗಳಲ್ಲಿ ಅತ್ಯಂತ ಹೀನಾಯ ಗ್ರ್ಯಾಂಡ್‌ಸ್ಲಾಂ ಸೋಲು. 2009ರ ಬಳಿಕ ನಡಾಲ್ ವಿರುದ್ಧ ಮಣ್ಣಿನಂಕಣದಲ್ಲಿ ಫೆಡರರ್ ಗೆಲುವನ್ನೇ ಕಂಡಿಲ್ಲ ಎನ್ನುವುದು ಮತ್ತೊಂದು ಆಶ್ಚರ್ಯಕರ ಸಂಗತಿ.
ನಡಾಲ್ ಫ್ರೆಂಚ್ ಓಪನ್‌ನಲ್ಲಿ ಕಳೆದ 11 ಬಾರಿ ಫೈನಲ್ ತಲುಪಿದಾಗಲೂ ಚಾಂಪಿಯನ್ ಆಗಿದ್ದಾರೆ. ಈ ವರ್ಷವೂ ಅವರು ಪ್ರಶಸ್ತಿ ಉಳಿಸಿಕೊಂಡು, 18ನೇ ಗ್ರ್ಯಾಂಡ್‌ಸ್ಲಾಂ ಟ್ರೋಫಿಗೆ ಮುತ್ತಿಡಲು ಕಾತರಿಸುತ್ತಿದ್ದಾರೆ.
ಇಂದು ಬಾರ್ಟಿ-ಮಾರ್ಕೆಟಾ ಫೈನಲ್
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾದ 23 ವರ್ಷದ ಆಶ್ಲೆ ಬಾರ್ಟಿ, ಅಮೆರಿಕದ 17 ವರ್ಷದ ಅಮಂಡಾ ಅನಿಸಿಮೊವಾ ವಿರುದ್ಧ 6-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್ ಬಿಟ್ಟುಕೊಟ್ಟಬಳಿಕ 2ನೇ ಸೆಟ್‌ನಲ್ಲಿ ಬಾರ್ಟಿ 0-3 ಗೇಮ್‌ಗಳಿಂದ ಹಿಂದಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಪುಟಿದೆದ್ದ ಆಸ್ಪ್ರೇಲಿಯಾ ಆಟಗಾರ್ತಿ, ಚೊಚ್ಚಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ 19 ವರ್ಷದ ಮಾರ್ಕೆಟಾ ವೊಂಡ್ರೌಸೊವಾ ಬ್ರಿಟನ್‌ನ ಜೋಹಾನ್ನಾ ಕೊಂಟಾ ವಿರುದ್ಧ 7-5, 7-6 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮಾರ್ಕೆಟಾ ಹಾಗೂ ಬಾರ್ಟಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.