
ಪ್ಯಾರೀಸ್[ಜೂ.08]: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಈ ವರ್ಷ ಹೊಸ ಚಾಂಪಿಯನ್‌ನ ಉದಯವಾಗಲಿದೆ. ವಿಶ್ವ ನಂ.1 ರೊಮೇನಿಯಾದ ಸಿಮೊನಾ ಹಾಲೆಪ್ ಹಾಗೂ ಹಾಲಿ ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಫೈನಲ್ ಪ್ರವೇಶಿಸಿದ್ದಾರೆ. 2017ರ ರನ್ನರ್-ಅಪ್ ಹಾಲೆಪ್‌ಗಿದು 3ನೇ ಫ್ರೆಂಚ್ ಓಪನ್ ಫೈನಲ್ ಆದರೆ, ಸ್ಲೋನ್ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದ್ದಾರೆ. ಈ ಇಬ್ಬರು ಯುವ ಆಟಗಾರ್ತಿಯರು ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗೆ ಸೆಣಸಲಿದ್ದಾರೆ.
ಗುರುವಾರ ನಡೆದ ಎರಡೂ ಸೆಮಿ ಫೈನಲ್ ಏಕಪಕ್ಷೀಯವಾಗಿ ನಡೆಯಿತು. ಮೊದಲ ಸೆಮೀಸ್‌ನಲ್ಲಿ ಹಾಲೆಪ್ ಹಾಗೂ 3ನೇ ಶ್ರೇಯಾಂಕಿತೆ ಸ್ಪೇನ್‌ನ ಗಾರ್ಬೈನ್ ಮುಗುರುಜಾ ವಿರುದ್ಧ 6-1, 6-4 ಸೆಟ್’ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಪ್ರಚಂಡ ಲಯದಲ್ಲಿದ್ದ 2016ರ ಫ್ರೆಂಚ್ ಓಪನ್, ಹಾಲಿ ವಿಂಬಲ್ಡನ್ ಚಾಂಪಿಯನ್ ಮುಗುರುಜಾ ಬಳಿ, ಹಾಲೆಪ್‌ರ ಬಿರುಸಿನ ಹೊಡೆತಗಳಿಗೆ ಉತ್ತರವಿರಲಿಲ್ಲ. ಮೊದಲ ಸೆಟ್‌ನಲ್ಲಿ 5-0 ಮುನ್ನಡೆ ಸಾಧಿಸಿದ್ದ ಹಾಲೆಪ್, ಕೇವಲ 1 ಗೇಮ್ ಬಿಟ್ಟುಕೊಟ್ಟು ಸೆಟ್ ಜಯಿಸಿದರು. ಈ ಟೂರ್ನಿಯಲ್ಲಿ ಮುಗುರುಜಾ ಸೋತ ಮೊದಲ ಸೆಟ್ ಇದಾಗಿತ್ತು. ಆದರೆ 2ನೇ ಸೆಟ್‌ನಲ್ಲಿ ಹಾಲೆಪ್‌ಗೆ ಮುಗುರುಜಾರಿಂದ ಪ್ರಬಲ ಪೈಪೋಟಿ ಎದುರಾಯಿತು. 2-4 ಗೇಮ್ ಗಳಿಂದ ಹಿಂದಿದ್ದ ಹಾಲೆಪ್, ಬಳಿಕ ಸತತ 4 ಗೇಮ್ ಜಯಿಸಿ 6-4ರಲ್ಲಿ ಸೆಟ್ ಹಾಗೂ ಪಂದ್ಯ ತಮ್ಮದಾಗಿಸಿಕೊಂಡರು. ಈ ಜಯ ದೊಂದಿಗೆ ಹಾಲೆಪ್, ಮುಂದಿನ ವಾರ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಸ್ಲೋನ್ ಓಟಕ್ಕೆ ಅಡ್ಡಿಯಾಗದ ಕೀಸ್: 2ನೇ ಸೆಮೀಸ್‌ನಲ್ಲಿ ಸ್ಲೋನ್ ಸ್ಟೀಫನ್ಸ್, ಆಪ್ತ ಸ್ನೇಹಿತೆ ಮ್ಯಾಡಿಸನ್ ಕೀಸ್ ವಿರುದದ್ಧ 6-4, 6-4 ಸೆಟ್‌ಗಳಲ್ಲಿ ಜಯಿಸಿದರು. ಕಳೆದ ವರ್ಷ ಯುಎಸ್ ಓಪನ್ ಫೈನಲ್’ನಲ್ಲಿ ಕೀಸ್ ವಿರುದ್ಧ 6-3, 6-0ಯಲ್ಲಿ ಗೆದ್ದು ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಗೆದ್ದಿದ್ದ ಸ್ಲೋನ್, 2ನೇ ಗ್ರ್ಯಾಂಡ್‌ಸ್ಲಾಂ ಫೈನಲ್’ಗೇರಿದ್ದಾರೆ. 2002ರ ಬಳಿಕ ಫ್ರೆಂಚ್ ಓಪನ್ ಸೆಮೀಸ್‌ಗೆ ಇಬ್ಬರು ಅಮೆರಿಕದ ಆಟಗಾರ್ತಿಯರು ಪ್ರವೇಶ ಪಡೆದಿದ್ದು ಇದೇ ಮೊದಲು. ಫೈನಲ್ ಪ್ರವೇಶಿಸಿರುವ ಸ್ಲೋನ್, ಹಾಲೆಪ್‌ಗೆ ಆಘಾತ ನೀಡಲು ಎದುರು ನೋಡುತ್ತಿದ್ದಾರೆ. ಕಳೆದ ವರ್ಷ ಫೈನಲ್‌ನಲ್ಲಿ ಹಾಲೆಪ್, 19 ವರ್ಷದ ಎಲೆನಾ ಒಸ್ಟಪೆನ್ಕೊಗೆ ಶರಣಾಗಿ ಪ್ರಶಸ್ತಿ ಅವಕಾಶ ಕೈಚೆಲ್ಲಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.