
ಲಂಡನ್(ಮಾ.14): ಟೆಸ್ಟ್ ಕ್ರಿಕೆಟ್ ಅನ್ನು ಮತ್ತಷ್ಟುರೋಚಕಗೊಳಿಸಲು, ಮತ್ತಷ್ಟುಪ್ರೇಕ್ಷಕರನ್ನು ಸೆಳೆಯಲು ಕ್ರಿಕೆಟ್ ನಿಯಮ ಹಾಗೂ ನಿಬಂಧನೆಗಳನ್ನು ಸಿದ್ಧಪಡಿಸುವ, ಮೇಲ್ವಿಚಾರಣೆ ನಡೆಸುವ ಮ್ಯಾರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಹಲವು ಹೊಸ ಯೋಜನೆಗಳನ್ನು ರೂಪಿಸಿದೆ. ಪಂದ್ಯದ ವೇಳೆ ಸಮರ್ಥ ವ್ಯರ್ಥವಾಗುವುದನ್ನು ತಪ್ಪಿಸಲು ಟೈಮರ್ ಅಳವಡಿಕೆ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಒಂದೇ ಬ್ರಾಂಡ್ ಚೆಂಡಿನ ಬಳಕೆ ಹಾಗೂ ನೋಬಾಲ್ ಎಸೆದರೆ ಬ್ಯಾಟಿಂಗ್ ತಂಡಕ್ಕೆ ಫ್ರೀ ಹಿಟ್ ನೀಡುವಿಕೆ ಸೇರಿದಂತೆ ಇನ್ನೂ ಕೆಲ ಶಿಫಾರಸುಗಳನ್ನು ಮಾಡಿದೆ.
ಇದನ್ನೂ ಓದಿ: ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸಿಂಗ್
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕ್ ಗ್ಯಾಟಿಂಗ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಇದ್ದಾರೆ. ಕಳೆದ ವಾರ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸುಗಳ ಬಗ್ಗೆ ಚರ್ಚಿಸಲಾಗಿತ್ತು. ಮಂಗಳವಾರ ರಾತ್ರಿ ಎಂಸಿಸಿ ತನ್ನ ವೆಬ್‌ಸೈಟ್‌ನಲ್ಲಿ ನೂತನ ಶಿಫಾರಸುಗಳ ಪಟ್ಟಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ: ಧೋನಿಗೆ ಚಾಲೆಂಜ್ - ಯುವಿ ಹೆಲಿಕಾಪ್ಟರ್ ಸಿಕ್ಸರ್ ವೈರಲ್!
ಟೆಸ್ಟ್ ಕ್ರಿಕೆಟ್ ವೀಕ್ಷಿಸಲು ಅಭಿಮಾನಿಗಳು ಹೆಚ್ಚಾಗಿ ಮೈದಾನಕ್ಕೆ ಆಗಮಿಸದಿರಲು ನಿಧಾನಗತಿಯ ಬೌಲಿಂಗ್ ಸಹ ಪ್ರಮುಖ ಕಾರಣ ಎನ್ನುವುದನ್ನು ಮನಗಂಡಿರುವ ಎಂಸಿಸಿ ಸಮಿತಿ, ಟೈಮರ್ ಅಳವಡಿಸಲು ಸೂಚಿಸಿದೆ. ಉದಾಹರಣೆಗೆ ಪ್ರತಿ ಓವರ್‌ನ ಮುಕ್ತಾಯದ ಬಳಿಕ ಹೊಸ ಓವರ್ ಆರಂಭಿಸಲು ತಂಡಕ್ಕೆ 45 ಸೆಕೆಂಡ್‌ಗಳ ಸಮಯಾವಕಾಶ ಸಿಗಲಿದೆ. ಅದೇ ರೀತಿ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ಗೆ ಆಗಮಿಸಲು, ಪಾನೀಯ ವಿರಾಮದ ಬಳಿಕ ಮತ್ತೆ ಆಟ ಆರಂಭಿಸಲು, ಡಿಆರ್‌ಎಸ್ ಬಳಕೆಯಾದ ಬಳಿಕ ಆಟ ಮುಂದುವರಿಸಲು ನಿರ್ದಿಷ್ಟಸಮಯವನ್ನು ನಿಗದಿಪಡಿಸಲಾಗುವುದು.
ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಹ್ವಾನ ತಿರಸ್ಕರಿಸಿದ ಬಿಸಿಸಿಐ!
ಇನ್ನು ಟೆಸ್ಟ್ ಪಂದ್ಯಗಳಿಗೆ ಭಾರತದಲ್ಲಿ ಎಸ್‌ಜಿ ಚೆಂಡುಗಳನ್ನು ಬಳಸಲಾಗುತ್ತದೆ. ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಡ್ಯೂಕ್ಸ್, ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸೇರಿ ಇನ್ನಿತರ ದೇಶಗಳಲ್ಲಿ ಕೂಕಾಬುರಾ ಚೆಂಡುಗಳನ್ನು ಉಪಯೋಗಿಸಲಾಗುತ್ತೆ. ಆದರೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಡಿ ಆಡುವ ಎಲ್ಲಾ ಪಂದ್ಯಗಳಲ್ಲೂ ಒಂದೇ ಬ್ರಾಂಡ್‌ನ ಚೆಂಡು ಬಳಕೆಗೂ ಸೂಚಿಸಲಾಗಿದೆ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಫ್ರೀ ಹಿಟ್ ಚಾಲ್ತಿಯಲ್ಲಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲೂ ಸೇರಿಸಲು ಸೂಚಿಸಲಾಗಿದೆ. ಇಂಗ್ಲೆಂಡ್ ತಂಡ 45 ಏಕದಿನ ಪಂದ್ಯಗಳಲ್ಲಿ ನೋಬಾಲ್ ಹಾಕಿರಲಿಲ್ಲ. ಆದರೆ ವಿಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 11 ನೋಬಾಲ್‌ಗಳನ್ನು ಮಾಡಿತ್ತು. ಹೀಗಾಗಿ ಅಂತಹ ಪ್ರಸಂಗಗಳನ್ನು ತಡೆಯಲು ಫ್ರೀ ಹಿಟ್ ಪರಿಚಯಿಸಲು ಶಿಫಾರಸು ಮಾಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.