
ಇಂದೋರ್(ಮಾ.14): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಇಲ್ಲಿನ ಹೋಲ್ಕರ್ ಕ್ರೀಡಾಂಗಣ ರೋಚಕ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ.ಎರಡೂ ತಂಡಗಳು ಸೂಪರ್ ಲೀಗ್ ಹಂತದಲ್ಲಿ ಎಲ್ಲಾ 4 ಪಂದ್ಯಗಳನ್ನು ಗೆದ್ದಿದ್ದವು. ‘ಎ’ ಗುಂಪಿನಲ್ಲಿ ಮಹಾರಾಷ್ಟ್ರ ಅಗ್ರಸ್ಥಾನ ಪಡೆದು ಫೈನಲ್‌ಗೇರಿದರೆ, ಕರ್ನಾಟಕ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.
ಇದನ್ನೂ ಓದಿ: ಆಸಿಸ್ ವಿರುದ್ಧ 10 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಭಾರತ!
ಕರ್ನಾಟಕ ತಂಡ ತಾರಾ ಅಟಗಾರರಿಂದ ಕೂಡಿದೆ. ಭಾರತ ತಂಡದಲ್ಲಿ ಆಡಿದ ಅನುಭವವ ಹೊಂದಿರುವ ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್ ರಾಜ್ಯದ ಬ್ಯಾಟಿಂಗ್ ಬಲ ಎನಿಸಿದ್ದಾರೆ. ಈ ಮೂವರು ಐಪಿಎಲ್‌ನಲ್ಲೂ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಈ ಮೂವರ ಜತೆ ರೋಹನ್ ಕದಂ ಹಾಗೂ ಬಿ.ಆರ್.ಶರತ್ ಸಹ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಬೌಲಿಂಗ್ ವಿಭಾಗವನ್ನು ಅನುಭವಿ ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ. ಅಭಿಮನ್ಯು ಮಿಥುನ್, ವಿ.ಕೌಶಿಕ್ 2ನೇ ಹಾಗೂ 3ನೇ ವೇಗಿಗಳಾಗಿ ಆಡಲಿದ್ದಾರೆ. ಶ್ರೇಯಸ್ ಗೋಪಾಲ್, ಜೆ.ಸುಚಿತ್ ಸ್ಪಿನ್ನರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ವಿನಯ್, ಮಿಥುನ್, ಶ್ರೇಯಸ್ ಹಾಗೂ ಸುಚಿತ್ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಜತೆಗೆ ಹಲವು ವರ್ಷಗಳಿಂದ ಒಟ್ಟಿಗೆ ಆಡುತ್ತಿದ್ದು, ಒಬ್ಬರ ಆಟದ ಬಗ್ಗೆ ಮತ್ತೊಬ್ಬರಿಗೆ ಸಂಪೂರ್ಣ ಮಾಹಿತಿ ಇದೆ. ಸಂಘಟಿತ ದಾಳಿಯಿಂದಲೇ ಕರ್ನಾಟಕ ಈ ವರೆಗೂ ಟೂರ್ನಿಯಲ್ಲಿ ಅಜೇಯವಾಗಿ ಉಳಿದುಕೊಂಡಿದೆ. ಸತತ 11 ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ, ಫೈನಲ್‌ನಲ್ಲೂ ವಿಜಯ ಪತಾಕೆ ಹಾರಿಸಿ ಚೊಚ್ಚಲ ಬಾರಿಗೆ ಮುಷ್ತಾಕ್ ಅಲಿ ಕಿರೀಟ ಮುಡಿಗೇರಿಸಿಕೊಳ್ಳಲು ಕಾಯುತ್ತಿದೆ.
ಇದನ್ನೂ ಓದಿ: ಕೆ.ಎಲ್.ರಾಹುಲ್ ಪರ ಬ್ಯಾಟ್ ಬೀಸಿದ ಟ್ವಿಟರಿಗರು!
ಮತ್ತೊಂದೆಡೆ ಮಹಾರಾಷ್ಟ್ರ ಸಹ ಸಾಂಘಿಕ ಪ್ರದರ್ಶನದಿಂದಲೇ ಫೈನಲ್‌ವರೆಗೂ ಸಾಗಿ ಬಂದಿದೆ. ಋುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ಅಂಕಿತ್ ಬಾವ್ನೆ, ನಿಖಿಲ್ ನಾಯ್‌್ಕ ಬ್ಯಾಟಿಂಗ್ ತಾರೆಯರೆನಿಸಿದ್ದಾರೆ. ಅನುಭವಿ ವೇಗಿಗಳಾದ ಸಮದ್ ಫಲ್ಹಾ ಹಾಗೂ ಡಿ.ಜೆ.ಮುತ್ತುಸ್ವಾಮಿಯನ್ನು ಸಮರ್ಥವಾಗಿ ಎದುರಿಸುವುದು ಕರ್ನಾಟಕಕ್ಕೆ ಸವಾಲಾಗಿ ಪರಿಣಮಿಸಬಹುದು. ಎಡಗೈ ಬೌಲರ್ ಸತ್ಯಜೀತ್ ಬಚ್ಚಾವ್ ಸಹ ಉತ್ತಮ ಲಯದಲ್ಲಿದ್ದಾರೆ.
ಪಂದ್ಯ ಆರಂಭ: ಸಂಜೆ 5.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.