
ಬೆಂಗಳೂರು[ಸೆ.28]: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಅ.3ಕ್ಕೆ ನಿಗದಿಯಾಗಿದ್ದು ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ. ಕೆಎಸ್‌ಸಿಎ ಸಂಸ್ಥೆಯ ಅಧ್ಯಕ್ಷ ಗಾದಿಗೆ ಭಾರತದ ಮಾಜಿ ಆಟಗಾರರೋಜರ್ ಬಿನ್ನಿ ಬಣ ಸ್ಪರ್ಧೆ ನಡೆಸುತ್ತಿದೆ.
ಸದ್ಯ ಚುನಾವಣಾ ಅಖಾಡದಲ್ಲಿ ಹೊಸಬರೊಬ್ಬರು ಅಧ್ಯಕ್ಷ ಗಾದಿಗೇರುವ ಸಾಧ್ಯತೆಯಿದೆ. ಅವರು ಬೇರೊಂದು ಕ್ಷೇತ್ರದಲ್ಲಿದ್ದು ಈ ಬಾರಿ ಕೆಎಸ್‌ಸಿಎ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ ಎಂದು ಕೆಎಸ್‌ಸಿಎ ಮೂಲಗಳಿಂದ ತಿಳಿದುಬಂದಿದೆ. ಆದರೆ ಆ ಹೊಸ ವ್ಯಕ್ತಿ ಯಾರೆಂದು ಮಾತ್ರ ತಿಳಿದುಬಂದಿಲ್ಲ. ಈ ನಡುವೆಯೇ ಪ್ರಮುಖ ಸ್ಥಾನಗಳಿಗೆ ಹಲವು ಮಾಜಿ ಆಟಗಾರರ ಹೆಸರು ಕೇಳಿ ಬರುತ್ತಿದೆ. ಮೊದಲಿನಿಂದಲೂ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಬಣಗಳು ಇರುವುದು ಸಾಮಾನ್ಯ. ಅದರಂತೆ ಈ ಬಾರಿ ಪ್ರಸಕ್ತ ಅಧಿಕಾರದಲ್ಲಿರುವ ಕೆಲ ಪದಾಧಿಕಾರಿಗಳು ಹಾಗೂ ಮಾಜಿ ಆಟಗಾರರು ಸೇರಿ ಹೊಸ ಬಣವೊಂದನ್ನು ರಚಿಸಿಕೊಂಡಿದ್ದಾರೆ. ಈ ಬಣದಲ್ಲಿ ಮಾಜಿ ಆಟಗಾರ ರೋಜರ್ ಬಿನ್ನಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.
ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!
ಸೆ.27 ರಿಂದ 30ರವರೆಗೆ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿ ಎಂ.ಆರ್. ಹೆಗ್ಡೆ ದಿನಾಂಕ ನಿಗದಿಮಾಡಿದ್ದಾರೆ. ಭಾನುವಾರ ಕಚೇರಿಗೆ ರಜೆ ಇದೆ. ಭಾನುವಾರ ಹೊರತುಪಡಿಸಿ ಇನ್ನುಳಿದ 3 ದಿನಗಳ ಕಾಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸಲು ನಿಗದಿ ಮಾಡಿದ್ದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಎಸ್‌ಸಿಎ ಸಂಸ್ಥೆಯಲ್ಲಿರಿಸಿದ್ದ ನಾಮಪತ್ರ ಪೆಟ್ಟಿಗೆಯಲ್ಲಿ ಮೊದಲ ದಿನದ ಸಂಜೆ 5ಗಂಟೆ ವರೆಗೂ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರಲಿಲ್ಲ ಎಂದು ಕೆಎಸ್‌ಸಿಎ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಆದರೆ 5.45ರ ವೇಳೆಗೆ ರೋಜರ್ ಬಿನ್ನಿ ಸೇರಿದಂತೆ ಅವರ ಬಣದ 10 ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ವಿನಯ್ ಮೃತ್ಯುಂಜಯ ಸಂದೇಶ ನೀಡಿದ್ದಾರೆ.
ರಂಗೇರಿದ ಚುನಾವಣಾ ಅಖಾಡದಲ್ಲಿ ಬಿನ್ನಿ ಬಣ
1983ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ರೋಜರ್ ಬಿನ್ನಿ ಅಧ್ಯಕ್ಷ ಗಾದಿಗೆ ಸ್ಪರ್ಧಿಸುತ್ತಿದ್ದರೆ, ಕಾರ್ಯದರ್ಶಿಗೆ ಸಂತೋಷ್ ಮೆನನ್, ಖಜಾಂಚಿ ಹುದ್ದೆಗೆ ವಿನಯ್ ಮೃತ್ಯುಂಜಯ, ಉಪಾಧ್ಯಕ್ಷರಾಗಿ ಜೆ. ಅಭಿರಾಮ್, ಜಂಟಿ ಕಾರ್ಯದರ್ಶಿಯಾಗಿ ಶಾವಿರ್ ತಾರಾಪೂರೆ, ಅಜೀವ ಸದಸ್ಯತ್ವ ವಿಭಾಗಕ್ಕೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ, ಶಾಂತಿ ಸ್ವರೂಪ್, ಸದಸ್ಯರಾಗಿ ತಿಲಕ್ ನಾಯ್ಡು, ಜೈ ಸಿಂಗ್ ಹಾಗೂ ಕೋಟಾ ಕೋದಂಡರಾಮ ನಾಮಪತ್ರ ಸಲ್ಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.