MS ಧೋನಿ ನಿವೃತ್ತಿ ಸದ್ಯಕ್ಕಿಲ್ಲ

By Web DeskFirst Published Jul 21, 2019, 11:39 AM IST
Highlights

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತರಾಗುತ್ತಾರೆ ಎನ್ನುವ ಗಾಳಿಸುದ್ದಿಗೆ ತೆರೆಎಳೆದಿದ್ದಾರೆ. ಸದ್ಯಕ್ಕೆ ಧೋನಿ ನಿವೃತ್ತಿ ಪಡೆಯುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಅವರು, ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಜು.21): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಊಹಾಪೋಹಗಳು ಆರಂಭಗೊಂಡಿರುವ ಬೆನ್ನಲ್ಲೇ, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿಯಲು ಧೋನಿ ನಿರ್ಧರಿಸಿದ್ದಾರೆ. 

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾನುವಾರ ಭಾರತ ತಂಡದ ಆಯ್ಕೆ ನಡೆಯಲಿದ್ದು, ಈ ಕುರಿತು ಶನಿವಾರ ತಮ್ಮ ನಿರ್ಧಾರ ಪ್ರಕಟಿಸಿರುವ ಧೋನಿ, 2 ತಿಂಗಳು ಟೀಂ ಇಂಡಿಯಾದಿಂದ ದೂರ ಉಳಿಯಲಿದ್ದು, ಸೇನಾ ಕರ್ತವ್ಯಕ್ಕೆ ತೆರಳಲಿದ್ದಾರೆ. ಭಾರತೀಯ ಸೇನೆ ಧೋನಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಿದ್ದು, ಪ್ಯಾರಚೂಟ್ ರೆಜಿಮೆಂಟ್ ನಲ್ಲಿ ಕರ್ತವ್ಯ ಸಲ್ಲಿಸಲಿದ್ದಾರೆ. 

ವಿಂಡೀಸ್ ಪ್ರವಾಸಕ್ಕೆ ಗೈರು; ಭಾರತೀಯ ಸೇನೆಗೆ ಧೋನಿ ಹಾಜರ್!

ಮೂರು ವಿಚಾರಗಳನ್ನು ಸ್ಪಷ್ಟ ಪಡಿಸಲು ಬಯಸುತ್ತೇವೆ ಎಂದು ತಿಳಿಸಿರುವ ಬಿಸಿಸಿಐ ಅಧಿಕಾರಿಗಳು, ‘ಧೋನಿ ಇದೀಗ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿಲ್ಲ. ಈ ಮೊದಲೇ ಅಂದುಕೊಂಡಂತೆ ಸೇನಾ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಧೋನಿ ನಿರ್ಧಾ ರವನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಗಮನಕ್ಕೆ ತರಲಾಗಿದೆ’ ಎಂದಿದ್ದಾರೆ. ಇದರೊಂದಿಗೆ ವಿಂಡೀಸ್ ಪ್ರವಾಸಕ್ಕೆ ಧೋನಿ ತೆರೆಳುತ್ತಾರೋ ಇಲ್ಲವೋ ಎನ್ನುವ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ. 

2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಮೊದಲ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡದಿಂದ ಇದೀಗ ಧೋನಿ ಹೊರಗುಳಿಯಲು ಮುಂದಾಗಿರುವ ಕಾರಣ ರಿಷಭ್ ಪಂತ್ ಸೀಮಿತ ಓವರ್ ಗಳ ಪಂದ್ಯಗಳಿಗೆ ಹಾಗೂ ಟೆಸ್ಟ್ ಪಂದ್ಯಗಳಿಗೆ ವೃದ್ಧಿಮಾನ್ ಸಾಹ ತಂಡದಲ್ಲಿ ಸ್ಥಾನ ದೊರೆಯುವ ಸಾಧ್ಯತೆಗಳಿವೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಟಿ20 ವಿಶ್ವಕಪ್ ಗಮನದಲ್ಲಿರಿಸಿಕೊಂಡು ರಿಷಭ್ ಪಂತ್‌ರನ್ನು ಮೂರು ಮಾದರಿಯಲ್ಲಿ ಆಡಿಸುವ ಯೋಚನೆ ಕೂಡ ಆಯ್ಕೆ ಸಮಿತಿಗೆ ಇದೆ ಎನ್ನಲಾಗಿದೆ. ಕ್ರಿಕೆಟ್‌ನಿಂದ ಸದ್ಯಕ್ಕೆ ನಿವೃತ್ತರಾಗುವ ಯಾವುದೇ ಯೋಚನೆ ಮಹೇಂದ್ರ ಸಿಂಗ್ ಧೋನಿ ಮಾಡಿಲ್ಲ ಎಂದು ಅವರ ಆಪ್ತ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ ತಿಳಿಸಿದ್ದರು.
 

click me!