ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಈ ಋತುವಿನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದು, ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಜಕಾರ್ತ(ಜು.21): ಒಲಿಂಪಿಕ್ ಬೆಳ್ಳಿ ವಿಜೇತೆ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಸಿಂಧು ಈ ಋತುವಿನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದಾರೆ. ಈ ವರ್ಷದಲ್ಲಿ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ಹುಮ್ಮಸ್ಸಿನಲ್ಲಿ ಸಿಂಧು ಇದ್ದಾರೆ.
ಇಂಡೋನೇಷ್ಯಾ ಓಪನ್: ಸಿಂಧು ಸೆಮೀಸ್‌ಗೆ ಲಗ್ಗೆ
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯುಫಿ ವಿರುದ್ಧ 21-19, 21-10 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ.5 ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು, ಈ ಋತುವಿನಲ್ಲಿ ಸಿಂಗಾಪುರ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಸಿಂಧು, 4ನೇ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ರನ್ನು ಎದುರಿಸಲಿದ್ದಾರೆ.
ಯಮಗುಚಿ ವಿರುದ್ಧ ಸಿಂಧು 10-4 ರ ಮುಖಾಮುಖಿ ಗೆಲುವು ಸಾಧಿಸಿದ್ದಾರೆ. ಈ ವರ್ಷದಲ್ಲಿ ಚೀನಾದ ಶಟ್ಲರ್ ಚೆನ್ ಯುಫಿ ಆಸ್ಟ್ರೇಲಿಯಾ, ಸ್ವಿಸ್ ಮತ್ತು ಆಲ್ ಇಂಗ್ಲೆಂಡ್ ಓಪನ್ ಟ್ರೋಫಿ ಗೆದ್ದಿದ್ದರು. ಒಂದು ಹಂತದಲ್ಲಿ 19-19 ರಿಂದ ಇಬ್ಬರೂ ಶಟ್ಲರ್‌ಗಳು ಸಮಬಲದ ಹೋರಾಟ ನಡೆಸಿದ್ದರು. ನಂತರದ ಅವಧಿಯಲ್ಲಿ ಸಿಂಧು ಅದ್ಭುತ ಸ್ಮ್ಯಾಶ್‌ಗಳ ಮೂಲಕ ಚೀನಾ ಶಟ್ಲರ್‌ರನ್ನು ಹಿಂದಿಕ್ಕಿದರು.