ಆಯ್ಕೆ ಟ್ರಯಲ್ಸ್ ವೇಳೆ ಬ್ರಿಜ್‌ಭೂಷಣ್ ಪಕ್ಷಪಾತ ತೋರಿದ್ದರು: ಅಪ್ರಾಪ್ತೆ ತಂದೆ
ಸಿಟ್ಟಿನಿಂದ ಸುಳ್ಳು ಹೇಳಿಕೆ ನೀಡಿದ್ದೆ
ಮ್ಯಾಜಿಸ್ಪ್ರೇಕ್ ಮುಂದೆ ಹೇಳಿಕೆ ಬದಲಿಸಿದ್ದೇನೆ
ನವದೆಹಲಿ(ಜೂ.09): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಬ್ರಿಜ್‌ಭೂಷಣ್ ವಿರುದ್ಧ ದೂರು ನೀಡಿದ್ದ ಅಪ್ರಾಪ್ತೆಯ ತಂದೆ ಇದೀಗ ಯೂ-ಟರ್ನ್ ಹೊಡೆದು, ಅವರಿಂದ ಯಾವುದೇ ಲೈಂಗಿಕ ಕಿರುಕುಳ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಏಪ್ರಿಲ್ನಲ್ಲಿ ದೆಹಲಿ ಪೊಲೀಸರಿಗೆ ಬ್ರಿಜ್ ವಿರುದ್ಧ ಅಪ್ರಾಪ್ತೆ ಸೇರಿದಂತೆ 7 ಮಂದಿ ದೂರು ಸಲ್ಲಿಸಿದ್ದರು. ಅಪ್ರಾಪ್ತೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಬ್ರಿಜ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಮೇ 10ಕ್ಕೆ ಮ್ಯಾಜಿಸ್ಪ್ರೇಟ್ ಮುಂದೆ ಅಪ್ರಾಪ್ತೆಯ ಹೇಳಿಕೆ ದಾಖಲಿಸಲಾಗಿತ್ತು. ಬಳಿಕ ಅಪ್ರಾಪ್ತೆಯ ತಂದೆ ಕೂಡಾ ಬ್ರಿಜ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಹೇಳಿಕೆ ದಾಖಲಿಸಿದ್ದರು. ಆದರೆ ಜೂನ್ 5ಕ್ಕೆ ಮ್ಯಾಜಿಸ್ಪ್ರೇಟ್ ಮುಂದೆ ಮತ್ತೊಮ್ಮೆ ಹಾಜರಾಗಿ ಹೇಳಿಕೆ ಬದಲಿಸಿರುವ ಅಪ್ರಾಪ್ತೆಯ ತಂದೆ, ‘ಬ್ರಿಜ್‌ಭೂಷಣ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಕ್ಷಪಾತ ತೋರಿದ್ದರು. ಈ ಸಿಟ್ಟಿನಿಂದ ಸುಳ್ಳು ಹೇಳಿಕೆ ನೀಡಿದ್ದೆ’ ಎಂದು ಒಪ್ಪಿಕೊಂಡಿದ್ದಾರೆ.
‘ನಾನು ಮೊದಲು ನೀಡಿದ್ದ ಹೇಳಿಕೆಯಲ್ಲಿ ಕೆಲ ಸುಳ್ಳುಗಳಿದ್ದವು. ಹೀಗಾಗಿ ಹೇಳಿಕೆ ಬದಲಿಸಿದ್ದೇನೆ. ಆದರೆ ದೂರು ವಾಪಸ್ ಪಡೆದಿಲ್ಲ. ನನ್ನ ಮಗಳಿಗೆ ತುಂಬಾ ಸಮಸ್ಯೆಯಾಗಿದೆ. ಆದರೆ ಎಫ್ಐಆರ್ನಲ್ಲಿ ದಾಖಲಾದ ಎಲ್ಲವೂ ಸತ್ಯವಲ್ಲ. ನನಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ. ಅವರ ಹೆಸರುಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದಿರುವ ಅವರು, ಹೇಳಿಕೆ ಬದಲಿಸಲು ಯಾರ ಒತ್ತಡವೂ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಅಪ್ರಾಪ್ತೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ ಮಾಹಿತಿ ಮಾಧ್ಯಮಗಳಲ್ಲಿ ಬಹಿರಂಗಗೊಂಡಿತ್ತು. ಅದರಲ್ಲಿ ‘ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಬ್ರಿಜ್ ತನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು, ಭುಜ, ಎದೆಯ ಮೇಲೆ ಕೈಯಾಡಿಸಿದ್ದರು. ಆದರೆ ದೈಹಿಕ ಸಂಬಂಧಗಳನ್ನು ಕಠಿಣವಾಗಿ ವಿರೋಧಿಸಿದ್ದೆ ಮತ್ತು ತನ್ನನ್ನು ಹಿಂಬಾಲಿಸದಂತೆ ಎಚ್ಚರಿಸಿದ್ದೆ’ ಎಂದಿದ್ದರು.
ಕುಸ್ತಿಪಟುಗಳ ಜೊತೆ ಕ್ರೀಡಾ ಸಚಿವ ಸಭೆ ಯಶಸ್ವಿ, ಜೂ.15ರ ವರೆಗೆ ಪ್ರತಿಭಟನೆಗೆ ಬ್ರೇಕ್!
ಶೀಘ್ರ ಚಾರ್ಜ್ಶೀಟ್: ಬ್ರಿಜ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೆಲವೇ ದಿನಗಳಲ್ಲಿ ಕೋರ್ಚ್‌ಗೆ ಚಾಜ್‌ರ್‍ಶೀಟ್ ಸಲ್ಲಿಸಲಿದ್ದಾರೆ. ವಿವಿಧ ಆಯಾಮಗಳಲ್ಲಿ ವಿಚಾರಣೆ ಕೈಗೊಂಡಿರುವ ಪೊಲೀಸರು ಈವರೆಗೆ 180ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕುಸ್ತಿ ಫೆಡರೇಶನ್‌ನಲ್ಲಿ ಬ್ರಿಜ್ ಕುಟುಂಬಸ್ಥರದ್ದೇ ಪಾರುಪತ್ಯ!
ಭಾರತೀಯ ಕುಸ್ತಿ ಫೆಡರೇಶನ್ಗೆ ಇದೇ ತಿಂಗಳೊಳಗೆ ಚುನಾವಣೆ ನಡೆಯಲಿದೆ. 12 ವರ್ಷ ಅಧಿಕಾರ ಅವಧಿ ಪೂರೈಸಿರುವ ಬ್ರಿಜ್‌ಭೂಷಣ್, ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಲ್ಲ. ಅವರ ಕುಟುಂಬಸ್ಥರೂ ಯಾರೂ ಸ್ಪರ್ಧಿಸಬಾರದು ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೊತೆ ಸಭೆ ವೇಳೆ ಕುಸ್ತಿಪಟುಗಳು ಷರತ್ತು ಹಾಕಿದ್ದರು. ಇದಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿದೆ.
ಕುಸ್ತಿ ಫೆಡರೇಶನ್‌ನಲ್ಲಿ ಬ್ರಿಜ್ ಕುಟುಂಬಸ್ಥರದ್ದೇ ಪಾರುಪತ್ಯವಿದೆ. ಇತ್ತೀಚೆಗೆ ಒಲಿಂಪಿಕ್ಸ್ ಸಂಸ್ಥೆ ಕುಸ್ತಿ ಫೆಡರೇಶನ್‌ನ ಆಡಳಿತವನ್ನು ತಾತ್ಕಾಲಿಕ ಸಮಿತಿಗೆ ಒಪ್ಪಿಸುವ ವರೆಗೂ ಬ್ರಿಜ್‌ರ ಪುತ್ರ ಕರಣ್ ಭೂಷಣ್ ಡಬ್ಲ್ಯುಎಫ್‌ಐನ ಉಪಾಧ್ಯಕ್ಷರಾಗಿದ್ದರು. ಬ್ರಿಜ್‌ರ ಓರ್ವ ಅಳಿಯ ಆದಿತ್ಯ ಪ್ರತಾಪ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿದ್ದರೆ, ಮತ್ತೋರ್ವ ಅಳಿಯ ವಿಶಾಲ್ ಸಿಂಗ್ ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಏಷ್ಯಾಡ್ ಟ್ರಯಲ್ಸ್: ಸ್ಪರ್ಧೆಗೆ 45 ದಿನ ಸಮಯ ಕೇಳಿದ ರೆಸ್ಲರ್ಸ್
ನವದೆಹಲಿ: ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲ್ಲೇ ಕುಸ್ತಿಪಟುಗಳು ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಆದರೆ ತಮಗೆ ಸಿದ್ಧತೆಗಾಗಿ ಒಂದೂವರೆ ತಿಂಗಳ ಸಮಯಾವಕಾಶ ಕೇಳಿದ್ದಾರೆ. ಏಷ್ಯನ್ ಗೇಮ್ಸ್ ಚೀನಾದಲ್ಲಿ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯಲಿದ್ದು, ಇದಕ್ಕಾಗಿ ಕುಸ್ತಿಪಟುಗಳ ಆಯ್ಕೆಗೆ ಇದೇ ತಿಂಗಳಾಂತ್ಯಕ್ಕೆ ಆಯ್ಕೆ ಟ್ರಯಲ್ಸ್ ನಡೆಯುವ ಸಾಧ್ಯತೆ ಇದೆ.
ಆದರೆ ಭಜರಂಗ್, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಸೇರಿದಂತೆ ಪ್ರಮುಖರು ಕಳೆದ ವರ್ಷದ ಸೆಪ್ಟೆಂಬರ್ ಬಳಿಕ ಯಾವುದೇ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಟ್ರಯಲ್ಸ್ಗೂ ಮುನ್ನ ಕುಸ್ತಿ ಅಖಾಡಕ್ಕೆ ಮರಳಿ ಸಿದ್ಧತೆ ನಡೆಸಲು ಒಂದೂವರೆ ತಿಂಗಳ ಅಗತ್ಯವಿರುವುದಾಗಿ ತಿಳಿಸಿದ್ದಾರೆ. ಆದರೆ ಏಷ್ಯಾಡ್ಗೆ ಸ್ಪರ್ಧಿಗಳ ಹೆಸರು ನೀಡಲು ಜುಲೈ 15 ಅಂತಿಮ ದಿನವಾಗಿದ್ದು, ಅದಕ್ಕೂ ಮೊದಲೇ ಆಯ್ಕೆ ಟ್ರಯಲ್ಸ್ ನಡೆಸಬೇಕಾದ ಅನಿವಾರ್ಯತೆ ಇದೆ.