ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳ ಪ್ರತಿಭಟನೆ
ರಾಜಕೀಯ ಪಕ್ಷಗಳ ಬಳಿಕ ರೈತರ ಬೆಂಬಲ
ಪಂಜಾಬ್, ಹರ್ಯಾಣದಿಂದ ರೈತರ ದಂಡು
ನವದೆಹಲಿ(ಮೇ.09): ಲೈಂಗಿಕ ಕಿರುಕುಳ ಸೇರಿ ಅನೇಕ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ತಲೆದಂಡ ಹಾಗೂ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಹೊಸ ತಿರುವು ದೊರೆತಿದೆ. ಕುಸ್ತಿಪಟುಗಳ ಪ್ರತಿಭಟನೆಗೆ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೆಂಬಲದ ಬೆನ್ನಲ್ಲೇ ಇದೀಗ ಹಲವು ರಾಜ್ಯಗಳ ರೈತರೂ ಕೈಜೋಡಿಸಿದ್ದಾರೆ.
ಕುಸ್ತಿಪಟುಗಳ ಕೋರಿಕೆ ಹಿನ್ನೆಲೆಯಲ್ಲಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಸಂಯುಕ್ತ ಕಿಸಾನ್ ಮೋರ್ಚಾದ ನೂರಾರು ರೈತರು ಸೋಮವಾರ ದೆಹಲಿಗೆ ಆಗಮಿಸಿದ್ದಾರೆ. ಆದರೆ ಜಂತರ್ಮಂತರ್ಗೆ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅವರನ್ನು ತಡೆದಿದ್ದಾರೆ. ಇದನ್ನು ಲೆಕ್ಕಿಸದ ರೈತರು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಹೋರಾಟ ಹೈಜಾಕ್ ಆಗಿಲ್ಲ:
ಪ್ರತಿಭಟನೆಗೆ ವಿವಿಧ ಕಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಭಜರಂಗ್, ಪ್ರತಿಭಟನೆಯನ್ನು ಯಾರೂ ಹೈಜಾಕ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾವು ರಾಜಕೀಯ ಮಾಡಲು ಬಂದಿಲ್ಲ. ನಮಗೆ ನ್ಯಾಯ ಸಿಗಬೇಕು. ನಮ್ಮ ಹೋರಾಟಕ್ಕೆ ಯಾರು ಬೇಕಾದರೂ ಬೆಂಬಲಿಸಬಹುದು. ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಇದು ಕುಸ್ತಿಪಟುಗಳಿಗೆ ಸೀಮಿತವಾಗಿಲ್ಲ’ ಎಂದು ತಿಳಿಸಿದ್ದಾರೆ.
Wrestlers Protest ಒಂದೇ ಒಂದು ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ಭೂಷಣ್ ಸವಾಲು!
ಕುಸ್ತಿಪಟುಗಳು ಹಾಗೂ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ನಡುವಿನ ಹಗ್ಗಜಗ್ಗಾಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಸವಾಲು-ಪ್ರತಿಸವಾಲು ಮುಂದುವರಿಯುತ್ತಿದ್ದು, ಇದೀಗ ಭೂಷಣ್ ವಿಡಿಯೋ ಸಂದೇಶವೊಂದರ ಮೂಲಕ ಮತ್ತೊಂದು ಸವಾಲು ಹಾಕಿದ್ದಾರೆ. ಭಾನುವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಭೂಷಣ್, ‘ಪ್ರತಿಭಟನಾ ನಿರತ ಕುಸ್ತಿಪಟುಗಳು ತಾವು ಮಾಡಿರುವ ಆರೋಪಗಳ ಪೈಕಿ ಒಂದೇ ಒಂದು ಆರೋಪವನ್ನು ಸಾಬೀತು ಮಾಡಲಿ ಸಾಕು. ನಾನು ನೇಣು ಬಿಗಿದುಕೊಳ್ಳುತ್ತೇನೆ’ ಎಂದಿದ್ದಾರೆ.
ಬ್ರಿಜ್ ಬಂಧನಕ್ಕೆ ಮೇ 21ರ ಗಡುವು ಕೊಟ್ಟಕುಸ್ತಿಪಟುಗಳು!
ಬ್ರಿಜ್‌ಭೂಷಣ್‌ರನ್ನು ಮೇ 21ರೊಳಗೆ ಬಂಧಿಸದಿದ್ದರೆ ಪ್ರತಿಭಟನೆಯು ಉಗ್ರರೂಪ ಪಡೆಯಲಿದೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ. ಮುಂದಿನ ನಡೆ ಬಗ್ಗೆ ನಿರ್ಧರಿಸಲು ರಚಿಸಿದ್ದ 31 ಸದಸ್ಯರ ಸಮಿತಿಯ ಸಲಹೆಯ ಮೇರೆಗೆ ಕುಸ್ತಿಪಟುಗಳು ಈ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಕುಸ್ತಿಪಟುಗಳಿಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಬೆಂಬಲ ದೊರೆಯುತ್ತಿದ್ದು, ಭಾನುವಾರ 2000ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಯುತ್ತಿರುವ ಜಂತರ್-ಮಂತರ್‌ಗೆ ಭೇಟಿ ನೀಡಿದರು. ರೈತ ಮುಖಂಡ ರಾಕೇಶ್ ಟಿಕಾಯತ್ ಸೇರಿ ಹಲವರು ಪ್ರಮುಖರು ಭೇಟಿ ನೀಡಿ ಬ್ರಿಜ್‌ಭೂಷಣ್ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿನೇಶ್ ಫೋಗಾಟ್, ‘ಪ್ರತಿಭಟನೆಯನ್ನು ಯಾರೂ ಹೈಜ್ಯಾಕ್ ಮಾಡಿಲ್ಲ’ ಎಂದಿದ್ದಾರೆ.