ಐ-ಲೀಗ್: ಬೆಂಗಳೂರು ಎಫ್'ಸಿಗೆ ಮೊದಲ ಸೋಲುಣಿಸಿದ ಈಸ್ಟ್ ಬೆಂಗಾಳ್

By Suvarna Web DeskFirst Published Jan 22, 2017, 3:02 PM IST
Highlights

ನಾಲ್ಕು ಪಂದ್ಯಗಳಲ್ಲಿ ಬೆಂಗಳೂರಿಗೆ ಇದು ಮೊದಲ ಸೋಲಾಗಿದೆ.

ಕೋಲ್ಕತಾ(ಜ. 22): ಹಾಲಿ ಐ-ಲೀಗ್ ಚಾಂಪಿಯನ್ಸ್ ಬೆಂಗಳೂರು ಫುಟ್ಬಾಲ್ ಕ್ಲಬ್'ನ ಸತತ ನಾಲ್ಕನೇ ಗೆಲುವಿನ ಯತ್ನಕ್ಕೆ ಈಸ್ಟ್ ಬೆಂಗಾಳ್ ಬ್ರೇಕ್ ಹಾಕಿದೆ. ಇಂದು ಇಲ್ಲಿಯ ಬಾರಾಸತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಳ್ ತಂಡ 2-1 ಗೋಲುಗಳಿಂದ ಬೆಂಗಳೂರಿಗರನ್ನು ಸೋಲಿಸಿದರು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿದ್ದ ಬೆಂಗಳೂರಿಗೆ ಈ ಋತುವಿನಲ್ಲಿ ಮೊದಲ ಸೋಲಿನ ಕಹಿ ಸಿಕ್ಕಿತು. ಮಾಜಿ ಬೆಂಗಳೂರು ಆಟಗಾರ ರಾಬಿನ್ ಸಿಂಗ್ ಅವರು ಈಸ್ಟ್ ಬೆಂಗಾಳ್ ಪರ ವಿಜಯದ ಗೋಲು ಗಳಿಸಿದರು.

ಫೇವರಿಟ್ ಆಗಿ ಕಣಕ್ಕಿಳಿದ ಬಿಎಫ್'ಸಿ ತಂಡ ಆರಂಭದಲ್ಲಿ ನಿಧಾನಗತಿಯಾಗಿ ಆಡಿದರೂ ಹತ್ತು ನಿಮಿಷಗಳ ಬಳಿಕ ನಿಯಂತ್ರಣ ಸಾಧಿಸಿತು. ಸಿ.ಕೆ.ವಿನೀತ್ 23ನೇ ನಿಮಿಷದಲ್ಲಿ ಬೆಂಗಳೂರಿಗೆ ಮುನ್ನಡೆ ತಂದುಕೊಟ್ಟರು. ಕೇರಳ ಮೂಲದ ವಿನೀತ್'ಗೆ ಇದು ಈ ಸಾಲಿನಲ್ಲಿ 5ನೇ ಗೋಲಾಗಿದೆ. ಆದರೆ, ಐದು ನಿಮಿಷದ ಅಂತರದಲ್ಲಿ ಈಸ್ಟ್ ಬೆಂಗಾಳ್ ಪರ ಇವಾನ್ ಬುಕೆನ್ಯಾ ಗೋಲು ಗಳಿಸಿ ಸ್ಕೋರು ಸರಿಸಮ ಮಾಡಿದರು.

ಅದಾದ ಬಳಿಕ ಬೆಂಗಳೂರೇ ಹೆಚ್ಚು ನಿಯಂತ್ರಣ ಸಾಧಿಸಿದರೂ ಗೋಲು ಗಳಿಸಲು ಶಕ್ಯರಾಗಲಿಲ್ಲ. ಆದರೆ, ದ್ವಿತೀಯಾರ್ಧದ ಮಧ್ಯಭಾಗದಲ್ಲಿ ರಾಬಿನ್ ಸಿಂಗ್ ಅವರನ್ನು ಸಬ್ಸ್'ಟಿಟ್ಯೂಟ್ ಆಗಿ ಕಳುಹಿಸಿದ ಈಸ್ಟ್ ಬೆಂಗಾಳ್ ತಂತ್ರ ವರ್ಕೌಟ್ ಆಯಿತು. ಚುರುಕಿನ ದಾಳಿ ಸಂಘಟಿಸಿದ ರಾಬಿನ್ ಸಿಂಗ್ ಬೆಂಗಳೂರಿನ ರಕ್ಷಣಾ ಕೋಟೆಯನ್ನು ಸತತವಾಗಿ ಛಿದ್ರಗೊಳಿಸಿದರು. 79ನೇ ನಿಮಿಷದಲ್ಲಿ ಬಹುಮುಖ್ಯವಾದ ಗೋಲು ರಾಬಿನ್ ಅವರಿಂದ ಬಂದಿತು. ಇದು ಈಸ್ಟ್ ಬೆಂಗಾಳ್'ಗೆ ವಿಜಯದ ಗೋಲಾಯಿತು.

ನಾಲ್ಕು ಪಂದ್ಯಗಳಲ್ಲಿ ಬೆಂಗಳೂರಿಗೆ ಇದು ಮೊದಲ ಸೋಲಾಗಿದೆ. ಈಸ್ಟ್ ಬೆಂಗಾಳ್ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಂಪ್ ಮಾಡಿತು. ಬೆಂಗಳೂರು ಎಫ್'ಸಿ ಮೋಹನ್ ಬಾಗನ್ ನಂತರದ 3ನೇ ಸ್ಥಾನಕ್ಕೆ ಇಳಿದಿದೆ. ಮೊದಲ ಸೋಲಿನ ಕಹಿ ಉಂಡಿರುವ ಬಿಎಫ್'ಸಿ ಜ.27, ಶುಕ್ರವಾರದಂದು ಗೋವಾದಲ್ಲಿ ಚರ್ಚಿಲ್ ಬ್ರದರ್ಸ್ ತಂಡವನ್ನು ಎದುರಿಸಲಿದೆ.

click me!