
ಕ್ಯಾನ್ಬೆರಾ(ಜು.05): ಕ್ರಿಕೆಟ್ ಪ್ರೇಮಿಗಳಿಗೆ ಒಂದು ಬ್ರೇಕಿಂಗ್ ನ್ಯೂಸ್. ಇನ್ಮುಂದೆ ಆಸ್ಟ್ರೇಲಿಯಾ ಆಟಗಾರರು ಕ್ರಿಕೆಟ್ ಆಡುವುದಿಲ್ಲ. ಕಾಂಗರೂ ನಾಡಿನ ಒಟ್ಟು 230 ಪುರುಷ ಮತ್ತು ಮಹಿಳಾ ಕ್ರಿಕೆಟರ್ಸ್ ಕ್ರಿಕೆಟ್'ಗೆ ಬೆನ್ನು ಮಾಡಿ ಕೂತಿದ್ದಾರೆ. ಇದರೊಂದಿಗೆ ಇಡೀ ವಿಶ್ವ ಕ್ರಿಕೆಟ್ಗೆ ದಂಗು ಬಡಿಸಿದ್ದಾರೆ. ಅಷ್ಟಕ್ಕೂ ಆಸೀಸ್ ಆಟಗಾರರು ಹೀಗೆ ಮಾಡಲು ಕಾರಣವಾದರೂ ಏನೂ..? ಈ ಸ್ಟೋರಿ ನೋಡಿ.
ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ. ಬರೋಬ್ಬರಿ 230 ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್'ನ ಆಟಗಾರರು ಇನ್ಮುಂದೆ ಕ್ರಿಕೆಟ್ ಆಡಲ್ಲ ಎಂದು ಬಂಡಾಯವೆದ್ದಿದ್ದಾರೆ. ಕೇವಲ ಆಟಗಾರರಷ್ಟೆ ಅಲ್ಲ, ಮಹಿಳಾ ಕ್ರಿಕೆಟ್ ಆಟಗಾರ್ತಿಯರೂ ಬಂಡಾಯಕ್ಕೆ ಧ್ವನಿ ಎತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಪ್ರತಿಭಟನೆಗಿಳಿದ್ದಿದ್ದಾರೆ.
ಒಂದು ಕಾಲದಲ್ಲಿ ಕ್ರಿಕೆಟ್ ಜಗತನ್ನೇ ಆಳಿದ್ದ, 4 ಬಾರಿ ವಿಶ್ವ ಚಾಂಪಿಯನ್ನಗಳಾಗಿರುವ ಆಸ್ಟ್ರೇಲಿಯಾ ಸದ್ಯ ಗೊಂದಲದ ಗೂಡಾಗಿಬಿಟ್ಟಿದೆ. ಯಾರ ಮಾತನ್ನೂ ಯಾರೂ ಕೇಳುತ್ತಿಲ್ಲ. ಆಸ್ಟ್ರೇಲಿಯಾದ ಕ್ರಿಕೆಟ್ ಬೋರ್ಡ್ ವಿರುದ್ಧ ಆಸ್ಟ್ರೇಲಿಯಾದ ಆಟಗಾರರು ಗರಂ ಆಗಿದ್ದಾರೆ. ಕ್ರಿಕೆಟ್ ಬೋರ್ಡ್ ವಿರುದ್ಧ ಒಟ್ಟು 230 ಮಹಿಳಾ ಮತ್ತು ಪುರುಷ ಆಟಗಾರರು ಪ್ರತಿಭಟನೆಗಿಳಿದ್ದಾರೆ.
ಕ್ರಿಕೆಟ್ ಬೋರ್ಡ್ ವಿರುದ್ಧ ಆಟಗಾರರು ಗರಂ ಆಗಿರೋದ್ಯಾಕೆ.?: ಆಟಗಾರರನ್ನ ಕಡೆಗಣಿಸುತ್ತಿದ್ಯಾ ಕ್ರಿಕೆಟ್ ಬೋರ್ಡ್..?
ಆಸ್ಟ್ರೇಲಿಯಾದ ಕ್ರಿಕೆಟ್ ಬೋರ್ಡ್ ಮತ್ತು ಆಟಗಾರರ ನಡುವೆ ಫೈಟ್ ಶುರುವಾಗಿದೆ. ಆಟಗಾರರ ಸಂಬಳದ ವಿಚಾರವಾಗಿ ಬೋರ್ಡ್ ಮತ್ತು ಆಟಗಾರರ ನಡುವೆ ಮನಸ್ಥಾಪ ಹುಟ್ಟಿಕೊಂಡಿದೆ. ಕಳೆದ ಮಾರ್ಚ್ನಲ್ಲಿ ಕ್ರಿಕೆಟ್ ಬೋರ್ಡ್ ಸಂಬಳದ ವಿಚಾರವಾಗಿ ತೆಗೆದುಕೊಂಡಿರುವ ಒಂದು ನಿರ್ಧಾರ ಇಂದು ಆಟಗಾರರ ಕೋಪಕ್ಕೆ ಕಾರಣವಾಗಿದೆ. ಆ ನಿರ್ಧಾರದಿಂದ ಇಡೀ ದೇಶದ ಕ್ರಿಕೆಟ್ ಆಟಗಾರರಿಗೆ ಅನ್ಯಾಯವಾಗಲಿದೆ. ಹೀಗಾಗಿ ಅಂತಾರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ಆಟಗಾರರು ಒಂದಾಗಿ ಬೋರ್ಡ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.
ಆಟಗಾರರ ಸಂಬಳಕ್ಕೆ ಕತ್ತರಿ ಹಾಕಲು ಹೊರಟಿದೆ ಕ್ರಿಕೆಟ್ ಬೋರ್ಡ್
ಹೌದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರ ಸಂಬಳಕ್ಕೆ ಕತ್ತರಿ ಹಾಕಲು ಹೊರಟಿದೆ. ಇದುವರೆಗೂ ಪ್ರತೀ ವರ್ಷ ಕ್ರಿಕೆಟ್ ಆಸ್ಟ್ರೇಲಿಯಾ ಗಳಿಸುತ್ತಿದ್ದ ಆದಾಯದ ಶೇಕಡ 26ರಷ್ಟು ಭಾಗವನ್ನ ಅಂತಾರಾಷ್ಟ್ರೀಯ ಮತ್ತು ಪ್ರಥಮದರ್ಜೆಯ ಪುರುಷ ಹಾಗೂ ಮಹಿಳಾ ಆಟಗಾರರಿಗೆ ನೀಡ್ತಿತ್ತು. ಆದ್ರೆ ಕಳೆದ ಮಾರ್ಚ್ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರ ಪ್ರಕಾರ ಆಟಗಾರರ ಪರ್ಸಂಟೇಜ್'ಗೆ ಕತ್ತರಿ ಬೀಳಲಿದೆ.
ಟಾಪ್ 20 ಆಟಗಾರರಿಗೆ ಪರ್ಸಂಟೇಜ್..!: ಉಳಿದವರಿಗೆ ಕನಿಷ್ಠ ಸಂಬಳ
ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ಮಾಡಿರುವ ಹೊಸ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸುವ 20 ಆಟಗಾರರಿಗೆ ಮಾತ್ರ ಆದಾಯದಲ್ಲಿ ಇಂತಿಷ್ಟು ಪರ್ಸಂಟೇಜ್ ನೀಡಲಾಗುತ್ತೆ. ಉಳಿದ ಪ್ರಥಮ ದರ್ಜೆ ಆಟಗಾರರಿಗೆ ಇಂತಿಷ್ಟು ಸಂಬಳ ಎಂದು ಫಿಕ್ಸ್ ಮಾಡಲಿದೆ. ಇದರ ಪ್ರಕಾರ ಎಲ್ಲಾ ಆಟಗಾರರಿಗೂ ಅನ್ಯಾಯವಾಗಲಿದೆ.
ಗೊಂಲ ಇತ್ಯರ್ಥವಾಗುವವರೆಗೂ ಕ್ರಿಕೆಟ್ ಆಡಲ್ವಂತೆ..!
ಸದ್ಯ ಸಂಬಳದ ವಿಷಯವಾಗಿ ಆಸ್ಟ್ರೇಲಿಯಾದ ಎಲ್ಲಾ ಕ್ರಿಕೆಟ್ ಆಟಗಾರರೂ ಬಂಡಾಯವೆದ್ದಿದ್ದಾರೆ. ಇದು ಇತ್ಯರ್ಥವಾಗುವವರೆಗೂ ನಾವು ಕ್ರಿಕೆಟ್ ಆಡೋದಿಲ್ಲ ಎಂದು ಆಟಗಾರರು ತಿರ್ಮಾನಿಸಿದ್ದಾರೆ. ಹೀಗಾಗಿ ಜುಲೈ 12 ರಿಂದ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಜೂನಿಯರ್ ತಂಡದ ಅಸೈನ್ಮೆಂಟ್ಗೂ ಆಟಗಾರರು ಗೈರಾಗಲಿದ್ದಾರೆ. ಅಷ್ಟೇ ಅಲ್ಲ ಮುಂದಿನ ತಿಂಗಳು ನಡೆಯಬೇಕಿರುವ ಬಾಂಗ್ಲಾದೇಶ ಸರಣಿ ಹಾಗೂ ನಂತರ ನಡೆಯುವ ಆಶಸ್ ಸರಣಿಯೂ ತೂಗುಯ್ಯಾಲೆಯಲ್ಲಿದೆ.
ಮುಂದೇನು ಆಸ್ಟ್ರೇಲಿಯಾ ಕ್ರಿಕೆಟ್'ನ ಗತಿ..?
ಸದ್ಯ ಆಟಗಾರರ ಮತ್ತು ಬೋರ್ಡ್ ನಡುವಿನ ಕಿತ್ತಾಟದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಬಲಿಯಾಗುತ್ತಿದೆ. ಬೋರ್ಡ್;ಗೆ ಸದ್ಯ ಇರುವುದು ಎರಡೇ ದಾರಿ. ಒಂದು ಆಟಗಾರರ ಬೇಡಿಕೆಯಂತೆ ಈ ಹಿಂದಿನ ಪರ್ಸಂಟೇಜ್ ಲೆಕ್ಕದ ಸಂಬಳವನ್ನ ಮುಂದುವರಿಸೋದು. ಇಲ್ಲವಾದ್ರೆ ಹೊಸ ಕಿರಿಯ ಆಟಗಾರರನ್ನು ಹುಡುಕುವುದು. ಆದರೆ ಎಲ್ಲವೂ ಬಹುಬೇಗ ಸರಿಹೋಗಲಿ, ಮತ್ತೆ ಆಸ್ಟ್ರೇಲಿಯಾ ಕ್ರಿಕೆಟ್ ಘತವೈಭವ ಮರುಕಳಿಸಲಿ ಎಂಬುದೇ ಕ್ರಿಕೆಟ್ ಪ್ರಿಯರ ಅಭಿಪ್ರಾಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.