
ನವದೆಹಲಿ(ಡಿ.02): ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯ ತಪ್ಪು ಮಾಹಿತಿಯೊಂದು ಏಳು ಕ್ರಿಕೆಟಿಗರ ಕನಸನ್ನು ನುಚ್ಚು ನೂರು ಮಾಡಿದೆಯೆಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ವಯೋಮಿತಿ ನಿಯಮಗಳ ವಿಚಾರದಲ್ಲಿ ಬಂದ ತಪ್ಪು ಮಾಹಿತಿಯಿಂದಾಗಿ ಇದೇ ತಿಂಗಳು ನಡೆಯಲಿರುವ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಾಗಿ ಆಯ್ಕೆಯಾಗಿರುವ ಭಾರತ ತಂಡದಲ್ಲಿನ ಏಳು ಮಂದಿಯ ಆಯ್ಕೆಯನ್ನು ಅಮಾನ್ಯಗೊಳಿಸಿದೆ. ಇದರಿಂದಾಗಿ, ಏಳು ಆಟಗಾರರು ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.
ಏನಿದು ರಗಳೆ?:
ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನ ನಿಯಮಗಳ ಪ್ರಕಾರ, ತಂಡದಲ್ಲಿ ಸ್ಥಾನ ಪಡೆಯುವ ಆಟಗಾರ ಸೆಪ್ಟಂಬರ್ 1, 1998ಕ್ಕಿಂತಲೂ ಮುನ್ನ ಜನಿಸಿರಬಾರದು. ಆದರೆ, ಬಿಸಿಸಿಐಗೆ ಸಿಕ್ಕ ಮಾಹಿತಿಯಲ್ಲಿ ಅದು ಸೆಪ್ಟಂಬರ್ 1, 1997 ಎಂದಾಗಿದ್ದರಿಂದ ಅದರಂತೆ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಿಂದ ಇಂದು ಈ ಬಗ್ಗೆ ಸ್ಪಷ್ಟನೆ ಬಂದ ಹಿನ್ನೆಲೆಯಲ್ಲಿ, ಸರಣಿಗಾಗಿ ಶನಿವಾರ ಶ್ರೀಲಂಕಾಕ್ಕೆ ಪಯಣಿಸಬೇಕಿದ್ದ ಭಾರತ ತಂಡದಲ್ಲಿ ದಿಢೀರ್ ಬದಲಾವಣೆ ಮಾಡಿದ ಬಿಸಿಸಿಐ, ಅಮಾನ್ಯಗೊಂಡ ಏಳು ಆಟಗಾರರ ಬದಲಿಗೆ ಇತರರನ್ನು ಆಯ್ಕೆ ಮಾಡಿ ಶುಕ್ರವಾರವೇ ಹೊಸ ತಂಡವನ್ನು ಪ್ರಕಟಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ‘‘ತಂಡವು ಭಾರತದಲ್ಲಿದ್ದಾಗಲೇ ಈ ಬದಲಾವಣೆಯಾಗಿರುವುದು ಖುಷಿಯ ವಿಚಾರ. ಒಂದು ವೇಳೆ ತಂಡವು ಶ್ರೀಲಂಕಾ ತಲುಪಿ ಸರಣಿಯಲ್ಲಿ ಪಾಲ್ಗೊಂಡ ನಂತರ ಈ ಮಾಹಿತಿ ಸಿಕ್ಕಿದ್ದರೆ ಅದು ಮಹಾ ಪ್ರಮಾದವೆನಿಸುತ್ತಿತ್ತು’’ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.