
ಪರ್ತ್[ಡಿ.16]: ನಾಯಕ ವಿರಾಟ್ ಕೊಹ್ಲಿ ಶತಕ ಹಾಗೂ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಟೀಂ ಇಂಡಿಯಾ ಕೇವಲ 283 ರನ್’ಗಳಿಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್’ನಲ್ಲಿ 43 ರನ್’ಗಳ ಹಿನ್ನಡೆ ಅನುಭವಿಸಿದೆ.
ಎರಡನೇ ದಿನದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿದ್ದ ಭಾರತಕ್ಕೆ ಮೂರನೇ ದಿನ ನೇಥನ್ ಲಯನ್ ಮಾರಕವಾಗಿ ಪರಿಣಮಿಸಿದರು. ವೇಗದ ಪಿಚ್’ನಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಲಯನ್ ಭಾರತದ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಎರಡನೇ ದಿನ ಒಂದೇ ಒಂದು ವಿಕೆಟ್ ಕಬಳಿಸಲು ವಿಫಲವಾಗಿದ್ದ ಲಯನ್ ಇಂದು ತಾವೆಸೆದ ಮೊದಲ ಓವರ್’ನಲ್ಲೇ ರಹಾನೆ ವಿಕೆಟ್ ಪಡೆದು ಭಾರತಕ್ಕೆ ಮೊದಲ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ಪಂತ್, ಶಮಿ, ಇಶಾಂತ್ ಶರ್ಮಾ ಹಾಗೂ ಬುಮ್ರಾ ವಿಕೆಟ್ ಕಬಳಿಸುವ ಮೂಲಕ ಭಾರತದ ಇನ್ನಿಂಗ್ಸ್’ಗೆ ತೆರೆ ಎಳೆದರು.
ಪರ್ತ್ ಟೆಸ್ಟ್: ಶತಕದ ಬೆನ್ನಲ್ಲೇ ಕೊಹ್ಲಿ ಔಟ್, ಸೊನ್ನೆ ಸುತ್ತಿದ ಶಮಿ
ಇಂದು ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನದ 25ನೇ ಶತಕ ಸಿಡಿಸಿದರು. ಇನ್ನು ರೋಹಿತ್ ಶರ್ಮಾ ಬದಲು ತಂಡದಲ್ಲಿ ಸ್ಥಾನ ಪಡೆದ ಹನುಮ ವಿಹಾರಿ ಕೇವಲ 20 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಕೊನೆಯಲ್ಲಿ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ 36 ರನ್ ಸಿಡಿಸಿದರಾದರೂ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಮೂರನೇ ದಿನವೇ ಪಿಚ್ ಸ್ಪಿನ್ನರ್’ಗಳಿಗೆ ನೆರವಾಗುತ್ತಿರುವುದರಿಂದ ಈ ಪಂದ್ಯದಲ್ಲೂ ಬಹುತೇಕ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಭಾರತೀಯ ಬೌಲರ್’ಗಳು ಆಸ್ಟ್ರೇಲಿಯಾ ತಂಡವನ್ನು ಎಷ್ಟು ರನ್’ಗಳೊಳಗಾಗಿ ನಿಯಂತ್ರಿಸುತ್ತಾರೆ ಎನ್ನುವುದೇ ಸದ್ಯ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 326/10
ಮಾರ್ಕಸ್ ಹ್ಯಾರಿಸ್: 70
ಇಶಾಂತ್ ಶರ್ಮಾ: 41/4
ಭಾರತ: 283/10
ವಿರಾಟ್ ಕೊಹ್ಲಿ: 123
ನೇಥನ್ ಲಯನ್: 67/5
[* ವಿವರ ಅಪೂರ್ಣ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.