ಇಂದು 4ನೇ ಇಂಡೋ-ವಿಂಡೀಸ್ ಕದನ: ಕಮ್’ಬ್ಯಾಕ್ ಮಾಡುತ್ತಾ ಟೀಂ ಇಂಡಿಯಾ..?

By Web DeskFirst Published Oct 29, 2018, 12:02 PM IST
Highlights

5 ಪಂದ್ಯಗಳ ಸರಣಿ ಅಚ್ಚರಿಯ ರೀತಿಯಲ್ಲಿ 1-1ರಲ್ಲಿ ಸಮಗೊಂಡಿದ್ದು, ಇಂದು ಪಂದ್ಯ ವಿರಾಟ್ ಕೊಹ್ಲಿ ಪಡೆಯನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ದೂಡಿದೆ. ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ವಿಂಡೀಸ್, ಏಕದಿನ ಸರಣಿಯಲ್ಲಿ ಪುಟಿದೆದ್ದಿದ್ದು ಭಾರತವನ್ನು ಬೆಂಬಿಡದೆ ಕಾಡುತ್ತಿದೆ. 

ಮುಂಬೈ[ಅ.29]: ವಿಂಡೀಸ್ ವಿರುದ್ಧ ಸೋಮವಾರ ಇಲ್ಲಿನ ಬ್ರೇಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ, ಟೀಂ ಇಂಡಿಯಾ ತನ್ನ ತಂಡ ಸಂಯೋಜನೆಯನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಪುಣೆಯಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಐವರು ತಜ್ಞ ಬೌಲರ್’ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದು ಭಾರತದ ಕೈಹಿಡಿಯಲಿಲ್ಲ. ಅದರಿಂದಾಗಿ ಭಾರತ, ವಿಂಡೀಸ್ ವಿರುದ್ಧ ತವರಿನ ಸರಣಿಯಲ್ಲಿ ಮೊದಲ ಸೋಲು ಅನುಭವಿಸಬೇಕಾಯಿತು.

5 ಪಂದ್ಯಗಳ ಸರಣಿ ಅಚ್ಚರಿಯ ರೀತಿಯಲ್ಲಿ 1-1ರಲ್ಲಿ ಸಮಗೊಂಡಿದ್ದು, ಇಂದು ಪಂದ್ಯ ವಿರಾಟ್ ಕೊಹ್ಲಿ ಪಡೆಯನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ದೂಡಿದೆ. ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ವಿಂಡೀಸ್, ಏಕದಿನ ಸರಣಿಯಲ್ಲಿ ಪುಟಿದೆದ್ದಿದ್ದು ಭಾರತವನ್ನು ಬೆಂಬಿಡದೆ ಕಾಡುತ್ತಿದೆ. 

ಜಾಧವ್ ವಾಪಸ್: ಪುಣೆಯಲ್ಲಿ 43 ರನ್‌ಗಳ ಸೋಲಿನ ಬಳಿಕ, ವಿರಾಟ್ ಕೊಹ್ಲಿ ತಂಡದಲ್ಲಿ ಆಲ್ರೌಂಡರ್‌ಗಳ ಕೊರತೆ ಬಗ್ಗೆ ಮಾತನಾಡಿದ್ದರು. ಗಾಯದಿಂದ ಚೇತರಿಸಿ ಕೊಂಡಿರುವ ಕೇದಾರ್ ಜಾಧವ್ ತಂಡಕ್ಕೆ ಮರಳಿದ್ದು, ಈ ಪಂದ್ಯದಲ್ಲಿ ಆಡಲಿದ್ದಾರೆ. ಇದರೊಂದಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತಕ್ಕೆ ಅಗತ್ಯ ನೆರವು ದೊರೆಯಲಿದೆ. ಅಸ್ಥಿರ ಮಧ್ಯಮ ಕ್ರಮಾಂಕ ಹಾಗೂ ಧೋನಿಯ ಲಯದ ಕೊರತೆ ಭಾರತ ತಂಡವನ್ನು ಬಿಡದೆ ಕಾಡುತ್ತಿದೆ. 2019ರ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 15 ಪಂದ್ಯಗಳು ಮಾತ್ರ ಬಾಕಿ ಇದ್ದು, ಈ ಸಮಸ್ಯೆಗೆ ಉತ್ತರ ಸಿಗಲಿದೆಯೇ ಎನ್ನುವ ಅನುಮಾನ ಹೆಚ್ಚುತ್ತಲಿದೆ.

ಈಗಾಗಲೇ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಧೋನಿ, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಲಯ ಕಂಡುಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ. ಅಂಬಟಿ ರಾಯುಡು ಪುಣೆಯಲ್ಲಿ ಉತ್ತಮ ಆರಂಭ ಪಡೆದರೂ, ಕ್ರೀಸ್‌ನಲ್ಲಿ ಹೆಚ್ಚು ಕಾಲ ನೆಲೆಯೂರಿ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. ತಂಡ ಅವರ ಮೇಲೆ ನಂಬಿಕೆಯಿಟ್ಟು 4ನೇ ಕ್ರಮಾಂಕವನ್ನು ನೀಡಿದೆ. ಅದನ್ನು ಉಳಿಸಿಕೊಳ್ಳಬೇಕಿದ್ದರೆ ರಾಯುಡು ಸ್ಥಿರ ಪ್ರದರ್ಶನ ತೋರಬೇಕಿದೆ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ರಿಶಭ್ ಪಂತ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬೇಕಾದ ಅನಿವಾರ್ಯತೆ ಇದೆ. ಕಳೆದ ಪಂದ್ಯದಲ್ಲಿ ಕೊಹ್ಲಿ ಜತೆ ಮತ್ತಷ್ಟು ಸಮಯ ಕ್ರೀಸ್‌ನಲ್ಲಿ ಉಳಿದಿದ್ದರೆ ಭಾರತದ ಗೆಲುವು ಸಾಧ್ಯವಿತ್ತು. ಆದರೆ ಪಂತ್ ಆತುರದಲ್ಲಿ ವಿಕೆಟ್ ಕಳೆದು ಕೊಂಡರು. ತಮ್ಮ ಚೊಚ್ಚಲ ಏಕದಿನ ಸರಣಿಯಲ್ಲಿ ಪಂತ್, ದೊಡ್ಡ ಮೊತ್ತದೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಸತತ 3 ಶತಕ ಬಾರಿಸಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದಿರುವ ವಿರಾಟ್‌ರಿಂದ ಮತ್ತೊಂದು ಶತಕ ನಿರೀಕ್ಷೆ ಮಾಡಲಾಗುತ್ತಿದೆ. ಆದರೆ ನಾಯಕ ಕೊಹ್ಲಿ ತಮ್ಮ ತಂಡದಿಂದ ಸುಧಾರಿತ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಉತ್ತಮ ಲಯದಲ್ಲಿದ್ದಾರೆ. ಭುವನೇಶ್ವರ್ ಪುಣೆ ಏಕದಿನದಲ್ಲಿ ದುಬಾರಿಯಾದರೂ, ಈ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ಜೋಡಿಯಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ.

ವಿಂಡೀಸ್‌ಗೆ ಜಯದ ಕನಸು: ಶೈ ಹೋಪ್, ಶಿಮ್ರೊನ್ ಹೆಟ್ಮೇಯರ್ ಆಕರ್ಷಕ ಲಯದಲ್ಲಿದ್ದು, ಭಾರತೀಯ ಬೌಲರ್‌ಗಳನ್ನು ಮನಬಂದಂತೆ ಚೆಂಡಾಡುತ್ತಿದ್ದಾರೆ. ಪುಣೆ ಪಂದ್ಯದಲ್ಲಿ ತಂಡದ ಕೆಳ ಕ್ರಮಾಂಕ ನಿರ್ಣಾಯಕ ಕೊಡುಗೆ ನೀಡಿತ್ತು. ಇವರ ಜತೆ, ಹೇಮ್‌ರಾಜ್ ಚಂದ್ರಪಾಲ್, ಕೀರನ್ ಪೋವೆಲ್, ರೋವ್ಮನ್ ಪೋವೆಲ್‌ರಿಂದಲೂ ತಂಡ ಸ್ಫೋಟಕ ಆಟ ನಿರೀಕ್ಷೆ ಮಾಡುತ್ತಿದೆ. ಹಿರಿಯ
ಆಟಗಾರ ಮರ್ಲಾನ್ ಸ್ಯಾಮುಯಲ್ಸ್ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಆದರೆ ಬೌಲಿಂಗ್‌ನಲ್ಲಿ ಅವರು ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಪುಣೆಯಲ್ಲಿ ಭಾರತವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದು, ವಿಂಡೀಸ್ ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚಿಸಿದೆ. 

click me!